ಟಿಟಿಡಿ ಕೆಎಂಎಫ್‌ನ ದೊಡ್ಡ ಗ್ರಾಹಕ, ಸಚಿವರು ಪ್ರತಿಷ್ಠೆ ಬಿಟ್ಟು ಮಾತನಾಡಬೇಕು-ಸಿ.ಟಿ ರವಿ
ಚಿಕ್ಕಮಗಳೂರು, ಆಗಸ್ಟ್ 1: ಹಾಲಿನ ದರ, ಅಬಕಾರಿ ಸುಂಕ ಏರಿಕೆ ಮಾಡಿದ್ದಾರೆ. ಹೋಟೆಲ್ ತಿಂಡಿ ದರ ಒಳಗೊಂಡು ಏರಿಕೆ ಪರ್ವ ಕಾಣುತ್ತಿದೆ. ಬೆಲೆ ಏರಿಕೆಯ ಬರೆ ಎಳೆಯಿರಿ ಎಂದು ರಾಜ್ಯದ ಜನ ಅಧಿಕಾರ ಕೊಟ್ಟಿಲ್ಲ. ರಾಜ್ಯದ ಜನ ಅಧಿಕಾರ ಕೊಟ್ಟಿದ್ದು ನೀವು ಕೊಟ್ಟ ಗ್ಯಾರಂಟಿ ನಂಬಿ. ಬೆಲೆ ಏರಿಕೆಯ ಬರೆ ಎಳೆಯುತ್ತಾರೆ ಅಂತ ಯಾರು ಊಹಿಸಿರಲಿಲ್ಲ ಎಂದು ಮಾಜಿ ಶಾಸಕ ಸಿ.ಟಿ ರವಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ವೇಳೆ ಅಮಿತ್ ಶಾ ಹೇಳಿಕೆಯನ್ನು ತಪ್ಪಾಗಿ ವ್ಯಾಪಕ ಪ್ರಚಾರ ಮಾಡಿದರು. ಅಮುಲ್ ಮತ್ತು ನಂದಿನಿ ತಾಂತ್ರಿಕ ಸಹಕಾರ ಪಡೆದು ಕೆಲಸ ಮಾಡಬೇಕು. ರೈತರಿಗೆ ಸಹಾಯ ಮಾಡುವ ಸದುದ್ದೇಶದಿಂದ ಅಮಿತ್ ಶಾ ಸಲಹೆ ನೀಡಿದ್ದರು.ಇಡೀ ರಾಜ್ಯದಲ್ಲಿ ತಪ್ಪು ಅರ್ಥ ಬರುವ ರೀತಿ ಬಿಂಬಿಸುವ ಕೆಲಸ ಮಾಡಿದರು ಎಂದರು.

ತಿರುಪತಿಗೆ ನಂದಿನಿ ತುಪ್ಪ 50 ವರ್ಷದಿಂದ ಸರಬರಾಜು ಆಗುತ್ತಿದೆ. ಚುನಾವಣೆ ಮುಗಿದ ಮೇಲೆ ತಿರುಪತಿಗೆ ನಂದಿನಿ ತುಪ್ಪ ಸರಬರಾಜು ನಿಲ್ಲಿಸಲಾಗಿದೆ ಎಂದು ಕೇಳಿ ದುಃಖವಾಗಿದೆ. ತಿರುಪತಿ ಪ್ರಸಾದದೊಂದಿಗೆ ನಮ್ಮ ರಾಜ್ಯದ ನಂದಿನಿ ತುಪ್ಪ ಸೇರುತ್ತದೆ ಎನ್ನುವುದೇ ಹೆಮ್ಮೆ ಸಂಗತಿ. ಟಿಟಿಡಿ ನಮ್ಮ ದೊಡ್ಡ ಕಸ್ಟಮರ್ ಅವರನ್ನು ಕಳೆದುಕೊಳ್ಳಬಾರದು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
ಕೆಎಂಎಫ್ ಅಧ್ಯಕ್ಷರು, ಸಹಕಾರ ಸಚಿವರು, ಶಾಸಕ ಭೀಮ ನಾಯಕ್ ಪ್ರತಿಷ್ಠೆ ಬಿಟ್ಟು ಮಾತನಾಡಬೇಕು. ಟಿಟಿಡಿ ಜೊತೆ ಪ್ರತಿಷ್ಠೆ ಬಿಟ್ಟು ಮಾತನಾಡುವಂತೆ ಸಲಹೆ ನೀಡುತ್ತೇನೆ. 50 ವರ್ಷದ ವ್ಯವಹಾರಿಕ ಸಂಬಂಧವನ್ನು ಮುಂದುವರಿಸಬೇಕು. ಸಲಹೆ ಸ್ವೀಕಾರ ಮಾಡದೆ ಇದ್ದರೆ ಹಾಲು ಉತ್ಪಾದಕರಿಗೆ ನಷ್ಟವಾಗುತ್ತದೆ ಎಂದು ಸಿ.ಟಿ. ರವಿ ಹೇಳಿದ್ದಾರೆ.
ದೆಹಲಿಯಲ್ಲಿ ಆಫೀಸ್ ಕ್ಲೋಸ್ ಮಾಡೋದಷ್ಟೇ ಬಾಕಿ
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಬಗ್ಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ರೇಸ್ ಎನ್ನುವ ಪ್ರಶ್ನೆಯೇ ಇಲ್ಲ. ಕಾಂಪಿಟೇಶನ್ ಇದ್ದಾಗ ರೇಸ್‌ನಲ್ಲಿ ಇರಬೇಕಾಗುತ್ತದೆ. ರೇಸ್‍ನಲ್ಲಿದ್ದಾರೆಂದು ಭಾವಿಸಬೇಡಿ, ನಾನು ರೇಸ್‌ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಯಾವಾಗ ಯಾರು ಸೂಕ್ತ ಎನ್ನುವುದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ. ಬಿಜೆಪಿಯಲ್ಲಿ ಯಾವುದೂ ಶಾಶ್ವತವಲ್ಲ, ಯಾವಾಗ-ಯಾರೂ ಸೂಕ್ತ ಎನ್ನುವುದು ಪಕ್ಷ ನಿರ್ಧರಿಸುತ್ತದೆ. ದೆಹಲಿ ಜವಾಬ್ದಾರಿ ಮುಗಿದಿದೆ. ಸಭೆ ಇರುವಾಗ ಮಾತ್ರ ದೆಹಲಿಯಲ್ಲಿ ಇರುತ್ತೇನೆ. ಉಳಿದಂತೆ ಜವಾಬ್ದಾರಿ ನೀಡಿದ್ದ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೆ.ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಪಕ್ಷ ಮುಕ್ತನನ್ನಾಗಿಸಿದೆ . ದೆಹಲಿಯಲ್ಲಿ ಯಾವುದೇ ಕೆಲಸ ಇಲ್ಲ, ಆಫೀಸ್ ಕ್ಲೋಸ್ ಮಾಡೋದಷ್ಟೆ ಬಾಕಿ ಇದೆ ಎಂದರು.












Click it and Unblock the Notifications