ಭಾರತ್ ಬಂದ್: ಚಿಕ್ಕಮಗಳೂರಿನ ರಸ್ತೆಯಲ್ಲಿಯೇ ಕ್ರಿಕೆಟ್ ಆಡಿ ಪ್ರತಿಭಟನೆ
Recommended Video

ಚಿಕ್ಕಮಗಳೂರು, ಸೆಪ್ಟೆಂಬರ್ 10: ತೈಲ ಬೆಲೆ ಏರಿಕೆ ಖಂಡಿಸಿ ನಡೆಯುತ್ತಿರುವ ಭಾರತ್ ಬಂದ್‌ಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು ಆಟೋ, ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿವೆ.
ಬೆಳಿಗ್ಗೆ ಓಡಾಡುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳು ಮತ್ತು ಆಟೋಗಳನ್ನು ತಡೆದ ಕಾಂಗ್ರೆಸ್ ಕಾರ್ಯಕರ್ತರು ಸಂಚಾರ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ವಿವಿಧೆಡೆ ಪ್ರತಿಭಟನೆಗಳನ್ನು ನಡೆಸಿ ಬಿಜೆಪಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಬಂದ್ ನಡುವೆಯೇ ಕಾರ್ಯನಿರ್ವಹಿಸುತ್ತಿದ್ದ ಆಜಾದ್ ಪಾರ್ಕ್‌ನಲ್ಲಿರುವ ಅಂಚೆ ಕಚೇರಿಯನ್ನು ಕರವೇ ಕಾರ್ಯಕರ್ತರು ಬಲವಂತವಾಗಿ ಮುಚ್ಚಿಸಿದರು.

ಅಂಚೆ ಕಚೇರಿ ಸಿಬ್ಬಂದಿ ಹಿಂದಿನ ಬಾಗಿಲಿನಿಂದ ಬಂದು ಕಾರ್ಯನಿರ್ವಹಿಸುತ್ತಿದ್ದರು. ಕರವೇ ಯುವ ಸೇನೆ ಜಿಲ್ಲಾಧ್ಯಕ್ಷ ನೂರುಲ್ಲಾ ಖಾನ್ ನೇತೃತ್ವದಲ್ಲಿ ಕಾರ್ಯಕರ್ತರು ಏಕಾಏಕಿ ಒಳಗೆ ನುಗ್ಗಿ ಅಂಚೆ ಕಚೇರಿ ಮುಚ್ಚಿಸಲು ಮುಂದಾದರು.
ನಗರ ಪೊಲೀಸ್ ಠಾಣಾ ಪಿಎಸ್‌ಐ ರಘು ಬರುತ್ತಿರುವುದನ್ನು ಕಂಡ ಕಾರ್ಯಕರ್ತರು ಕೂಡಲೇ ಅಲ್ಲಿಂದ ನಿರ್ಗಮಿಸಿದರು.
ಬಳಿಕ, ಅಂಚೆ ಕಚೇರಿ ಸಿಬ್ಬಂದಿ ಬಾಗಿಲು ಮುಚ್ಚಿ ಮನೆಗೆ ಮರಳಿದರು.

ಪ್ರತಿಭಟನೆ ನಡೆಸುತ್ತಿದ್ದ ಕರವೇ ಯುವಸೇನೆ ಮತ್ತು ಸಿಪಿಐ ಕಾರ್ಯಕರ್ತರು ಹನುಮಂತಪ್ಪ ವೃತ್ತದಲ್ಲಿ ಕ್ರಿಕೆಟ್ ಆಡಿದರು.
ರಸ್ತೆಯ ಮಧ್ಯದಲ್ಲಿ ಕ್ರಿಕೆಟ್ ಆಡುವ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಿದರು. ಸಿಪಿಐ ನಾಯಕಿ ರಾಧಾ ಸುಂದರೇಶ್ ಬ್ಯಾಟಿಂಗ್ ಮಾಡಿದರೆ, ಕರವೇ ಯುವಸೇನೆ ಕಾರ್ಯಕರ್ತರು ಬೌಲಿಂಗ್ ಮಾಡಿದರು.












Click it and Unblock the Notifications