ಬಾಳೂರು: ನಕ್ಸಲ್ ಪೀಡಿತ ಪ್ರದೇಶ ಹೈಟೆಕ್ ಪೊಲೀಸ್ ಠಾಣೆಯಾಗಿ ಪರಿವರ್ತನೆ ಆಗಿದ್ದು ಹೀಗೆ, ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ
ಚಿಕ್ಕಮಗಳೂರು, ಜೂನ್, 13: ಚಿಕ್ಕಮಗಳೂರು ಜಿಲ್ಲೆಯ ಬಾಳೂರು ಪೊಲೀಸ್ ಠಾಣೆ ಈ ಮೊದಲು ನಕ್ಸಲ್ ಪೀಡಿತ ಪ್ರದೇಶದ ಸ್ಟೇಷನ್ ಆಗಿತ್ತು. ಆದ್ದರಿಂದ ಸಿಬ್ಬಂದಿಗಳು ಇಲ್ಲಿಂದ ವರ್ಗಾವಣೆ ಆದರೆ ಸಾಕು ಎಂದು ಕಾದು ಕುಳಿತಿರುತ್ತಿದ್ದರು. ಆದರೆ ಇದೀಗ ಈ ಠಾಣೆ ರಾಜ್ಯಕ್ಕೆ ಮಾದರಿಯಾಗಿದ್ದು, ಇಲ್ಲಿಗೆ ಬರಲು ಪೊಲೀಸರೇ ನಾ ಮುಂದು, ತಾ ಮುಂದು ಎಂದು ಕಾಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ಈ ಠಾಣೆ ಪ್ರಸಿದ್ಧಿಯಾಗಿದೆ.
ಕಾಫಿನಾಡು ಚಿಕ್ಕಮಗಳೂರು ಅಂದರೆ ಥಟ್ ಅಂತಾ ನೆನಪಾಗುವುದೇ ದಟ್ಟಡವಿ, ಮುಗಿಲೆತ್ತರದ ಬೆಟ್ಟಗುಡ್ಡಗಳು. ಹಾಗೂ ಅರಣ್ಯವನ್ನು ನಾಚಿಸುವಂತಹ ಕಾಫಿ ತೋಟಗಳು ನೋಡುಗರನ್ನು ಸೆಳೆದೇಬಿಡುತ್ತವೆ. ಅದರಲ್ಲೂ ಸದಾ ತಣ್ಣನೆಯ ಗಾಳಿ, ಮಳೆ ಮಲೆನಾಡಿನ ಪ್ರಕೃತಿ ಸೌಂದರ್ಯವನ್ನೇ ಬದಲಾಯಿಸಿಬಿಡುತ್ತದೆ. ಆದ್ದರಿಂದ ಇಲ್ಲಿನ ಪೊಲೀಸ್ ಠಾಣೆಯ ಸಿಬ್ಬಂದಿಗಳು ವರ್ಗಾವಣೆ ಆಗುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಬಾಳೂರು ಪೊಲೀಸ್ ಠಾಣೆಯ ಪ್ರದೇಶ ಒಂದು ಕಾಲದಲ್ಲಿ ನಕ್ಸಲ್ ಪೀಡಿತ ಸ್ಟೇಷನ್ ಆಗಿತ್ತು. ಆದರೆ ಈಗ ಆ ಸ್ಟೇಷನ್ ಲಕ-ಲಕ ಹೊಳೆಯುತ್ತಿದೆ. ಸುತ್ತಲೂ ಹಚ್ಚಹಸಿರಿನ ದಟ್ಟ ಕಾಡು, ಇದರ ಮಧ್ಯದಲ್ಲಿ ಇರುವುದೇ ಪೊಲೀಸ್ ಠಾಣೆ. ಇನ್ನು ಈ ಠಾಣೆಗೆ ಸುಂದರ ರೂಪ ಕೊಟ್ಟವರೇ ಪಿ.ಎಸ್.ಐ. ಪವನ್ ಕುಮಾರ್ ಆಗಿದ್ದಾರೆ.
ಅಲ್ಲದೆ ದಾನಿಗಳು ಹಾಗೂ ಸಿಬ್ಬಂದಿಗಳ ನೆರವಿನಿಂದ ಈಗ ಈ ಠಾಣೆಗೆ ಹೈಟೆಕ್ ಸ್ಪರ್ಶ ಸಿಕ್ಕಿದೆ ಎನ್ನಲಾಗಿದೆ. ದೂರು ನೀಡಲು ಬಂದ ದೂರುದಾರರಿಗೆ ವಿಶ್ರಾಂತಿ ಪಡೆಯಲು ಮಿನಿ ಪಾರ್ಕ್ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ. ಇನ್ನು ಠಾಣೆಯ ಒಳಾಂಗಣಕ್ಕೆ ಹೈಟೆಕ್ ಸ್ಪರ್ಶದ ಜೊತೆ ಸಕಲ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ಇದೀಗ ಬಾಳೂರು ಠಾಣಾ ವ್ಯಾಪ್ತಿಯ ಜನರಿಗೆ ಭಯದ ಕಲ್ಪನೆ ದೂರ ಮಾಡಿದಂತಾಗಿದ್ದು, ಈ ಠಾಣೆ ಇದೀಗ ಜನರ ಮೆಚ್ಚುಗೆಗೆ ಕಾರಣವಾಗಿದೆ. ಈ ಜನಸ್ನೇಹಿ ಪೊಲೀಸ್ ಠಾಣೆ ಕನಸಿಗೆ ಸ್ಥಳೀಯರು ಕೈಜೋಡಿಸಿದ್ದರಿಂದ ನಕ್ಸಲ್ ಪೀಡಿತ ಪ್ರದೇಶದ ಠಾಣೆಗೆ ಹೈಟೆಕ್ ಸ್ಪರ್ಶ ಸಿಕ್ಕಂತಾಗಿದೆ.
ಅಷ್ಟೇ ಅಲ್ಲದೆ ಸಿಬ್ಬಂದಿಗಳು ವಿಶ್ರಾಂತಿಯ ವೇಳೆ ಆಟ ಆಡಲು ಟೆನಿಸ್ ಹಾಗೂ ಶೆಟಲ್ ಕಾಕ್ ಕೋರ್ಟ್, ಸುಂದರ ಪಾರ್ಕ್ ಸೇರಿದಂತೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ಇಲ್ಲಿ ಕಲ್ಪಿಸಲಾಗಿದೆ. ಬಾಳೂರು ಪೊಲೀಸ್ ಠಾಣೆಯ ಪಿ.ಎಸ್.ಐ ಪವನ್ ಕುಮಾರ್ ವಿವಿಧ ದಾನಿಗಳಿಂದ ಹಾಗೂ ಸಹ ಸಿಬ್ಬಂದಿಗಳ ನೆರವನಿಂದ ಠಾಣೆಗೆ ಹೈಟೆಕ್ ಸ್ಪರ್ಶ ನೀಡಿದ್ದಾರೆ. ಈ ಮೂಲಕ ಠಾಣೆಯನ್ನು ಆಕರ್ಷಣೀಯ ಕೇಂದ್ರ ಬಿಂದುವಾಗಿಸಿದ್ದಾರೆ.
ಪಿ.ಎಸ್.ಐ ಪವನ್ ಕುಮಾರ್ ಅವರ ಈ ಉತ್ತಮ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಇತ್ತೀಚಿಗೆ ಮಲ್ಲಂದೂರು ಪೊಲೀಸ್ ಠಾಣೆಗೂ ಕೂಡ ಅಲ್ಲಿನ ಪಿಎಸ್ಐ ರವೀಶ್ ಇದೇ ರೀತಿ ಹೈಟೆಕ್ ಸ್ಪರ್ಶ ನೀಡಿದ್ದರು. ಇನ್ನು ಎಸ್.ಪಿ.ಉಮಾ ಪ್ರಶಾಂತ್ ಎರಡು ಠಾಣೆಯ ಪಿ.ಎಸ್.ಐ.ಗಳ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಒಟ್ಟಾರೆ ಈ ಹಿಂದೆ ಬಾಳೂರು ಪೊಲೀಸ್ ಠಾಣೆಯಿಂದ ವರ್ಗಾವಣೆಯಾಗಲು ಬಯಸುತ್ತಿದ್ದ ಸಿಬ್ಬಂದಿಗಳು ಈಗ ಠಾಣೆಗೆ ಬರಲು ಮನಸ್ಸು ಮಾಡುತ್ತಿದ್ದಾರೆ. ಠಾಣೆಯ ಪರಿಸರ ಹಾಗೂ ಸಿಬ್ಬಂದಿಗಳ ಕಾರ್ಯಕ್ಷಮತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗೆ ಈ ಠಾಣೆ ಇದೀಗ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಠಾಣೆಗೆ ಹೈಟೆಕ್ ಸ್ಪರ್ಶ ನೀಡಿದರೆ ಸಾಲದು. ನ್ಯಾಯ-ನೀತಿ-ಸತ್ಯದ ಪರ ಕೆಲಸದ ಮೂಲಕ ಅಲ್ಲಿನ ಪೊಲೀಸರು ಜನರ ಮನಸ್ಸನ್ನು ಗೆದ್ದು ಠಾಣೆಗೆ ಹೈಟೆಕ್ ಸ್ಪರ್ಶ ನೀಡಬೇಕಿದೆ ಎನ್ನುವುದು ಇಲ್ಲಿನ ಸ್ಥಳೀಯರ ಮಾತಾಗಿದೆ.












Click it and Unblock the Notifications