Police v/s Lawyer; ವಕೀಲರು, ಪೊಲೀಸರ ಗಲಾಟೆ, ಸಿಐಡಿಗೆ ತನಿಖೆಗೆ
ಚಿಕ್ಕಮಗಳೂರು, ಡಿಸೆಂಬರ್ 04; ಚಿಕ್ಕಮಗಳೂರು ನಗರದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿರುವ ವಕೀಲನ ಮೇಲೆ ಪೊಲೀಸರ ಹಲ್ಲೆ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದೆ. ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ವಕೀಲರು ತೀರ್ಮಾನಿಸಿದ್ದಾರೆ.
ವಕೀಲನ ಮೇಲೆ ಪೊಲೀಸರು ಹಲ್ಲೆ ನಡೆಸಿದ ಪ್ರಕರಣದಲ್ಲಿ ಚಿಕ್ಕಮಗಳೂರು ಪೊಲೀಸರು ಮತ್ತು ವಕೀಲರ ನಡುವೆ ಜಟಾಪಟಿ ನಡೆಯುತ್ತಿದೆ. ಹೆಲ್ಮೆಟ್ ಹಾಕದ ಕಾರಣ ಲಾಯರ್ ಪ್ರೀತಮ್ ಮೇಲೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂಬುದು ಆರೋಪ.

ಗುರುವಾರ ತಡರಾತ್ರಿ ವಕೀಲರು ಪ್ರತಿಭಟನೆ ನಡೆಸಿದಾಗ ಚಿಕ್ಕಮಗಳೂರು ಎಸ್ಪಿ ವಕೀಲರ ಪ್ರತಿಭಟನೆಗೆ ಮಣಿದು 6 ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಿದರು. ಪೊಲೀಸರನ್ನು ಬಂಧಿಸಬೇಕು ಎಂದು ವಕೀಲರು ಪಟ್ಟು ಹಿಡಿದಿದ್ದಾರೆ. ಆದರೆ ಪೊಲೀಸರನ್ನು ಬಂಧಿಸಬಾರದು ಎಂದು ಪೊಲೀಸರು ಕುಟುಂಬದವರೊಂದಿಗೆ ಪ್ರತಿಭಟನೆ ನಡೆಸಿದರು.
ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ, "ಈ ಘಟನೆ ಸಂಬಂಧ 6 ಜನ ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶ ಮಾಡಲಾಗಿದೆ,. ಪ್ರಕರಣ ಸಂಬಂಧ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಓರ್ವ ಪಿಎಸ್‌ಐ, ಓರ್ವ ಎಎಸ್‌ಐ, ಓರ್ವ ಹೆಡ್ ಕಾನ್ಸ್‌ಟೇಬಲ್, ಮೂವರು ಕಾನ್ಸ್‌ಟೇಬಲ್ ಅಮಾನತು ಮಾಡಲಾಗಿದೆ" ಎಂದು ಹೇಳಿಕೆ ನೀಡಿದ್ದರು.
ಶನಿವಾರ ಪೊಲೀಸರ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಿತು. ನಗರದ ರಸ್ತೆ ಬಂದ್ ಮಾಡಿ, ಹಲವು ಠಾಣೆಗಳಲ್ಲಿ ಕೆಲಸಗಳನ್ನು ನಿಲ್ಲಿಸಿ ಪೊಲೀಸರು ಪ್ರತಿಭಟನೆ ನಡೆಸಿದರು. ಎಫ್ಐಆರ್ ದಾಖಲಾಗಿರುವ ಪೊಲೀಸರನ್ನು ಬಂಧಿಸಬಾರದು ಎಂದು ಒತ್ತಾಯಿಸಿದರು.
ಸಿಐಡಿ ತನಿಖೆಗೆ ಆದೇಶ; ವಕೀಲರು ಮತ್ತು ಪೊಲೀಸರ ನಡುವಿನ ಸಂಘರ್ಷ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವ ಮೂಲಕ ಸಂಘರ್ಷಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಮುಂದಾಗಿದೆ.
ಈ ಸಂಬಂಧ ಭಾನುವಾರ ರಾತ್ರಿ ಚಿಕ್ಕಮಗಳೂರು ನಗರದಲ್ಲಿ ಮಾತನಾಡಿದ ಐಜಿಪಿ ಚಂದ್ರಗುಪ್ತ, "ವಕೀಲರ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಪ್ರಕರಣ ಸಂಬಂಧ 6 ಮಂದಿ ಪೊಲೀಸರನ್ನು ಅಮಾನತು ಮಾಡಿದ್ದು, ತನಿಖೆ ಮುಂದುವರಿದಿದೆ" ಎಂದರು.
"ಈ ಪ್ರಕರಣ ಸಂಬಂಧ ಪೊಲೀಸ್ ಸಿಬ್ಬಂದಿ ದೂರು ನೀಡಿದ್ದು, ವಕೀಲ ಪ್ರೀತಮ್ ಸೇರಿದಂತೆ 6 ಮಂದಿ ವಕೀಲರ ವಿರುದ್ಧವೂ ದೂರು ದಾಖಲಾಗಿದೆ. ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿರುವುದರಿಂದ ಘಟನೆಯಲ್ಲಿ ನೊಂದವರಿಗೆ ನ್ಯಾಯಸಿಗಲಿದೆ" ಎಂದು ತಿಳಿಸಿದರು.
ಬೈಕ್‍ನಲ್ಲಿ ತೆರಳುತ್ತಿದ್ದ ವಕೀಲ ಪ್ರೀತಮ್ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬುದು ಆರೋಪ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಪಿಎಸ್‍ಐ ಸೇರಿದಂತೆ 6 ಮಂದಿ ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ಅಮಾನತ್ತುಗೊಳಿಸಿದ್ದಾರೆ.
ಶುಕ್ರವಾರ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ಸಾವಿರಾರು ವಕೀಲರು ಬೃಹತ್ ಪ್ರತಿಭಟಡನೆ ನಡೆಸಿ ಆರೋಪಿ ಪೊಲೀಸ್ ಸಿಬ್ಬಂದಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಆದರೆ ಪೊಲೀಸ್ ಸಿಬ್ಬಂದಿ ಬಂಧಿಸದಂತೆ ಪೊಲೀಸರು ಒತ್ತಾಯಿಸಿದ್ದಾರೆ.












Click it and Unblock the Notifications