ಚಿಕ್ಕಮಗಳೂರು: ಮೂರು ದಿನಗಳಿಂದ ಕಾಫಿ ತೋಟದಲ್ಲಿ ಬೀಡುಬಿಟ್ಟ ಕಾಡಾನೆ ಹಿಂಡು
ಚಿಕ್ಕಮಗಳೂರು, ಅಕ್ಟೋಬರ್ 17: ಕಳೆದ ಮೂರು ದಿನಗಳಿಂದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಳೆಮೂಡಿಗೆರೆಯ ಕಾಫಿ ತೋಟವೊಂದರಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಕಾಫಿ ತೋಟವನ್ನು ಸಂಪೂರ್ಣ ನಾಶ ಮಾಡಿವೆ. ಒಂದಲ್ಲಾ, ಎರಡಲ್ಲ, ಬರೋಬ್ಬರಿ 23 ಕಾಡಾನೆಗಳು ತೋಟಕ್ಕೆ ನುಗ್ಗಿ ದಾಂಧಲೆಯನ್ನೇ ಸೃಷ್ಟಿಸಿವೆ.
ಹಳಸೆ ಕೃಷ್ಣೇಗೌಡ ಎಂಬುವರ ಕಾಫಿತೋಟದಲ್ಲಿ ಕಾಡಾನೆಗಳು ಮೊಕ್ಕಾಂ ಹೂಡಿವೆ. ಹಿಂಡು ಹಿಂಡಾಗಿ ಬಂದಿರುವ ಕಾಡಾನೆಗಳನ್ನು ಮರಳಿ ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಎಸಿಎಫ್, ಆರ್ಎಫ್ಒ ಸೇರಿದಂತೆ 30ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಗಳ ಚಲನವಲನ ಗಮನಿಸಿ, ಅವುಗಳನ್ನು ಮರಳಿ ಕಾಡಿಗಟ್ಟಲು ಪ್ರಯತ್ನಿಸುತ್ತಿದ್ದಾರೆ.
ಕಾಡಾನೆಗಳ ಆರ್ಭಟಕ್ಕೆ ಕಾಫಿ, ಮೆಣಸು, ಅಡಿಕೆ, ಬಾಳೆ ಸೇರಿದಂತೆ ಇತರೆ ಬೆಳೆಗಳು ನಾಶವಾಗಿವೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯೆಸಲೂರು ಭಾಗದಿಂದ ಈ ಹಿಂಡು ಹಿಂಡು ಕಾಡಾನೆಗಳು ಮೂಡಿಗೆರೆ ಕಡೆ ಮುಖ ಮಾಡಿವೆ. ಹೀಗೆ ಬರುವ ಮಾರ್ಗ ಮಧ್ಯೆ ಮೂಡಿಗೆರೆ ತಾಲೂಕಿನ ಕೆಲ್ಲೂರು, ದುಂಡುಗ, ಹಳಸೆ, ಕುನ್ನಹಳ್ಳಿ, ಕೃಷ್ಣಾಪುರ ಸೇರಿದಂತೆ ಹತ್ತಾರು ಗ್ರಾಮಗಳ ಕಾಫಿತೋಟಗಳಲ್ಲಿ ಬೆಳೆ ನಾಶಗೊಳಿಸಿವೆ.

ಕಾಡಾನೆಗಳಿಂದ ಬೆಳೆಗಳು ನಾಶವಾಗಿರುವ ಚಿಂತೆ ಒಂದೆಡೆಯಾದರೆ, ಮತ್ತೊಂದೆಡೆ ಈ ಕಾಡಾನೆ ಹಿಂಡು ಏನು ಅನಾಹುತ ಮಾಡುತ್ತದೋ ಎಂಬ ಭೀತಿಯೂ ಮನೆ ಮಾಡಿದೆ.












Click it and Unblock the Notifications