ಕಾಫಿನಾಡಿನಲ್ಲಿ ₹6 ಕೋಟಿ ಮೌಲ್ಯದ ಚಿನ್ನ ವಶ: ಶಿವಮೊಗ್ಗದಲ್ಲಿ ಕಂತೆ ಕಂತೆ ಹಣ ಪತ್ತೆ
ಚಿಕ್ಕಮಗಳೂರು, ಏಪ್ರಿಲ್ 1: ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ಚುನಾವಣಾಧಿಕಾರಿಗಳು ನಡೆಸಿದ ಭರ್ಜರಿ ಕಾರ್ಯಚರಣೆಯೊಂದರಲ್ಲಿ ಸಮರ್ಪಕವಾದ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 17 ಕೆಜಿ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ.
ತರೀಕೆರೆ ತಾಲೂಕಿನ ಸಿ.ಕೆ.ಹಳ್ಳಿ ಗ್ರಾಮದಲ್ಲಿ ವಾಹವೊಂದನ್ನು ತಪಾಸಣೆ ನಡೆಸಿದ ವೇಳೆ ವಾಹನದಲ್ಲಿ 6.44 ಕೋ.ರೂ. ಮೌಲ್ಯದ 17 ಕೆಜಿ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಇರುವುದು ಪತ್ತೆಯಾಗಿದೆ.

ಈ ಆಭರಣಗಳಿಗೆ ವಾಹನದಲ್ಲಿದ್ದವರ ಬಳಿ ಸೂಕ್ತ ದಾಖಲೆಗಳು ಇಲ್ಲದ ಪರಿಣಾಮ ವಾಹನ ಸಹಿತ ಚಿನ್ನಾಬೆಳ್ಳಿಯ ಆಭರಣಗಳನ್ನು ಚುನಾವಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ. ಘಟನೆ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ರಮೇಶ್, ಎಸ್‌ಪಿ ಉಮಾಪ್ರಶಾಂತ್, ಜಿಪಂ ಸಿಇಒ ಪ್ರಭು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಚಿಕ್ಕಮಗಳೂರು ಪೊಲೀಸರ ಕಾರ್ಯಾಚರಣೆ: 9 ಕೆ.ಜಿ ಚಿನ್ನ ಜಪ್ತಿ
ಇನ್ನು ಕೆಲ ದಿನಗಳ ಹಿಂದೆ ದಾಖಲೆ ಇಲ್ಲದ 2 ಕೋಟಿ 30 ಲಕ್ಷ ಬೆಲೆ ಬಾಳುವ 9 ಕೆ.ಜಿ. 300 ಗ್ರಾಂ ಚಿನ್ನವನ್ನು ಚಿಕ್ಕಮಗಳೂರು ಪೊಲೀಸರು ವಶ ಪಡಿಸಿಕೊಂಡಿದ್ದರು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ದಾಖಲೆ ಇಲ್ಲದೆ ಪಿಕಪ್‌ನಲ್ಲಿ ಸಾಗಿಸುತ್ತಿದ್ದ 2. 30 ಕೋಟಿ ರೂ. ಮೌಲ್ಯದ ಚಿನ್ನವನ್ನು ಪೊಲೀಸರು ಜಪ್ತಿ ಮಾಡಿದ್ದರು.
ಶಿವಮೊಗ್ಗದಲ್ಲಿ 1.40 ಕೋಟಿ ರೂಪಾಯಿ ಪತ್ತೆ
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ದಾಖಲೆಯಿಲ್ಲದೆ ಸಾಗಾಣೆ ಮಾಡುತ್ತಿದ್ದ ಕೋಟ್ಯಾಂತರ ರೂಪಾಯಿ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚೆಕ್ ಪೋಸ್ಟ್ ನಲ್ಲಿ, ಬುಲೆರೋ ಕಾರಿನಲ್ಲಿ 1.40 ಕೋಟಿ ರೂ. ಪತ್ತೆಯಾಗಿದೆ.
ಇನ್ನು ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದ 20 ಲಕ್ಷ ರೂ. ಪತ್ತೆಯಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಕಾರವಾರದಲ್ಲಿ 5.25 ಲಕ್ಷ ರೂ ನಗದು ವಶ
ಕಾರವಾರ: ಗೋವಾದಿಂದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5.25 ಲಕ್ಷ ರೂಪಾಯಿ ನಗದನ್ನು ಕಾರವಾರದ ಮಾಜಾಳ ಚೆಕ್‌ಪೋಸ್ಟ್ ಬಳಿ ಚಿತ್ತಾಕುಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕದ್ರಾ ಸಿಪಿಐ ಗೋವಿಂದರಾಜ ದಾಸರಿ, ಕದ್ರಾ ಪಿಎಸ್ಐಗಳಾದ ಉದ್ದಪ್ಪ ಅಶೋಕ ಧರೆಪ್ಪನವರ, ರವೀಂದ್ರ ಬಿರಾದಾದ, ಸಿಬ್ಬಂದಿಗಳಾದ ಮುಕುಂದ ನಾಯ್ಕ, ಸಂತೋಷ ಉರ್ಮಿ, ರಾಧಾ ಗೌಡ, ಸುರೇಶ ಹಾರಗೊಪ್ಪ ಹಾಗೂ ಜಿಲ್ಲಾ ಸಂಕ್ಯಾ ಸಂಗ್ರಹಣ ಅಧಿಕಾರ ಕಛೇರಿ ಅಧಿಕಾರಿಗಳ ಸಮ್ಮುಖದಲ್ಲಿ ಜಂಟಿಯಾಗಿ ಗೋವಾದಿಂದ ಆಗಮಿಸುತ್ತಿದ್ದ ವಾಹನ ತಪಾಸಣೆ ನಡೆಸಿದಾಗ ಯಾವುದೇ ಅಧಿಕೃತ ದಾಖಲೆ ಇಲ್ಲದೇ 5 ಲಕ್ಷ 25 ಸಾವಿರ ನಗದು ಹಣವನ್ನು ಕಾರಿನಲ್ಲಿ ಸಾಗಿಸುತ್ತಿರುವುದು ಪತ್ತೆಯಾಗಿದೆ.
ಗೋವಾ ಕಾಣಕೋಣದ ಭಗತವಾಡದ ಸತ್ಯೇಂದ್ರ ಭಗತ ಎಂಬುವವರು ಈ ಹಣವನ್ನು ಸಾಗಿಸುತ್ತಿದ್ದರು. ದಾಖಲೆ ಇಲ್ಲದ ಕಾರಣ ನಗದು ಹಣ ಹಾಗೂ ಹಣ ಸಾಗಾಟಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಈತನ ವಿರುದ್ಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.












Click it and Unblock the Notifications