ಕುತೂಹಲಕ್ಕಾಗಿ ಸೇವನೆ ಮಾಡುವುದು ಚಟವಾಗುತ್ತದೆ: ವಿದ್ಯಾರ್ಥಿಗಳಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಜಾಗೃತಿ
ಚಿಕ್ಕಬಳ್ಳಾಪುರ, ಮೇ 31: ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಈ ವರ್ಷ 'ನಮಗೆ ಆಹಾರ ಬೇಕು-ತಂಬಾಕು ಅಲ್ಲ' ಎಂಬ ಘೋಷಣೆಯೊಂದಿಗೆ ಆಚರಿಸಲಾಗುತ್ತಿದ್ದು, ತಂಬಾಕು ಸೇವನೆಯಿಂದ ಯುವ ಪೀಳಿಗೆಯನ್ನು ರಕ್ಷಿಸುವುದು ಹೇಗೆ ಎಂಬ ಬಗ್ಗೆ ಯೋಜನೆಗಳನ್ನು ರೂಪಿಸಿವುದುರ ಜೊತೆಗೆ ಅವರಲ್ಲಿ ಈ ಬಗ್ಗೆ ಅರಿವು ಮೂಡಿಸಿ, ತಂಬಾಕು ನಿಯಂತ್ರಣದ ವಿಚಾರದಲ್ಲಿ ನೂತನ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಮಾಜ ಒಟ್ಟಾಗಿ ಪಣ ತೊಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು ತಿಳಿಸಿದರು.
ಬುಧವಾರ ಎಸ್.ಜೆ.ಸಿ.ಐ.ಟಿ ಕಾಲೇಜಿನ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಂದಿ ವೈದ್ಯಕೀಯ ಕಾಲೇಜು ಮತ್ತು ಶಿಕ್ಷಣ ಸಂಸ್ಥೆ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕೋಶ ಹಾಗೂ ಎಸ್.ಜೆ.ಸಿ.ಐ.ಟಿ ಕಾಲೇಜು, ಚಿಕ್ಕಬಳ್ಳಾಪುರ ಇವರ ವತಿಯಿಂದ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತಂಬಾಕು ಸೇವನೆಯು ಮನುಷ್ಯನ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಹಾಗೂ ಮನುಷ್ಯನಿಗೆ ಎಷ್ಟೇ ಹಣವಿದ್ದರೂ ಸಹ ವಾಸಿ ಮಾಡಿಕೊಳ್ಳಲು ಸಾಧ್ಯವಾಗದೇ ಇರುವಂತಹ ಕಾಯಿಲೆಗಳು ಬರುವುದರಿಂದ ಯಾರೂ ಸಹ ತಂಬಾಕು ಸೇವನೆಯನ್ನು ಮಾಡಬಾರದೆಂದು ಹಾಗೂ ತಮ್ಮ ಕುಟುಂಬದವರೂ ಸಹ ತಂಬಾಕು ಸೇವನೆ ಮಾಡದ ರೀತಿಯಲ್ಲಿ ಅರಿವು ಮೂಡಿಸಲು ತಿಳಿಸಿದರು.
ತಂಬಾಕು ಸೇವನೆಯಿಂದ ಸಮಾಜದಲ್ಲಿನ ವ್ಯಕ್ತಿಗಳು ಮತ್ತು ಕುಟುಂಬಗಳ ಮೇಲೆ ಆರ್ಥಿಕ ಮತ್ತು ಸಾಮಾಜಿಕ ಹೊರೆಗೂ ಕಾರಣವಾಗುತ್ತದೆ. ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಲ್ಲಿ ಜಾಗೃತಿ ಮೂಡಿಸುವುದು ಹಾಗೂ ಜಾಗತೀಕ ಮಟ್ಟದಲ್ಲಿ ತಂಬಾಕಿನ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಪರಿಣಾಮಕಾರಿ ನೀತಿಗಳು ಮತ್ತು ಕಾನೂನುಗಳನ್ನು ಉತ್ತೇಜಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ ಅವರು ಮಾತನಾಡಿ, ತಂಬಾಕು ಮನುಷ್ಯನಿಗಷ್ಟೇ ಅಲ್ಲದೇ ಪರಿಸರಕ್ಕೂ ಸಹ ಮಾರಕವಾಗಿದ್ದು, ಬೀಡಿ/ಸಿಗರೇಟು ಉತ್ಪನ್ನಗಳಲ್ಲಿ 4000 ಕ್ಕೂ ಹೆಚ್ಚು ರಾಸಾಯನಿಕ ವಸ್ತುಗಳಿದ್ದು, ಸಿಗರೇಟು ಸೇವಿಸಿ ಬಿಸಾಡುವ ತುಂಡುಗಳಲ್ಲಿರುವ ನಿಕೋಟಿನ್, ಲೆಡ್ ಹಾಗೂ ಪ್ಲಾಸ್ಟಿಕ್ ನಂತಹ ಪದಾರ್ಥಗಳು ನೀರಿನಲ್ಲಿ ಸೇರಿ ಜಲಚರಗಳು ನಾಶವಾಗುತ್ತಿವೆ. ಪರಿಸರದಲ್ಲಿ ಇಂಗಾಲದ ಡೈ ಆಕ್ಸೈಡ್ ಹೆಚ್ಚಾಗಿ ಹವಾಮಾನ ವೈಪರೀತ್ಯವಾಗಲು ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ಹದಿಹರೆಯದವರು ಹೆಚ್ಚಾಗಿ ತಂಬಾಕು ವ್ಯಸನಕ್ಕೆ ತುತ್ತಾಗಿ ಬಾಯಿ ಕ್ಯಾನ್ಸರ್, ಗ್ಯಾಂಗ್ರಿನ್ ಹಾಗೂ ಶ್ವಾಸಕೋಶದ ಕ್ಯಾನ್ಸರ್ ನಂತಹ, ಹಲವಾರು ರೀತಿಯ ಕಾಯಿಲೆಗಳು ಬರುತ್ತಿದ್ದು, ಪ್ರತಿ ದಿನ ನಮ್ಮ ಬಳಿಗೆ 4 ರಿಂದ 5 ಜನ ಬಾಯಿಹುಣ್ಣಿನಂತಹ ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ತಂಬಾಕು ತ್ಯಜಿಸಲು ಇಚ್ಛಿಸುವವರು ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ನೆರವು, ಆಪ್ತ ಸಮಾಲೋಚನೆ ಹಾಗೂ ನಿಕೋಟಿನ್ ಗಮ್ಸ್ ಚಿಕಿತ್ಸೆಯನ್ನು ನೀಡುತ್ತಿದ್ದು ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಲು ತಿಳಿಸಿದರು.

ಬಿ.ಜಿ.ಎಸ್, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ವೈ.ಆರ್.ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹದಿಹರೆಯದ ವಿದ್ಯಾರ್ಥಿಗಳು ಕುತೂಹಲಕ್ಕಾಗಿ ಸೇವನೆ ಮಾಡುವುದು ಮುಂದಿನ ದಿನಗಳಲ್ಲಿ ಚಟವಾಗಿ ಪರಿಣಮಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಹಿಡಿತದಲ್ಲಿರಿಸಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಸ್. ಮಹೇಶ್ ಕುಮಾರ್, ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಾದ ಡಾ.ಎಂ.ಎಲ್.ಮಂಜುನಾಥ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಹರೀಶ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುಳ, ಸರ್ಕಾರೇತರ ಸಂಸ್ಥೆಯ ಸಿಬ್ಬಂದಿ ಹಾಗೂ ಎಸ್.ಜೆ.ಸಿ.ಐ.ಟಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.












Click it and Unblock the Notifications