ನಾವು ಅದಕ್ಕೂ ಸಿದ್ದ, ಇದಕ್ಕೂ ಸಿದ್ದ: ಚಿಕ್ಕಬಳ್ಳಾಪುರದಲ್ಲಿ ಕುಮಾರಸ್ವಾಮಿ
Recommended Video
ಚಿಕ್ಕಬಳ್ಳಾಪುರ, ನ 26: "ಉಪ ಚುನಾವಣೆಯ ಬಳಿಕ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾದರೆ ಅದನ್ನೂ ಎದುರಿಸಲು ಜೆಡಿಎಸ್ ಪಕ್ಷ ಸಿದ್ದವಾಗಿದೆ" ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲೆಯ ನಂದಿ ಗ್ರಾಮದಲ್ಲಿ ಮಂಗಳವಾರ ಜೆಡಿಎಸ್ ಅಭ್ಯರ್ಥಿ ಎ.ರಾಮಕೃಷ್ಣ ಪರ ಮತಯಾಚನೆ ನಡೆಸುತ್ತಾ, "ಪದೇ ಪದೇ ಸಿದ್ದರಾಮಯ್ಯ ಮಧ್ಯಂತರ ಚುನಾವಣೆಗೆ ಕಾಂಗ್ರೆಸ್ ಸಿದ್ದವಾಗಿದೆ ಎಂದು ಹೇಳುತ್ತಾರೆ. ಉಪ ಚುನಾವಣೆಯ ಫಲಿತಾಂಶ ಬರುವವರೆಗೂ ಏನನ್ನೂ ಹೇಳಕ್ಕೆ ಆಗುವುದಿಲ್ಲ" ಎಂದು ಕುಮಾರಸ್ವಾಮಿ ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ಸಿಗೆ ಅನುಕೂಲ ಮಾಡಲು ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, "ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ" ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

"ಅನರ್ಹ ಶಾಸಕ ಸುಧಾಕರ್ ನನ್ನ ಮೇಲೆ ಎಷ್ಟೇ ಆರೋಪ ಮಾಡಿದರೂ ಕ್ಷೇತ್ರದ ಜನರಲ್ಲಿ ನನ್ನ ಮೇಲೆ ಇರುವ ವಿಶ್ವಾಸವನ್ನು ಕಿತ್ತುಕೊಳ್ಳುಲು ಸಾಧ್ಯವಿಲ್ಲ. ನಾವು ಉಪಚುನಾವಣೆಗೂ ಸಿದ್ದರಿದ್ದೇವೆ, ಮಧ್ಯಂತರ ಚುನಾವಣೆ ನಡೆದರೆ ಅದಕ್ಕೂ ಸಿದ್ದರಿದ್ದೇವೆ" ಎಂದು ಕುಮಾರಸ್ವಾಮಿ ಹೇಳಿದರು.
"ಉಪ ಚುನಾವಣೆ ಅಕಸ್ಮಿಕವಾಗಿ ಬಂದಿಲ್ಲ. ಬಿಜೆಪಿ ನಡೆಸಿದ ಅನೈತಿಕ ರಾಜಕಾರಣದಿಂದ ಬಂದಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಒಂದು ದಿನವು ಸಂತೋಷವಾಗಿರಲಿಲ್ಲ. ಆರಂಭದಿಂದಲೂ ನನ್ನನ್ನು ಕೆಳಗಿಳಿಸುವ ಪ್ರಯತ್ನ ನಡೆಸಲಾಯಿತು" ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
"ರೈತರ ಸಾಲ ಮನ್ನಾ ಮಾಡುವ ಉದ್ದೇಶದಿಂದ ಎಲ್ಲವನ್ನು ಸಹಿಸಿಕೊಂಡು ಬಂದೆ. ಅಧಿಕಾರ ನಶ್ವರ, ಆದರೆ ಪ್ರತಿ ಬಾರಿಯು ಕೂಡ ಅಧಿಕಾರಕ್ಕೆ ಬರುವ ಸಲುವಾಗಿ ಕುರಿ, ಮೇಕೆ, ಆಡುಗಳನ್ನು ಖರೀದಿಸುವ ರೀತಿಯಲ್ಲಿ ಶಾಸಕರನ್ನು ಬಿಜೆಪಿಯವರು ಖರೀದಿ ಮಾಡಿದರು" ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಮತಯಾಚನೆ ವೇಳೆ, ಶಾಸಕರಾದ ಜೆ.ಕೆ ಕೃಷ್ಣಾರೆಡ್ಡಿ, ನಿಸರ್ಗ ನಾರಾಯಣಸ್ವಾಮಿ, ಜೆಡಿಎಸ್ ಅಭ್ಯರ್ಥಿ ಎ.ರಾಮಕೃಷ್ಣ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜಿ.ಪಂ ಸದಸ್ಯ ಮುನೇಗೌಡ, ಮುನಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications