Waqf Dispute: ಚಿಂತಾಮಣಿಗೂ ಹಬ್ಬಿದ ವಕ್ಫ್ ವಿವಾದ: ಎರಡು ಗುಂಪಿನ ನಡುವೆ ಗಲಾಟೆ!
ಚಿಂತಾಮಣಿ ನವೆಂಬರ್ 16: ರಾಜ್ಯದಾದ್ಯಂತ ಹಬ್ಬಿರುವ ವಕ್ಫ್ ವಿವಾದ ಚಿಂತಾಮಣಿಯಲ್ಲೂ ಕಿಚ್ಚು ಹೊತ್ತಿಸಿದೆ. ಜಮೀನಿನ ಹಕ್ಕು ಸಂಬಂಧ ರೈತರು ಮತ್ತು ಜಾಮೀಯ ಮಸೀದಿ ಗುಂಪಿನ ನಡುವೆ ಮಾತಿನ ಚಕಮಕಿ ನಡೆದ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ನಡೆದಿದೆ. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಹೌದು.. ನಗರದ 31ನೇ ವಾರ್ಡ್ ನ ತಿಮ್ಮಸಂದ್ರದ ಸರ್ವೆ ನಂಬರ್ 13 ರ 2.19 ಎಕರೆ ಮತ್ತು ಸರ್ವೆ ನಂಬರ್ 20 2 ಎಕರೆ ಜಮೀನು ವಿವಾದದ ಕೇಂದ್ರವಾಗಿದೆ. ಜಮೀನು ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಜಾಮಿಯಾ ಮಸೀದಿ ಪದಾಧಿಕಾರಿಗಳು ಜಮೀನಿನಲ್ಲಿ ನಾಮಫಲಕ ಅಳವಡಿಸಿದರೆ, ರೈತರ ಗುಂಪು ನಾಮಫಲಕ ಕಿತ್ತು ಹಾಕಿ ಉಳುವಿಗೆ ಮುಂದಾಗಿದೆ. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ಹಂತಕ್ಕೆ ತಲುಪಿತ್ತು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಜಾಗದಲ್ಲಿ ಯಥಾ ಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಹಾಗೆಯೇ ಉಳುಮೆಗೆ ಬಳಸಿದ್ದ ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ದೂರು ದಾಖಲು:
ಚಿಂತಾಮಣಿಯ ಜಾಮಿಯಾ ಮಸೀದಿಯ ಇನಾಯತ್ ಎಂಬುವರು ವಕ್ಫ್ ಆಸ್ತಿ ದ್ವಂಸಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ನಾಗೇಶ್, ನಗರಸಭೆ ಮಾಜಿ ಸದಸ್ಯ ರಾಮಮೂರ್ತಿ, ವೆಂಕಟರೆಡ್ಡಿ, ಶಿವರೆಡ್ಡಿ ಮತ್ತಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.
ಸ್ಥಳದಲ್ಲೇ ಖಾಕಿ ಠಿಕಾಣಿ:
ಚಿಂತಾಮಣಿ ನಗರದ ದೊಡ್ಡಪೇಟೆಯ ಜಾಮೀಯ ಮಸೀದಿ ಕಮಿಟಿ ಪದಾಧಿಕಾರಿಗಳು ಜಮೀನನ್ನು ಸರ್ವೆ ಹಾಗೂ ಹದ್ದುಬಸ್ತು ಮಾಡಿಸಿ ಜಮೀನಿನ ಸುತ್ತಲೂ ಕಲ್ಲಿನ ಕೂಚು, ಮುಳ್ಳು ತಂತಿ, ಬೇಲಿ ಹಾಕಿಸಿ ವಖ್ಫ್ ಆಸ್ತಿ ಎಂದು ಈ ಹಿಂದೆಯೇ ನಾಮ ಫಲಕ ಹಾಕಿಸಿದ್ದು ಇದರ ನಡುವೆ ಮೊದಲಿನಿಂದಲೂ ವಿವಾದಿತ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ 31ನೇ ವಾರ್ಡಿನ ನಾಗೇಶ್ ಹಾಗೂ ಶ್ರೀರಾಮ ರೆಡ್ಡಿ ಕುಟುಂಬ ಗುರುವಾರ ತಂತಿ ಹಾಗೂ ಬೇಲಿ ಕಿತ್ತು ಹಾಕಿದ್ದಾರೆ.

ಗುರುವಾರ ತಂತಿ ಬೇಲಿ ಕಿತ್ತು ಹಾಕಿದ್ದಾರೆ, ಇದು ಗಲಾಟೆಗೆ ಪ್ರಮುಖ ಕಾರಣವಾಗಿದ್ದು ಪೊಲೀಸರು ಮಧ್ಯಪ್ರವೇಶಿಸಿ ಉದ್ವಿಗ್ನ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ ಪಿ ಮುರುಳಿಧರ್, ಇನ್ಸ್ಪೆಕ್ಟರ್ ಶಿವರಾಜ್ ನೇತೃತ್ವದಲ್ಲಿ ಸಿಬ್ಬಂದಿ ಸ್ಥಳದಲ್ಲಿ ಠಿಕಾಣಿ ಹೂಡಿದ್ದು ಬಿಗಿ ಭದ್ರತೆ ಕೈಗೊಂಡಿದ್ದಾರೆ, ತಹಶೀಲ್ದಾರ್ ಸುದರ್ಶನ್ ಯಾದವ್ ಜಮೀನು ಯತಾ ಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ವಿವಾದಿತ ಪ್ರಕರಣಗಳು:
ವಖ್ಫ್ ಜಾಗದ ವಿವಾದ ಪ್ರಕರಣಗಳು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಹಿಂದೆ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಹುಟ್ಟೂರಿಗೆ ಸಮೀಪದಲ್ಲಿರುವ ಕಂದವಾರ ಗ್ರಾಮದ ಸರಕಾರಿ ಶಾಲೆಯನ್ನು ವಖ್ಫ್ ಜಾಗ ಎಂದು ಹೇಳಲಾಗಿತ್ತು.
ನಂತರ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪಹಣಿಯಲ್ಲಿ ತಿದ್ದುಪಡಿ ಮಾಡಿ ಶಿಕ್ಷಣ ಇಲಾಖೆಗೆ ಒಪ್ಪಿಸಲಾಗಿದೆ ಶಿಡ್ಲಘಟ್ಟ ತಾಲೂಕಿನಲ್ಲಿ ಬಿಳ್ಳೂಟಿ ಆಂಜನೇಯ ಸ್ವಾಮಿ ದೇವಾಲಯದ ಜಾಗವನ್ನು ವಖ್ಫ್ ಗೆ ಸೇರಿಸಿದ್ದು ಎಂಬುದಾಗಿ ಹೇಳುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.
ನ್ಯಾಯಾಲಯದಲ್ಲಿ ವಿವಾದ?
ವಿವಾದಿತ ಜಾಗ ಪಕೀರ ಇನಾಂತಿ ಮತ್ತು ಮಕ್ಕಾನ್ ಇನಾಂತಿ ಜಮೀನಾಗಿದೆ. ಪ್ರಸ್ತುತ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿದೆ. ಹಲವು ವರ್ಷಗಳಿಂದ ಅನುಭವದಲ್ಲಿದ್ದ ರೈತರು ನಮ್ಮ ಜಮೀನು ಎಂದು ವಾದಿಸುತ್ತಿದ್ದಾರೆ, ರಾಜ್ಯ ವಖ್ಫ್ ಬೋರ್ಡ್ ಜಮೀನು ಎಂದು ಜಾಮಿಯಾ ಮಸೀದಿಯ ವಾದ.
ಈ ಹಿಂದೆ ಜಮೀನಿನ ಬಗ್ಗೆ ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿ ಮತ್ತು ಇತರ ನ್ಯಾಯಾಲಯಗಳಲ್ಲಿ ವಿವಾದದ ವಿಚಾರಣೆ ನಡೆದು ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ವಿವಾದಿತ ಸ.ನಂಬರ್ 13 ರ 2.19 ಎಕರೆ ಮತ್ತು ಸರ್ವೇ ನಂಬರ್ 20 ರ 2 ಎಕರೆ ಜಮೀನು ಮೈಸೂರು ರಾಜ್ಯ ಮಂಡಳಿಯ ದಿನಾಂಕ 28/03/1968 ರ ಅಧಿಸೂಚನೆಯಂತೆ ವಖ್ಫ್ ಸ್ವತ್ತು ಎಂದು ಉಲ್ಲೇಖವಾಗಿದೆ. ಸತ್ತಾರ್ ಸಾಬ್ ಆವರ ಹೆಸರಿಗೆ ( ಸ್ವೀಕರಿಸಿದ ಸಂಖ್ಯೆ ಎಂಡಬ್ಲಯೂಬಿ ( 19 )111964 ದಿನಾಂಕ 21/07/1965 ರಂದು ) ಅಧಿಸೂಚನೆ ಹೊರಡಿಸಿ, ವಖ್ಫ್ ಅಸ್ತಿ ಎಂದು ತೀರ್ಪು ನೀಡಲಾಗಿದೆ. ಇದನ್ನು ಪ್ರಶ್ನಿಸಿ ರೈತರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.












Click it and Unblock the Notifications