ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ- ಬಂದೂಕು ಇದ್ದರೆ ಠಾಣೆಗೆ ಒಪ್ಪಿಸಿ: ಡಿಸಿ ಪಿ. ಎನ್. ರವೀಂದ್ರ ಖಡಕ್ ಎಚ್ಚರಿಕೆ!
ಚಿಕ್ಕಬಳ್ಳಾಪುರ ಮಾರ್ಚ್ 20: ಲೋಕಸಭೆ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ಮಾದರಿ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಿಂದ ಹಲವು ಆದೇಶಗಳನ್ನು ಹೊರಡಿಸಲಾಗಿದೆ. ಸಾರ್ವಜನಿಕರು ಈ ಆದೇಶಗಳನ್ನು ತಪ್ಪದೇ ಪಾಲಿಸಬೇಕೆಂದು ಸೂಚನೆ ನೀಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಚುನಾವಣಾಧಿಕಾರಿ, ಪಿ.ಎನ್.ರವೀಂದ್ರ, ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರುಗಳನ್ನು ದಾಖಲಿಸಲು ಕೇಂದ್ರ ಚುನಾವಣೆ ಆಯೋಗದ ಸಿ-ವಿಜಿಲ್ ಸಿಟಿಜನ್ ಆ್ಯಪ್ ಅನ್ನು ಬಳಸಬಹುದು. ಮೊಬೈಲ್‌ನ ಪ್ಲೇ-ಸ್ಟೋರ್‌ನಲ್ಲಿ ಲಭ್ಯವಿರುವ ಸಿ-ವಿಜಿಲ್ ಸಿಟಿಜನ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಂಡು ದೂರುಗಳನ್ನು ದಾಖಲು ಮಾಡಲು ಚುನಾವಣೆ ಆಯೋಗವು ಮತದಾರರು, ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ.

ಸಿ-ವಿಜಿಲ್ ಸಿಟಿಜನ್ ಆ್ಯಪ್‌ನಲ್ಲಿ ದಾಖಲಾಗುವ ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. ಸಾರ್ವಜನಿಕರು ಚುನಾವಣೆ ದೂರುಗಳು ಇದ್ದಲ್ಲಿ, ದೂರಿನ ಮಾಹಿತಿಯನ್ನು https://cvigil.eci.gov.in/ ನ ವೆಬ್‌ಸೈಟ್ ನಲ್ಲಿ ದಾಖಲಿಸಬಹುದು. ಮಾದರಿ ನೀತಿ ಸಂಹಿತೆಯನ್ನು ಸಂಪರ್ಕವಾಗಿ ಅನುಷ್ಠಾನಗೊಳಿಸುವ ಸಂಬಂಧ 48 ಗಂಟೆ ಯೊಳಗಾಗಿ ಗೋಡೆ ಬರಹಗಳು 4024, ಪೋಸ್ಟರ್ಸ್ 4759, ಬ್ಯಾನರ್ಸ್ 2051 ಮತ್ತು ಇತರೆ 2137 ಸೇರಿ ಒಟ್ಟು 12971ನ್ನು ತೆರೆವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಂಟ್ರೋಲ್ ರೂಮ್ ಪ್ರಾರಂಭ:
ಲೋಕಸಭೆ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲಾ ಕಂಟ್ರೋಲ್ ರೂಮ್ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ಜಿಲ್ಲೆಯಲ್ಲಿನ ಯಾವುದೇ ರೀತಿಯ ಹಣ ಹಂಚಿಕೆ, ಬೆದರಿಕೆ ಮತ್ತು ನೀತಿ ಸಂಹಿತೆ ವಿಚಾರದಲ್ಲಿ ಉಲ್ಲಂಘನೆ ಕಂಡುಬಂದಲ್ಲಿ ತಕ್ಷಣ ದೂ.ಸಂ. 08156-277071ಕ್ಕೆ ದೂರು ಸಲ್ಲಿಸಬಹುದು.

ಅನುಮತಿ ಕಡ್ಡಾಯ:
ಯಾವುದೇ ರಾಜಕೀಯ ಪಕ್ಷದಿಂದ ಚುನಾವಣೆ ಪ್ರಚಾರಕ್ಕಾಗಿ ಮೊಬೈಲ್ ಸರ್ವೀಸ್ ಮೂಲಕ ಕಳುಹಿಸುವ ಎಲ್ಲಾ ತರಹದ ಬಲ್ಕ್ ಎಸ್‌ಎಂಎಸ್ ಗಳ ವಿಷಯವನ್ನು ಸಂಬಂಧಿಸಿದ ಜಿಲ್ಲಾ ಮಟ್ಟದ ಎಂಸಿಎಂಸಿ ತಂಡದಿಂದ ಪರಿಶೀಲನೆಯಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಪೂರ್ವಾನುಮೋದನೆ ಪಡೆಯಬೇಕು. ನಂತರ ಮೊಬೈಲ್ ಸರ್ವೀಸ್ ಮೂಲಕ ಉದ್ದೇಶಿತ, ನಿಗದಿತ ಚುನಾವಣಾ ಪ್ರಚಾರ ಕೈಗೊಳ್ಳಬಹುದು. ತಪ್ಪಿದಲ್ಲಿ ಚುನಾವಣೆ ನಿಯಮಗಳಡಿ ನಿಯ ಮಾನುಸಾರ ಕ್ರಮ ವಹಿಸಲಾಗುವುದು ಎಂದು ಎಚ್ಚರಿದ್ದಾರೆ.
ಕಡ್ಡಾಯ:
ಮುದ್ರಣಾಲಯಗಳ ಮಾಲೀಕರು ಚುನಾವಣೆಗೆ ಸಂಬಂಧಿಸಿದ ಯಾವುದೇ ರಾಜಕೀಯ ಪಕ್ಷಗಳು ಜಾಹೀರಾತಿ ಗಾಗಿ ಮುದ್ರಿಸುವ ಕರಪತ್ರ ಮತ್ತು ಭಿತ್ತಿಪತ್ರಗಳನ್ನು ಮುದ್ರಿಸುವಾಗ ಕಡ್ಡಾಯವಾಗಿ ಪ್ರಿಂಟಿಂಗ್ ಪ್ರೆಸ್ ಹೆಸರು ಮತ್ತು ಪ್ರತಿಗಳ ಸಂಖ್ಯೆಯನ್ನು ನಮೂದಿಸಬಬೇಕು. ಮುದ್ರಿಸಲಾದ ಚುನಾವಣೆ ಸಾಮಗ್ರಿಯ ಒಂದು ಪ್ರತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಂದ ನೇಮಕ ಮಾಡಲಾಗಿರುವ ಎಂಸಿಎಂಸಿ ಅಧಿಕಾರಿಗಳ ತಂಡಕ್ಕೆ ಆಯಾ ದಿನದಂದು ತಕ್ಷಣವೇ ನೀಡಬೇಕು ಎಂದು ತಿಳಿಸಿದ್ದಾರೆ.

ವೆಬ್‌ಸೈಟ್ ಸಂಪರ್ಕಿಸಿ:
ಸುವಿಧ ಅಂತರ್ಜಾಲ ತಾಣದಲ್ಲಿ ರಾಜಕೀಯ ಪಕ್ಷದವರು ಚುನಾವಣೆಯಲ್ಲಿ ತಮ್ಮ ಪಕ್ಷದ ವತಿಯಿಂದ ಚುನಾವಣೆ ಪ್ರಚಾರಕ್ಕಾಗಿ ಹಾಗೂ ವಾಹನಗಳಿಗೆ ನಾನಾ ರೀತಿಯ ಅನುಮತಿಗಳನ್ನು ಸುಲಭವಾಗಿ ಹಾಗೂ ಪ್ರಯಾಸವಿಲ್ಲದೇ ಪಡೆಯಬಹುದು. ಅಂತರ್ಜಾಲ ತಾಣ www.ceokarnataka.kar.nic.in , http://chikballapur.nic.in/election.htm ಮತ್ತು http://164.100.128.in /suvidhakt ನೋಡಿಕೊಳ್ಳಬಹುದು ಎಂದು ಮಾಹಿತಿ ನೀಡಿದ್ದಾರೆ.
ಬಂದೂಕು ಠಾಣೆಗೆ ಒಪ್ಪಿಸಿ:--
ಚುನಾವಣೆ ವೇಳೆ ಯಾವುದೇ ಆಹಿತಕರ ಘಟನೆ ನಡೆಯ ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪರವಾನಗಿ ಪಡೆದಿರುವ ಬಂದೂಕುಗಳನ್ನು ಸಾರ್ವಜನಿಕರು ಚುನಾವಣೆ ಘೋಷಣೆಯಾದ ದಿನದಿಂದ ಚುನಾವಣೆ ಮುಗಿಯುವವರೆಗೂ ಪೊಲೀಸ್ ಠಾಣೆಗೆ ಒಪ್ಪಿಸಬೇಕು. ಇಲ್ಲವಾದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications