ನೂರರ ಗಡಿ ದಾಟಿದ ಬೀನ್ಸ್, ಮೆಣಸಿನಕಾಯಿ ದರ: ಯಾವ ತರಕಾರಿಗೆ ಎಷ್ಟು ಬೆಲೆ?
ಚಿಕ್ಕಬಳ್ಳಾಪುರ, ಜೂನ್ 26: ಪ್ರಸ್ತುತ ಮಳೆ ಕೈ ಕೊಟ್ಟಿರುವ ಪರಿಣಾಮ ತರಕಾರಿ ಬೆಳೆಗಳ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ತರಕಾರಿ ಬೆಲೆ ಏರಿಕೆಯಾಗ ತೊಡಗಿದ್ದು, ಇದು ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ಜಿಲ್ಲೆಯ ರೈತರು ಹೂ, ಹಣ್ಣು ಬೆಳೆಯುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆದು ಆದಾಯ ಗಳಿಸುತ್ತಾರೆ. ಸದ್ಯ ಈ ಬಾರಿ ಮಳೆ ಕೈ ಕೊಟ್ಟಿರುವ ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ರೈತರು ತರಕಾರಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಮಳೆ ಕೊರತೆಯಿಂದಾಗಿ ಮುಂಗಾರು ಕೃಷಿ ಚಟುವಟಿಕೆಗಳು ಸಹ ಹಿನ್ನೆಡೆಯಾಗಿದೆ.

ಕಳೆದ ಎರಡು ವರ್ಷದಿಂದ ಮುಂಗಾರು, ಹಿಂಗಾರು ಮಳೆಗಳು ಉತ್ತಮವಾಗಿ ಸುರಿದಿದೆ. ಆದರೆ, ಪ್ರಸಕ್ತ ಮುಂಗಾರು ಪೂರ್ವದಲ್ಲಿಯೇ ಮಳೆ ಕೈ ಕೊಟ್ಟಿದೆ. ಹೀಗಾಗಿ ಮಳೆಯಾಶ್ರಿತ ಬೆಳೆಗಳ ಬಿತ್ತನೆಗೆ ಪೆಟ್ಟು ಬಿದ್ದಿದೆ. ಅಲ್ಲದೇ ನೀರಾವರಿ ಹೊಂದಿರುವರು ನಿರೀಕ್ಷಿತ ಪ್ರಮಾಣದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಆಗುತ್ತಿಲ್ಲ. ಹೀಗಾಗಿ ಮಳೆ ಧರೆಗೆ ಬೀಳದೇ ಅನ್ನದಾತರು ಕಂಗಾಲಾಗಿದ್ದಾರೆ.
ಅಲ್ಲದೇ ಬಿಸಿಲಿನ ತಾಪಮಾನ ಏರಿಕೆಯಿಂದ ತರಕಾರಿ ಬೆಳೆಗಳ ಇಳುವರಿಯೂ ಕುಂಠಿತಗೊಂಡಿದ್ದು, ಮಾರುಕಟ್ಟೆಯಲ್ಲಿ ಈಗ ತರಕಾರಿ ಬೆಲೆ ಹೆಚ್ಚಳ ಸದ್ದು ಮಾಡುತ್ತಿದೆ. ಸ್ಥಳೀಯ ಮಾರುಕಟ್ಟೆಗಳಿಗೆ ನಾನಾ ಹಳ್ಳಿಗಳಿಂದ ತರಕಾರಿ ಮಾರಾಟಕ್ಕೆ ಬರುತ್ತಿದ್ದ ರೈತರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಇದು ಪರೋಕ್ಷವಾಗಿ ಬೆಲೆ ಏರಿಕೆಗೆ ಕಾರಣವಾಗಿದೆ.
ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ತರಕಾರಿ ದರ ಹೇಗಿದೆ?
ಸದ್ಯ ಮಾರುಕಟ್ಟೆಯಲ್ಲಿ ವಿವಿಧ ತರಕಾರಿ ಬೆಲೆ ಗಗನಕ್ಕೇರಿದೆ. ಬೀನ್ಸ್ ಕೆ.ಜಿಗೆ 150 ರೂ, ಉಳಿದಂತೆ ಹಸಿ ಮೆಣಸಿನಕಾಯಿ ಕೆ.ಜಿಗೆ 100 ರೂ, ಬಟಾಣಿ 180 ರೂ, ಕ್ಯಾರೆಟ್ 80 ರೂ, ಟೊಮೆಟೊ 90 ರೂ, ಬೆಂಡೆಕಾಯಿ 50 ರೂ, ಮೂಲಂಗಿ 50 ರೂ, ಹೀರೇಕಾಯಿ 60 ರೂ, ನೌಕೋಲ್ 40 ರೂ, ಚಿಕ್ಕಡಿಕಾಯಿ 80ರೂ ವರೆಗೆ ಪ್ರತಿ ಕೆ.ಜಿ ಮಾರಾಟವಾಗುತ್ತಿದೆ.

ಆಲೂಗಡ್ಡೆ ಮತ್ತು ಈರುಳ್ಳಿ ಕೆಜಿ 20 ರೂ. ಸಾಮಾನ್ಯ ದರವಿದ್ದು, ಬದನೆಕಾಯಿ 60 ರೂ, ನೌಕೋಲ್ 40 ರೂ, ಹೂ ಕೋಸು 40, ಕ್ಯಾಪ್ಸಿಕಂ 60 ರೂ, ಸೋರೆಕಾಯಿ 30 ರೂ, ಸೌತೆ 10 ರೂ, ಬೂದಕುಂಬಳ 30 ರೂ.ಗೆ, ಒಂದು ಕೆ.ಜಿ ಕೊತ್ತಂಬರಿ ಸೊಪ್ಪು 200 ರೂ.ಗೆ ಮಾರಾಟವಾದರೆ, 50 ರಿಂದ 70 ರೂವರೆಗೆ ದರವನ್ನೇ ಕಾಯ್ದುಕೊಂಡಿದ್ದ ಶುಂಠಿಯ ದರ 300 ರೂವರೆಗೆ ಪ್ರತಿ ಕೆ.ಜಿ ಮಾರಾಟವಾಗುತ್ತಿದೆ.
ಸದ್ಯ ನಿರೀಕ್ಷೆಗೆ ತಕ್ಕಂತೆ ಸ್ಥಳೀಯ ಮಾರುಕಟ್ಟೆಗೆ ತರಕಾರಿ ಆವಕ ಪ್ರಮಾಣ ಕಡಿಮೆಯಾಗಿರುವುದರಿಂದ ಒಂದು ತಿಂಗಳ ಹಿಂದೆ ಇದ್ದ ತರಕಾರಿ ಬೆಲೆಗಳು ಈಗ ದುಪ್ಪಟ್ಟಾಗಿವೆ. ದಿನದಿಂದ ದಿನಕ್ಕೆ ತರಕಾರಿ ಬೆಲೆಗಳು ಏರುತ್ತಿದ್ದು, ಇದರಿಂದ ಗ್ರಾಹಕರ ಜೇಬು ಭಾರವಾಗುತ್ತಿದೆ.
ದಿನ ನಿತ್ಯ ರುಚಿಕರ ಊಟ ತಿಂಡಿಗಳ ಮೂಲಕ ಗಮನ ಸೆಳೆಯುತ್ತಿದ್ದ ಹೊಟೇಲ್ ಮಾಲೀಕರು ಇದೀಗ ಮಾರುಕಟ್ಟೆಗೆ ಬಂದು ಕಡಿಮೆ ಬೆಲೆಗೆ ಸಿಗುವ ತರಕಾರಿ ಖರೀದಿಸಿ ಅಡುಗೆಗೆ ಬಳಸುತ್ತಿದ್ದಾರೆ. ಇನ್ನು ಜನಸಾಮಾನ್ಯರು ಕಡಿಮೆ ಬೆಲೆಯಲ್ಲಿ ಸಿಗುವ ತರಕಾರಿ ಖರೀದಿಸಲು ಮಾರುಕಟ್ಟೆಯಲ್ಲಿ ಚೌಕಾಸಿ ವ್ಯಾಪಾರಕ್ಕೆ ಇಳಿದಿದ್ದಾರೆ.












Click it and Unblock the Notifications