ದೇವೇಗೌಡರು ಹೇಗೆ ಬೇಕಾದರೂ ಬದಲಾಗುತ್ತಾರೆ: ವೀರಪ್ಪ ಮೊಯ್ಲಿ
Recommended Video
ಚಿಕ್ಕಬಳ್ಳಾಪುರ, ಜೂನ್ 22: ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಮೈತ್ರಿ ಒಪ್ಪಂದವೇ ಕಾರಣ ಎಂಬ ಕಾಂಗ್ರೆಸ್‌ನ ಅನೇಕ ಮುಖಂಡರ ಅಭಿಪ್ರಾಯಕ್ಕೆ ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವ ಎಂ. ವೀರಪ್ಪ ಮೊಯ್ಲಿ ಅವರೂ ಅನುಮೋದಿಸಿದ್ದಾರೆ.
ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದರಿಂದಲೇ ಕಾಂಗ್ರೆಸ್‌ಗೆ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಇಲ್ಲದಿದ್ದರೆ ಕನಿಷ್ಠ 10 ಕ್ಷೇತ್ರಗಳಲ್ಲಿ ಗೆಲ್ಲುತ್ತಿತ್ತು ಎಂದು ಪಕ್ಷದ ಅನೇಕ ಮುಖಂಡರು ಹೇಳಿದ್ದರು. ಇದಕ್ಕೆ ಈಗ ದನಿಗೂಡಿಸಿರುವ ವೀರಪ್ಪ ಮೊಯ್ಲಿ, ಮೈತ್ರಿಯಿಂದಲೇ ಪಕ್ಷಕ್ಕೆ ಸೋಲಾಯಿತು ಎಂದಿದ್ದಾರೆ.
ಮೈತ್ರಿ ಮಾಡದೆ ಹಾಗೆಯೇ ನೇರವಾಗಿ ಚುನಾವಣೆ ಎದುರಿಸಿದ್ದರೆ ಕಾಂಗ್ರೆಸ್‌ಗೆ ಕನಿಷ್ಠ 15 ಸೀಟುಗಳು ಬರುತ್ತಿದ್ದವು. ಸೋಲಿನ ಬಳಿಕ ಮೈತ್ರಿ ಪಕ್ಷಗಳ ಅದಕ್ಕೆ ಕಾರಣಗಳ ಬಗ್ಗೆ ಅವಲೋಕನ ಆಗಲಿಲ್ಲ. ಜನರಲ್ಲಿ ಅವರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ ಎಂಬ ಭಾವನೆ ಇತ್ತು. ಮೈತ್ರಿ ಪಕ್ಷಗಳಿಗೆ ಅವರ ಬೆಂಬಲಿಸದೆ ಇರಲು ಇದೂ ಒಂದು ಕಾರಣ. ಈಗ ಸರ್ಕಾರವನ್ನು ಉಳಿಸಿಕೊಳ್ಳುವುದೇ ಹರಸಾಹಸ ಆಗಿದೆಯಷ್ಟೇ, ಹೊರತು ಪಕ್ಷ ಸಂಘಟನೆಯ ಕೆಲಸ ಆಗುತ್ತಿಲ್ಲ ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ದುರ್ಬಲವಾಗಿದೆ. ಯಾವ ಸಂದರ್ಭದಲ್ಲಿ ಬೇಕಾದರೂ ಮಧ್ಯಂತರ ಚುನಾವಣೆ ನಡೆಯಬಹುದು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಗುರುವಾರ ಹೇಳಿದ್ದರು. ಅವರ ಹೇಲಿಕೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿತ್ತು. ಸಂಜೆ ವೇಳೆಗೆ ಅದಕ್ಕೆ ಸ್ಪಷ್ಟೀಕರಣ ನೀಡಿದ್ದ ದೇವೇಗೌಡ ಅವರು, ತಾವು ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಹೇಳಿದ್ದಾಗಿ ತಿಳಿಸಿದ್ದರು.

ದೇವೇಗೌಡರು ಮಾತು ಬದಲಿಸುತ್ತಾರೆ
ದೇವೇಗೌಡರು ಹೇಗೆ ಬೇಕಾದರೂ ಮಾತು ಬದಲಿಸುತ್ತಾರೆ. ಆಗಾಗ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಾರೆ. ಒಮ್ಮೊಮ್ಮೆ ಒಂದೊಂದು ರೀತಿ ಮಾತನಾಡುತ್ತಾರೆ. ಇದು ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆ ತರುವ ರೀತಿ ಇದೆ. ಕಾಂಗ್ರೆಸ್‌ನವರು ಅವರ ಹಾಗೆ ಮಾತನಾಡುವುದಿಲ್ಲ. ಈಗ ಯಾವುದೇ ಶಾಸಕರು ಚುನಾವಣೆಗೆ ಹೋಗಲು ರೆಡಿ ಇಲ್ಲ. ಮಧ್ಯಂತರ ಚುನಾವಣೆ ಎದುರಾದರೆ ಜನರು ಸಹಿಸಿಕೊಳ್ಳೊಲ್ಲ. ಯಾರೂ ಗೆದ್ದು ಬರುವ ವಿಶ್ವಾಸದಲ್ಲಿ ಇಲ್ಲ ಎಂದು ಮೊಯ್ಲಿ ಹೇಳಿದರು.

ಹಣ್ಣು ಇರುವ ಮರ ಅಲ್ಲಾಡಿಸುವುದು
ಸರ್ಕಾರವನ್ನು ಅಲುಗಾಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಯಡಿಯೂರಪ್ಪ ಅವರು ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಹಣ್ಣು ಇರುವ ಮರವನ್ನು ಅಲುಗಾಡಿಸುವುದು ಸಹಜ. ಆದರೆ, ಯಡಿಯೂರಪ್ಪ ಅವರದು ಹಗಲುಗನಸು. ಯಾರೂ ಪಕ್ಷ ಬಿಟ್ಟು ಹೋಗಿ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿಲ್ಲ ಎಂದರು.

ಇವಿಎಂ ಮೇಲೆ ಅನುಮಾನ
ಬೂತ್ ಮಟ್ಟದ ಮತಗಳ ಪಟ್ಟಿಯನ್ನು ಪರಿಶೀಲಿಸಿದ ಅವರು, ಬಿಜೆಪಿ ಬೇರು ಇಲ್ಲದೆ ಇರುವಲ್ಲಿಯೂ ಅವರಿಗೆ ಮತಗಳು ಬಂದಿದೆ. ಈ ರೀತಿ ಆಗಲು ಪರೋಕ್ಷವಾಗಿ ಕಾಂಗ್ರೆಸ್ ನಾಯಕರೂ ಕಾರಣ ಎಂದು ಆರೋಪಿಸಿದರು. ಇವಿಎಂಗಳ ಮೇಲೆ ನಂಬಿಕೆ ಇಲ್ಲದಂತಾಗಿದೆ. ಅದರ ಮೇಲಿನ ಅನುಮಾನ ನಿವಾರಿಸಿಕೊಳ್ಳಲು ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.

ಕೃತಜ್ಞತೆ ಸಲ್ಲಿಸದ ಸುಧಾಕರ್
ಚಿಕ್ಕಬಳ್ಳಾಪುರ ಶಾಸಕ ಕೆ. ಸುಧಾಕರ್ ಅವರಿಗೆ ನಿಗಮ ಮಂಡಳಿ ಸ್ಥಾನ ನೀಡುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನಾನು ಹೇಳಿದ್ದೆ. ಆದರೆ, ಅವರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾನ ದೊರೆತ ಬಳಿಕ ಒಮ್ಮೆಯೂ ಒಂದು ಕೃತಜ್ಞತೆ ಸಹ ಹೇಳಿಲ್ಲ ಎಂದು ಕಿಡಿಕಾರಿದರು.












Click it and Unblock the Notifications