Valentines Day 2023: ನಂದಿಬೆಟ್ಟ, ಸ್ಕಂದಗಿರಿಯ ತಪ್ಪಲಲ್ಲಿ ಪ್ರೇಮ ಪಕ್ಷಿಗಳ ಸಂಚಾರ
ಪ್ರೇಮಿಗಳ ದಿನ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ನಂದಿಬೆಟ್ಟಕ್ಕೆ ನೂರಾರು ಜೋಡಿಗಳು ಇಂದು ಭೇಟಿ ನೀಡಿದರು. ಇನ್ನು ಸ್ಕಂದಗಿರಿ, ಇಶಾ ಕೇಂದ್ರ, ಆವಲಬೆಟ್ಟ ಸೇರಿದಂತೆ ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರೇಮಿಗಳ ಕಲರವ ಹೆಚ್ಚಾಗಿತ್ತು.
ಚಿಕ್ಕಬಳ್ಳಾಪುರ, ಫೆಬ್ರವರಿ 14: ಪ್ರೇಮಿಗಳ ದಿನ ಅಂಗವಾಗಿ ಮಂಗಳವಾರ ಪ್ರೇಮಿಗಳ ಮೆಚ್ಚಿನ ಸ್ಥಳವೆಂದೇ ಎಂದೇ ಖ್ಯಾತಿ ಪಡೆದಿರುವ ವಿಶ್ವವಿಖ್ಯಾತ ನಂದಿಬೆಟ್ಟಕ್ಕೆ ನೂರಾರು ಜೋಡಿಗಳು ಭೇಟಿ ನೀಡಿದರು. ಇನ್ನು ಸ್ಕಂದಗಿರಿ, ಇಶಾ ಕೇಂದ್ರ, ಆವಲಬೆಟ್ಟ ಸೇರಿದಂತೆ ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರೇಮಿಗಳ ಕಲರವ ಹೆಚ್ಚಾಗಿತ್ತು.
ಸುಂದರ ಪರಿಸರದ ಜೊತೆಗೆ ರಮಣೀಯ ದೃಶ್ಯ ಹೊಂದಿರುವ ನಂದಿಗಿರಿಧಾಮ ಪ್ರೇಮಿಗಳ ಪಾಲಿಗೆ ಸ್ವರ್ಗವೇ ಸರಿ. ಹಾಗಾಗಿ ಪ್ರೇಮಿಗಳು ಬೆಳ್ಳಂಬೆಳಗ್ಗೆ ನಂದಿಬೆಟ್ಟಕ್ಕೆ ಸಾವಿರಾರು ಯುವ ಜೋಡಿಗಳು ಲಗ್ಗೆ ಇಟ್ಟಿದ್ದರು. ಬೆಟ್ಟದ ಮೇಲೆ ನೂರಾರು ಸಾವಿರಾರು ಪರಸ್ಪರ ಪ್ರೇಮ ನಿವೇದನೆ ಮಾಡಿಕೊಂಡರು. ಮೊದಲ ಬಾರಿಗೆ ಪ್ರೀತಿಯನ್ನು ಅಭಿವ್ಯಕ್ತಿಸುವವರಿಗೆ ಇದಕ್ಕಿಂತ ದೊಡ್ಡ ಸಂಭ್ರಮ ಮತ್ತೊಂದಿಲ್ಲ. ಹೀಗಾಗಿ ಹಲವರು ನಾನಾ ರೀತಿಯಲ್ಲಿ ಪ್ರೇಮಿಗಳ ದಿನವನ್ನು ಆಚರಿಸಿಕೊಂಡರು.
ಕೆಲವರು ಬೆಟ್ಟದ ಮೇಲೆಯೇ ಕೇಕ್ ಕತ್ತರಿಸುವ ಮೂಲಕ ಪ್ರೇಮಿಗಳ ದಿನ ಆಚರಿಸಿಕೊಂಡರೆ, ಇನ್ನೂ ಕೆಲವರು ಪ್ರೀತಿಯ ಸಂಕೇತವಾಗಿ ಗ್ರೀಟಿಂಗ್ಸ್ ಕಾರ್ಡ್, ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮನದಾಳದ ಪ್ರೀತಿಯನ್ನು ಹಂಚಿಕೊಂಡರು. ಇನ್ನು ಕೆಲವರು ಸೂರ್ಯೋದಯ ಸ್ಪಾಟ್‌ನಲ್ಲಿ ನಿಂತು ಗುಲಾಬಿ ನೀಡುವ ಮೂಲಕ ಸಂಭ್ರಮಿಸಿದರು.

ಚಾರಣ ಪ್ರಿಯರ ಫೇವರಿಟ್ ಸ್ಥಳವಾದ ಸ್ಕಂದಗಿರಿಯಲ್ಲೂ ಪ್ರೇಮಿಗಳ ಸಂಖ್ಯೆ ಹೆಚ್ಚಾಗಿತ್ತು. ಮುಂಜಾನೆಯಿಂದಲೇ ಬೆಟ್ಟಕ್ಕೆ ಬಂದ ಪ್ರೇಮಿಗಳು ರಸ್ತೆಯುದ್ದಕ್ಕೂ ಮೊಬೈಲ್ ಮೂಲಕ ಸೆಲ್ಫಿಗಳನ್ನು ತೆಗದುಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಇತ್ತೀಚಿಗೆ ಹೆಚ್ಚು ಯುವ ಪ್ರವಾಸಿಗರನ್ನು ಸೆಳೆಯುತ್ತಿರುವ ಹಾಗೂ ಫೋಟೋಗೆ ಉತ್ತಮ ಸ್ಥಳವಾಗಿರುವ ಗುಡಿಬಂಡೆ ತಾಲೂಕು ಆವಲಬೆಟ್ಟದಲ್ಲಿ ಪ್ರೇಮಿಗಳ ದಂಡೇ ನೆರೆದಿತ್ತು. ಬೆಟ್ಟದ ತುದಿಯಲ್ಲಿರುವ ಸೆಲ್ಫಿ ಬಂಡೆಯ ಮೇಲೆ ಫೋಟೋ, ಸೆಲ್ಫಿ ತೆಗೆದುಕೊಂಡಿದ್ದು ಕಂಡು ಬಂತು. ಚಿಕ್ಕಬಳ್ಳಾಪುರ ತಾಲೂಕಿನ ಕವರನಹಳ್ಳಿ ಸಮೀಪದ ಇಶಾ ಕೇಂದ್ರದಿಂದ ನಿರ್ಮಿಸಿರುವ ಆದಿಯೋಗಿ ಮೂರ್ತಿ ನೋಡಲು ಯುವಕ ಯುವತಿ ಜೋಡಿಗಳು ಭೇಟಿ ನೀಡಿದರು. ಶ್ರೀನಿವಾಸ ಸಾಗರ, ಜಕ್ಕಲಮೊಡಗು, ಅಮಾನಿ ಬೈರಸಾಗರ ಕೆರೆಗೂ ಭೇಟಿ ನೀಡಿ ವ್ಯಾಲೆಂಟೈನ್ಸ್ ಡೇ ಸಂಭ್ರಮದಿಂದ ಆಚರಿಸಿದರು.
ಪ್ರೇಮಿಗಳ ದಿನದ ಅಂಗವಾಗಿ ಬೆಂಗಳೂರು, ಕೋಲಾರ, ದೊಡ್ಡಬಳ್ಳಾಪುರ, ತುಮಕೂರು ಸೇರಿದಂತೆ ದೂರ ದೂರುಗಳಿಂದ ಸಾವಿರಾರು ಪ್ರೇಮಿಗಳು, ಪ್ರವಾಸಿಗರು ಜಿಲ್ಲೆಯಲ್ಲಿ ವಿವಿಧ ಪ್ರವಾಸಿ ತಾಣಗಳಿಗೆ ಆಗಮಿಸಿದ್ದರು. ಇದರಿಂದ ನಂದಿಬೆಟ್ಟದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಲ್ಲದೇ, ಮುನ್ನೆಚ್ಚರಿಕಾ ಕ್ರಮವಾಗಿ ನಂದಿಗಿರಿಧಾಮ, ಆವಲಬೆಟ್ಟ, ಇಶಾ ಕೇಂದ್ರ, ಸ್ಕಂದಗಿರಿಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಚಿಕ್ಕಬಳ್ಳಾಪುರ ತಾಲೂಕಿನ ಭೋಗನಂದೀಶ್ವರ ಸ್ವಾಮಿ ದೇವಾಲಯ, ಚಿಂತಾಮಣಿಯ ಕೈಲಾಸಗಿರಿ, ಕೈವಾರ, ಗೌರಿಬಿದನೂರಿನ ವಿಧುರಾಶ್ವತ್ಥ, ಬಾಗೇಪಲ್ಲಿ ಗುಮ್ಮನಾಯಕನಪಾಳ್ಯ ಕೋಟೆ, ಗುಡಿಬಂಡೆ ಸುರಸದ್ಮಗಿರಿ ಬೆಟ್ಟ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳಲ್ಲೂ ಪ್ರೇಮಿಗಳ ದಂಡು ಕಂಡುಬಂದಿದೆ. ಇನ್ನೊಂದೆಡೆ ನಗರಗಳ ಪ್ರಮುಖ ಹೋಟೆಲ್‌ಗಳಲ್ಲೂ ಪ್ರೇಮಿಗಳ ಸಂಖ್ಯೆ ಹೆಚ್ಚಿತ್ತು.












Click it and Unblock the Notifications