Breaking; ನಂದಿ ಹಿಲ್ಸ್‌ನಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ 112 ತಂಡ
ಟ್ರಕ್ಕಿಂಗ್ ಹೋಗಿ ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ಪ್ರಪಾತದಲ್ಲಿ ಸಿಲುಕಿದ್ದ ಇಬ್ಬರು ಯುವಕರನ್ನು 112 ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಚಿಕ್ಕಬಳ್ಳಾಪುರ, ಜನವರಿ 29; ಟ್ರಕ್ಕಿಂಗ್ ಹೋಗಿ ನಂದಿಬೆಟ್ಟದ ಪ್ರಪಾತದಲ್ಲಿ ಸಿಲುಕಿದ್ದ ಇಬ್ಬರನ್ನು 112 ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಓರ್ವ ಯುವಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದೊಡ್ಡಬಳ್ಳಾಪುರದ ಮಂಜುನಾಥ್ ಮತ್ತು ಮನೋಜ್ ಕುಮಾರ್ ಭಾನುವಾರ ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ಚಾರಣ ಕೈಗೊಂಡಿದ್ದರು. ಈ ಸಮಯದಲ್ಲಿ ಕಾಲು ಜಾರಿ ಬಿದ್ದು, ಪ್ರಪಾತದಲ್ಲಿ ಸಿಲಕಿದ್ದರು.
112 ಸಂಖ್ಯೆಗೆ ಕರೆ ಮಾಡಿ ರಕ್ಷಣೆ ಮಾಡಿ ಎಂದು ಮನವಿ ಮಾಡಿದರು. ಸ್ಥಳಕ್ಕೆ ನಂದಿಗಿರಿಧಾಮದ ಪೊಲೀಸರು, ಅಗ್ನಿಶಾಮಕ ದಳದ ಜೊತೆ 112 ಪೊಲೀಸರು ಆಗಮಿಸಿದರು.

ಅಪಾಯಕಾರಿ ಪ್ರಪಾತದಲ್ಲಿ ಸಿಲುಕಿದ್ದ ಇಬ್ಬರು ಯುವಕರನ್ನು ರಕ್ಷಣೆ ಮಾಡಿದರು. ಪ್ರಪಾತಕ್ಕೆ ಜಾರಿ ಬಿದ್ದ ಕಾರಣ ಮನೋಜ್ ಕುಮಾರ್ ಗಾಯಗೊಂಡಿದ್ದರು. ಸುಮಾರು 2 ಕಿ. ಮೀ. ಅವರನ್ನು ಹೊತ್ತುಕೊಂಡು ಬಂದು ರಕ್ಷಣೆ ಮಾಡಲಾಗಿದೆ.
ಮನೋಜ್ ಕುಮಾರ್‌ರನ್ನು ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಜುನಾಥ್‌ಗೆ ಯಾವುದೇ ಗಾಯಗಳಾಗಿಲ್ಲ. ಯುವಕರು ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಏನಿದು 112; ಕೇಂದ್ರ ಸರ್ಕಾರವು ಪೊಲೀಸ್, ಆರೋಗ್ಯ, ಅಗ್ನಿಶಾಮಕ, ಸೇರಿದಂತೆ ಇನ್ನಿತರ ತುರ್ತು ಸೇವೆಗಳು ಒಂದೇ ನಂಬರ್ ಅಡಿಯಲ್ಲಿ ಸಿಗುವಂತೆ ಮಾಡಲು 112 ತುರ್ತು ರಕ್ಷಣಾ ಪಡೆಯನ್ನು ರಚನೆ ಮಾಡಿದೆ.
ತುರ್ತು ಸಂದರ್ಭಗಳಲ್ಲಿ ಜನರು 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ. ಈ ಪಡೆಗಾಗಿಯೇ ವಿಶೇಷ ವಾಹನಗಳನ್ನು ಕೇಂದ್ರ ಗೃಹ ಸಚಿವಾಲಯದ ಮೂಲಕ ರಾಜ್ಯಗಳಿಗೆ ನೀಡಲಾಗಿದೆ.
ಹೊತ್ತಿ ಉರಿದ ಕಾರು; ಬೆಂಗಳೂರಿನಿಂದ ನಂದಿಗಿರಿಧಾಮಕ್ಕೆ ಆಗಮಿಸಿದ್ದ ವ್ಯಕ್ತಿಯೊಬ್ಬರು ಕಾರಿಗೆ ಬೆಂಕಿ ತಗುಲಿರುವ ಘಟನೆ ಭಾನುವಾರ ನಡೆದಿದೆ. ಫೋರ್ಡ್ ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿದೆ.
ನಂದಿಬೆಟ್ಟ ಏರುವಾಗಲೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಚಾಲಕ ಎಲ್ಲರನ್ನೂ ಕೆಳಗಿಳಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು.












Click it and Unblock the Notifications