ನಂದಿ ಬೆಟ್ಟದಲ್ಲಿ ಇನ್ನು ಸೂರ್ಯೋದಯ ನೋಡುವ ಭಾಗ್ಯವಿಲ್ಲ!
ಚಿಕ್ಕಬಳ್ಳಾಪುರ, ಜೂನ್ 05 : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿ ಬೆಟ್ಟ ಪ್ರವಾಸಿಗರ ನೆಚ್ಚಿನ ತಾಣ. ಅದರಲ್ಲಿಯೂ ಬೆಂಗಳೂರು ನಗರದಿಂದ ಸಾವಿರಾರು ಜನರು ಸೂರ್ಯೋದಯ ನೋಡಲು ಮುಂಜಾನೆಯೇ ನಂದಿ ಬೆಟ್ಟಕ್ಕೆ ಹೋಗುತ್ತಿದ್ದರು.
Recommended Video
ಲಾಕ್ ಡೌನ್ ಪರಿಣಾಮ ನಂದಿ ಬೆಟ್ಟಕ್ಕೆ ಜನರ ಭೇಟಿಯನ್ನು ನಿಷೇಧಿಸಲಾಗಿದೆ. ಜೂನ್ 30ರ ತನಕ ಈ ಆದೇಶ ಜಾರಿಯಲ್ಲಿರುತ್ತದೆ. ಸರ್ಕಾರ ನೀಡುವ ಮುಂದಿನ ಸೂಚನೆ ನೋಡಿಕೊಂಡು ತೋಟಗಾರಿಕಾ ಇಲಾಖೆ ಪ್ರವಾಸಿಗರ ಭೇಟಿ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ.
ಲಾಕ್ ಡೌನ್ ಅವಧಿ ಮುಗಿದ ಬಳಿಕವೂ ನಂದಿ ಬೆಟ್ಟದಲ್ಲಿ ಸೂರ್ಯೋದಯ ನೋಡುವ ಭಾಗ್ಯ ಜನರಿಗೆ ಸಿಗುವುದಿಲ್ಲ. ನಂದಿ ಬೆಟ್ಟಕ್ಕೆ ಬೆಳಗ್ಗೆ 8 ಗಂಟೆಯ ಬಳಿಕ ಮಾತ್ರ ಪ್ರವೇಶ ನೀಡಲು ತೋಟಗಾರಿಕಾ ಇಲಾಖೆ ಚಿಂತನೆ ನಡೆಸಿದೆ.

ವಾರಾಂತ್ಯದ ದಿನಗಳಲ್ಲಿ 8 ರಿಂದ 10 ಸಾವಿರ ಜನರು ಮುಂಜಾನೆ ಸೂರ್ಯೋದಯ ನೋಡಲು ನಂದಿ ಬೆಟ್ಟಕ್ಕೆ ಆಗಮಿಸುತ್ತಾರೆ. ಇಷ್ಟು ಜನರು ಬರುವುದರಿಂದ ಸಾಮಾಜಿಕ ಅಂತರ ಕಾಪಾಡುವುದು ಸಾಧ್ಯವಿಲ್ಲದ ಮಾತು. ಆದ್ದರಿಂದ, ಸೂರ್ಯೋದಯ ನೋಡುವುದಕ್ಕೆ ನಿರ್ಬಂಧ ಹಾಕುವ ಚಿಂತನೆ ಇದೆ.
ಶನಿವಾರ ಮತ್ತು ಭಾನುವಾರ ನಂದಿ ಬೆಟ್ಟದ ಬುಡದಲ್ಲಿ ಆಗುತ್ತಿದ್ದ ಸಂಚಾರ ದಟ್ಟಣೆ ತಪ್ಪಿಸಲು ತೋಟಗಾರಿಕಾ ಇಲಾಖೆ ವಾಹನ ಇರುವಲ್ಲಿಗೆ ಹೋಗಿ ಸಿಬ್ಬಂದಿ ಟಿಕೆಟ್ ಕೊಡುವ ವ್ಯವಸ್ಥೆ ಮಾಡಿತ್ತು. ಆದರೆ, ಈಗ ಕೊರೊನಾ ವೈರಸ್ ಸೋಂಕಿನ ಮಾರ್ಗಸೂಚಿ ಅನ್ವಯ ಇದು ಸಾಧ್ಯವಿಲ್ಲ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಜೊತೆ ನಂದಿ ಬೆಟ್ಟಕ್ಕೆ ಬರುವ ಪ್ರವಾಸಿಗೆ ಸುರಕ್ಷತೆ ಬಗ್ಗೆ ತೋಟಗಾರಿಕಾ ಇಲಾಖೆ ಚರ್ಚೆ ನಡೆಸಲಿದೆ. ಬಳಿಕ ಪ್ರವಾಸಿಗರ ಭೇಟಿ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications