50 ಹಾಸಿಗೆಗಳ ತೀವ್ರ ನಿಗಾ ಘಟಕ ಜಿಲ್ಲಾ ಕೇಂದ್ರದಿಂದ ಚಿಂತಾಮಣಿ ತಾಲೂಕಿಗೆ ಶಿಫ್ಟ್ - ಕೆ ಸುಧಾಕರ್ ತೀವ್ರ ವಾಗ್ದಾಳಿ!
ಚಿಕ್ಕಬಳ್ಳಾಪುರ ಅಕ್ಟೋಬರ್ 17: ಚಿಕ್ಕಬಳ್ಳಾಪುರದಲ್ಲಿ 50 ಹಾಸಿಗೆಗಳ ತೀವ್ರ ನಿಗಾ ಘಟಕ ಜಿಲ್ಲಾ ಕೇಂದ್ರದಿಂದ ಚಿಂತಾಮಣಿ ತಾಲೂಕಿಗೆ ಶಿಫ್ಟ್ ಆದ ಬೆನ್ನಲ್ಲೆ ಸಂಸದರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ ಸುಧಾಕರ್ ರವರ ತವರು ಕ್ಷೇತ್ರದ ಮೇಲಿನ ಪ್ರೀತಿಯ ಕಾರಣದಿಂದ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ವೈದ್ಯಕೀಯ ಆಸ್ಪತ್ರೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ 50 ಹಾಸಿಗೆಗಳ ತೀವ್ರ ನಿಗಾ ಘಟಕ ಚಿಂತಾಮಣಿಗೆ ಶಿಫ್ಟ್ ಮಾಡಲಾಗಿದೆ. ಇದಕ್ಕೆ ಸಂಸದ ಡಾ. ಕೆ. ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು... ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಚಿಕ್ಕಬಳ್ಳಾಪುರ ತಾಲೂಕಿನ ನಂದಿ ವೈದ್ಯಕೀಯ ಆಸ್ಪತ್ರೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ 50 ಹಾಸಿಗೆಗಳ ತೀವ್ರ ನಿಗಾ ಘಟಕ ಚಿಂತಾಮಣಿಗೆ ಶಿಫ್ಟ್ ಆಗಿರುವುದು ಜಿಲ್ಲೆಯ ಜನತೆಗೆಲ್ಲ ತಿಳಿದಿದ್ದರೂ ಸ್ಥಳೀಯ ಶಾಸಕರಿಗೆ ಇದರ ಮಾಹಿತಿಯೇ ಇಲ್ಲವೆಂದರೆ ಕೆ. ಸುಧಾಕರ್ ಕಿಡಿ ಕಾರಿದ್ದಾರೆ.

ಜಿಲ್ಲಾ ಕೇಂದ್ರದ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿನಿಂದಲೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಮತ್ತು ಸಂಸದ ಡಾ.ಕೆ.ಸುಧಾಕರ್ ಅವರ ನಡುವೆ ವಾಕ್ಸಮರಗಳು ನಡೆಯುತ್ತಲೇ ಇವೆ. ಇದಕ್ಕೆ ಮತ್ತಷ್ಟು ಪುಷ್ಟಿ ನೀಡುವ ರೀತಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ನಂದಿ ಮೆಡಿಕಲ್ ಕಾಲೇಜಿನಲ್ಲಿ ಎಂಆಐ ಸ್ಕ್ಯಾನಿಂಗ್ ಯಂತ್ರಕ್ಕೆ ನೀಡಿದ್ದ ಅವಕಾಶವನ್ನು ನಿರಾಕರಿಸಿ, ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಿಸುತ್ತಿರುವ ಡಯಾಗ್ನಿಸ್ಟಿಕ್ ಬ್ಲಾಕ್‌ಗೆ ಸ್ಥಳಾಂತರಿಸುವ ಕಾರ್ಯವೂ ನಡೆದಿದೆ ಎನ್ನುವ ಆರೋಪದ, ನಡುವೆ 50 ಹಾಸಿಗೆಗಳ ತೀವ್ರ ನಿಗಾ ಘಟಕವನ್ನು ಚಿಂತಾಮಣಿಯಲ್ಲಿ ಸ್ಥಾಪಿಸಲು ಹೊರಟಿರುವುದೇ ಇದಕ್ಕೆಲ್ಲ ಕಾರಣ.
ಹೌದು ಕೇಂದ್ರ ಸರಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಪಿಎಂ ಆಯುಷ್ಠಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಯೋಜನೆಯಡಿ ಚಿಕ್ಕಬಳ್ಳಾಪುರ ತಾಲೂಕಿನ ಆರೂರು ಬಳಿಯ ಸರಕಾರಿ ನಂದಿ ವೈದ್ಯಕೀಯ ಕಾಲೇಜಿನಲ್ಲಿ 50 ಹಾಸಿಗೆಗಳ ತೀವ್ರ ನಿಗಾ ಘಟಕ ಸ್ಥಾಪಿಸಲು ಹಿಂದಿನ ಸರಕಾರದ ಅವಧಿಯಲ್ಲಿ ಅನುಮೋದನೆ ನೀಡಲಾಗಿತ್ತು. ಆದರೆ ಈಗ ಅದನ್ನು ಚಿಂತಾಮಣಿಗೆ ಸ್ಥಳಾಂತರ ಮಾಡುವ ಮೂಲಕ ಚಿಕ್ಕಬಳ್ಳಾಪುರಕ್ಕೆ ಅನ್ಯಾಯ ಮಾಡಿದ್ದಾರೆ ಎಂಬುದು ಸಂಸದರ ನೇರ ಆರೋಪವಾಗಿದೆ.

ಅನುದಾನ ಎಷ್ಟು?
2023-24ನೇ ಸಾಲಿನಲ್ಲಿ ಮಂಜೂರಾಗಿದ್ದ ಯೋಜನೆಯನ್ನು ಅ.10ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಚಿಂತಾಮಣಿಗೆ ಸ್ಥಳಾಂತರಿಸಲು ಅನುಮೋದನೆ ಪಡೆಯಲಾಗಿದೆ. 24 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು 16 ಕೋಟಿ ರೂ.ಗೆ ಕಡಿತಗೊಳಿಸಿ ಸ್ಥಳಾಂತರಿಸುವುದು ಈಗ ಭಾರೀ ವಿರೋಧಕ್ಕೆ ಕಾರಣವಾಗಿದೆ.
ಉದ್ದೇಶಿತ ಸ್ಥಳ ಯಾವುದು ?
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಹೊಂದಿಕೊಂಡಂತೆ ಇರುವ ಹಳೆಯ ತಾಲೂಕು ಕಚೇರಿ, ಡಿವೈಎಸ್ಪಿ ಕಚೇರಿ ಸೇರಿದಂತೆ ಆ ವ್ಯಾಪ್ತಿಯ ಸುಮಾರು 1 ಎಕರೆ 11 ಗುಂಟೆ ಜಾಗವನ್ನು ಹಸ್ತಾಂತರಿಸಲಾಗಿದ್ದು, ಅದೇ ಜಾಗದಲ್ಲಿ ಐಸಿಯು ಘಟಕ ಸ್ಥಾಪನೆಗೆ ನಿರ್ಧರಿಸಲಾಗಿದೆ. 24.5 ಕೋಟಿ ರೂ. ವೆಚ್ಚದ ಯೋಜನೆಯನ್ನು 16 ಕೋಟಿ ರೂ.ಗೆ ಕಡಿತಗೊಳಿಸಿ ಸ್ಥಳಾಂತ ರಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸಾರ್ವಜನಿಕರ ಬೇಡಿಕೆ ಏನು ?
ಚಿಕ್ಕಬಳ್ಳಾಪುರದ ಅರೂರು ಬಳಿಯ ಸರಕಾರಿ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಈ ಐಸಿಯು ಘಟಕ ಸ್ಥಾಪನೆ ಮಾಡಿದರೆ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲ ಆಗುವುದರ ಜತೆಗೆ, ಆಸ್ಪತ್ರೆಯೂ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವುದರಿಂದ ಕರ್ನಾಟಕ ಮತ್ತು ಆಂಧ್ರಪ್ರದೇಶ ಈ ಎರಡೂ ರಾಜ್ಯಗಳ 3-4 ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತಹ ಆಯಕಟ್ಟಿನ ಸ್ಥಳವಾಗಿದ್ದು, ಇಲ್ಲೇ ಐಸಿಯು ಘಟಕ ಸ್ಥಾಪನೆ ಮಾಡಲು ಆಗ್ರಹ ವ್ಯಕ್ತವಾಗಿದೆ.
ಚಿಂತಾಮಣಿಗೆ ಹೊಸ ಯೋಜನೆ ತರಲಿ: ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ತಮ್ಮ ಕ್ಷೇತ್ರಕ್ಕೆ ಸಚಿವರೋ ಅಥವಾ ಇಡೀ ಜಿಲ್ಲೆಗೆ ಸಚಿವರೋ ತಿಳಿಯುತ್ತಿಲ್ಲ , ಜಿಲ್ಲಾ ಉಸ್ತುವಾರಿ ಸಚಿವರು ಬೇಕಾದರೆ ತಮ್ಮ ಕ್ಷೇತ್ರಕ್ಕೆ ಹೊಸ ಯೋಜನೆ ಹಾಗೂ ಅನುದಾನತರಲಿ, ಐಸಿಯು ಘಟಕ ಅಲ್ಲ ತಮ್ಮ ಕ್ಷೇತ್ರದಲ್ಲಿ ಹೈಟೆಕ್ ಆಸ್ಪತ್ರೆಯನ್ನೇ ನಿರ್ಮಿಸಲಿ. ಆದರೆ ಈಗಾಗಲೇ ಚಿಕ್ಕಬಳ್ಳಾಪುರ ತಾಲ್ಲೂಕಿಗೆ ಅನುಮೋದನೆ ಆಗಿರುವ ಐಸಿಯು ಘಟಕವನ್ನ ಕಸಿದು ಕೊಂಡು ತಮ್ಮ ಕ್ಷೇತ್ರಕ್ಕೆ ಸ್ಥಳಾಂತರ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ಇನ್ನು ಕ್ಷೇತ್ರದ ಶಾಸಕರ ಹಣೆಬರಹ ಗೊತ್ತೇ ಇದೆ. ಹೊಸ ಯೋಜನೆ, ಅನುದಾನ ತರುವ ಸಾಮರ್ಥವಂತೂ ಇವರಿಗಿಲ್ಲ, ಕನಿಷ್ಠ ಪಕ್ಷ ಹಿಂದಿನ ಸರ್ಕಾರದಲ್ಲಿ ನಾನು ತಂದಿರುವ ಯೋಜನೆಗಳನ್ನಾದರೂ ಯಾರದ್ದೋ ಮರ್ಜಿಗೆ ಒಳಗಾಗಿ ಅನ್ಯ ಕ್ಷೇತ್ರಗಳ ಪಲಾಗುವುದನ್ನು ತಪ್ಪಿಸಿ, ಇಲ್ಲೇ ಉಳಿಸಿ ಕೊಳ್ಳುವ ಯೋಗ್ಯತೆಯನ್ನಾದರೂ ಸ್ಥಳೀಯ ಶಾಸಕರು ಉಳಿಸಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಆಸ್ಪತ್ರೆಗಳ ಲೋಕಾರ್ಪಣೆ ವಿಷಯದಲ್ಲಿ ತಾರತಮ್ಯದ ಆರೋಪ ಮಾಡಿ ಡಾ.ಕೆ.ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವರ ಜತೆ ವೇದಿಕೆ ಹಂಚಿಕೊಳ್ಳದಿರುವ ನಿರ್ಧಾರ ಮಾಡಿದ್ದರು. ಕಾಂಗ್ರೆಸ್ ಸರಕಾರದ ತಾರತಮ್ಯ ಧೋರಣೆ ವಿರುದ್ಧ ಚಿಕ್ಕಬಳ್ಳಾಪುರದ ಜನತೆ ದಂಗೆ ಏಳುವ ಮುನ್ನ ಸರಕಾರ ಎಚ್ಚೆತ್ತುಕೊಂಡರೆ ಒಳ್ಳೆಯದು. ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ಎಂದಿನಂತೆ ತಮ್ಮ ಸೇಡಿನ ರಾಜಕಾರಣ ಮುಂದುವರಿಸಿದ್ದು, ಚಿಕ್ಕಬಳ್ಳಾಪುರಕ್ಕೆ ಮತ್ತೊಮ್ಮೆ ದ್ರೋಹ ಬಗೆದಿದ್ದಾರೆ ಎಂದು ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಕಿಡಿಕಾರಿದ್ದಾರೆ.
ನಿರ್ಧಾರ ಕೈ ಬಿಡಲು ಆಗ್ರಹ: ಈ ಸಂಪುಟ ನಿರ್ಧಾರವನ್ನು ಈ ಕೂಡಲೇ ರದ್ದು ಮಾಡಿ, ಈ ಹಿಂದೆ ರೂಪಿಸಲಾಗಿದ್ದ ಯೋಜನೆಯನ್ನ ಹಿಂತಿರುಗಿಸುವ ಮೂಲಕ ಸರ್ಕಾರ ತನ್ನ ತಪ್ಪನ್ನ ಸರಿಪಡಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವರನ್ನು, ಜಿಲ್ಲಾ ಉಸ್ತುವಾರಿ ಸಚಿವರನ್ನು ಮತ್ತು ಮುಖ್ಯ ಕಾರ್ಯದರ್ಶಿಗಳನ್ನು ಆಗ್ರಹಿಸುತ್ತೇನೆ. ಇಲ್ಲವಾದರೆ ಕಾನೂನು ಹೋರಾಟ ಸೇರಿದಂತೆ ಎಲ್ಲ ರೀತಿಯ ಹೋರಾಟ ನಡೆಸುವುದಾಗಿ ಸಂಸದರು ಎಚ್ಚರಿಸಿದ್ದಾರೆ.












Click it and Unblock the Notifications