ಶಾಲಾರಂಭಕ್ಕೆ ಭರ್ಜರಿ ಸಿದ್ಧತೆ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಚಿಕ್ಕಬಳ್ಳಾಪುರ ಶಾಸಕರ ಪಣ

ಚಿಕ್ಕಬಳ್ಳಾಪುರ, ಮೇ 29:2 ತಿಂಗಳ ರಜೆ ನಂತರ ಜಿಲ್ಲಾದ್ಯಂತ ಸರ್ಕಾರಿ ಸೇರಿದಂತೆ ಎಲ್ಲ ಶಾಲೆಗಳು ಆರಂಭವಾಗುತ್ತಿವೆ. ಕೆಲವು ಖಾಸಗಿ ಶಾಲೆಗಳು ಈಗಾಗಲೇ ಶಾಲೆಗಳನ್ನು ತೆರೆದಿವೆ. ಇಂದಿನಿಂದ ಸರ್ಕಾರಿ ಶಾಲೆಗಳು ಆರಂಭವಾಗುತ್ತಿದ್ದು, ಎಲ್ಲ ಶಾಲೆ ಗಳನ್ನು ಶುಚಿಗೊಳಿಸಿ ಮೆ.31 ರಂದು ಮಕ್ಕಳನ್ನು ಸ್ವಾಗತಿಸಲು ನಾನಾ ತಯಾರಿಗಳು ನಡೆದಿವೆ.

ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರ ನೇಮಕಕ್ಕೂ ಗ್ರೀನ್ ಸಿಗ್ನಲ್ ಸಿಕ್ಕಿರುವ ಹಿನ್ನೆಲೆಯಲ್ಲಿ ಈ ಸಾಲಿನ ಶೈಕ್ಷಣಿಕ ವರ್ಷವನ್ನು ವ್ಯವಸ್ಥಿತವಾಗಿ ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.

School Re-Open Preparation In Chikkaballapur District

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ, ಗುಡಿಬಂಡೆ, ಶಿಡ್ಲಘಟ್ಟ, ಗೌರಿಬಿದನೂರು, ಚಿಂತಾಮಣಿ, ಬಾಗೇಪಲ್ಲಿ, ಚೇಳೂರು, ಮಂಚೇನಹಳ್ಳಿ ತಾಲೂಕಿನಾದ್ಯಂತ ಶಾಲೆಗಳ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಜೊತೆಗೆ ಮೆ.29 ಮತ್ತು 30 ರಂದು ಸ್ವಚ್ಛತೆ, ದಾಖಲಾತಿ ಸೇರಿದಂತೆ ಇನ್ನಿತರೆ ಕೆಲಸ ಕಾರ್ಯಗಳನ್ನು ನಿರ್ವಹಿಸಲಿದ್ದಾರೆ. ಮೆ.31 ರಂದು ಅದ್ಧೂರಿಯಾಗಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಿದ್ದಾರೆ.

ಈಗಾಗಲೇ 2 ತಿಂಗಳ ರಜೆ ಮುಗಿಸಿ ಶಾಲೆಗಳು ಪುನರ್ ಪ್ರಾರಂಭಿಸಲು ಬೇಕಾದ ಅಗತ್ಯ ಸಿದ್ಧತೆಗಳನ್ನು ಆಯಾ ಶಾಲೆಗಳ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗವು ಈಗಾಗಲೇ ಕೈಗೊಂಡಿದ್ದು ಶಾಲೆಗಳಲ್ಲಿ ಹಬ್ಬದ ವಾತಾವರಣ ಮೂಡಿಸುವುದು ಹಾಗೂ ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸಲು ಬೇಕಾದ ಯೋಜನೆಗಳನ್ನು ಸಹ ಹಾಕಿಕೊಂಡಿದ್ದಾರೆ. ಜೊತೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯಾ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಭೆ ನಡೆಸಿ ದಾಖಲಾತಿ ಹಾಗೂ ಶಾಲೆ ಆರಂಭದ ನಂತರ ಕೈಗೊಳ್ಳಬೇಕಾದ ವಿಚಾರಗಳ ಬಗ್ಗೆ ಸಮರ್ಗವಾಗಿ ಚರ್ಚಿಸಲಾಗಿದೆ.

ವಿದ್ಯಾರ್ಥಿಗಳ ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ

ಈ ಬಾರಿ ಬೇಸಿಗೆಯ ಪ್ರಮಾಣ ಹೆಚ್ಚಿತ್ತು . ಸುಮಾರು 2 ತಿಂಗಳ ಕಾಲ ಬೇಸಿಗೆ ರಜೆ ನೀಡಲಾಗಿತ್ತು. ಸುದೀರ್ಘ ರಜೆ ಮುಗಿಸಿರುವ ವಿದ್ಯಾರ್ಥಿಗಳು ಶಾಲೆಗಳತ್ತ ಮುಖ ಮಾಡುವ ನಿರೀಕ್ಷೆಯಲ್ಲಿ ಶಿಕ್ಷಣ ಇಲಾಖೆ ಯೋಜನೆ ರೂಪಿಸಿಕೊಂಡಿದ್ದಾರೆ. ಮೆ.31 ರಂದು ಶಾಲೆಯ ಆವರಣ , ಕೊಠಡಿ ಸೇರಿದಂತೆ ಶಾಲೆ ಸಂಪೂರ್ಣ ವಿವಿಧ ಹೂವು, ತಳಿರು ತೋರಣಗಳಿಂದ ಸಿಂಗರಿಸಿ, ಮದುವಣಗಿತ್ತಿಯಂತೆ ಸಿಂಗಾರಗೊಳಿಸಲು ಯೋಜನೆ ರೂಪಿಸಲಾಗಿದೆ.

School Re-Open Preparation In Chikkaballapur District

ಆರಂಭಕ್ಕೂ ಮುನ್ನ ಶಾಲೆ ಸೇರಿದ ಸಮವಸ್ತ್ರ-ಪಠ್ಯಪುಸ್ತಕ

ಕಳೆದ ಕೆಲ ವರ್ಷಗಳಿಂದ ರೂಢಿಯಲ್ಲಿದ್ದ ಸಿದ್ಧಾಂತವನ್ನು ಈ ಬಾರಿ ಬದಲಿಸಲಾಗಿತ್ತು. ಶಾಲೆ ಆರಂಭಕ್ಕೂ ಮುನ್ನವೇ ಎಲ್ಲಾ ತಾಲೂಕು ಮಟ್ಟದಲ್ಲಿ ಆಯಾ ಶಾಲೆಗಳಿಗೆ ಅಗತ್ಯವಿರುವ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತಿ ವರ್ಷ ಶಾಲೆ ಗಳಿಗೆ ಮಕ್ಕಳನ್ನು ಕರೆತರಲು ಅನೇಕ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆದರೂ ಶಾಲೆಯಿಂದ ದೂರು ಉಳಿಯುವವರೂ ಸಂಖ್ಯೆ ಇದ್ದೇ ಇರುತ್ತೆ. ಈ ಬಾರಿ ಹೆಚ್ಚಿನ ಪ್ರವೇಶ ಪಡೆಯಲು ನಾನಾ ಕಸರತ್ತುಗಳನ್ನು ನಡೆಸಲಾಗುತ್ತಿದೆ. ಆದಾಗಿಯೂ ಈ ಬಾರಿ ಶಾಲೆಗಳ ದಾಖಲಾತಿ ಹೆಚ್ಚಿಸಲು ಇಲಾಖೆ ಜೂನ್ 1ರಿಂದ ದಾಖಲಾತಿ ಆಂದೋಲನ ಹಾಗೂ ಜೂನ್ 1 ರಿಡ ಜೂನ್ 13ರ ತನಕ ಮಿಂಚಿನ ಸಂಚಾರ ಹಮ್ಮಿಕೊಳ್ಳುತ್ತಿದೆ. ಇದು ಒಂದು ತಿಂಗಳು ಕಾಲ ನಡೆಯಲಿದ್ದು, ಶಾಲೆಗಳಿಗೆ ಮಕ್ಕಳ ಕರೆ ತರುವ ಪ್ರಯತ್ನಗಳು ನಡೆಯಲಿವೆ.

ಬಳಕೆಗೆ ಯೋಗ್ಯವಲ್ಲದ 258 ಕೊಠಡಿಗಳು

ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ತಾಲೂಕುಗಳಲ್ಲಿ ಒಟ್ಟು 258 ಶಾಲಾ ಕೊಠಡಿಗಳು ಹಾಳಾಗಿದ್ದು, ನೆಲಸಮಗೊಳಿಸ ಬೇಕಿದೆ. ಬಾಗೇಪಲ್ಲಿಯಲ್ಲಿ 39, ಚಿಕ್ಕಬಳ್ಳಾ ಪುರದಲ್ಲಿ 54, ಚಿಂತಾಮಣಿಯಲ್ಲಿ71, ಗುಡಿಬಂಡೆ ತಾಲೂಕಿನಲ್ಲಿ 16, ಗೌರಿಬಿದನೂರು ತಾಲೂಕಿನಲ್ಲಿ 49 ಹಾಗೂ ಶಿಡ್ಲಘಟ್ಟ ತಾಲೂಕಿ ನಲ್ಲಿ ಒಟ್ಟು 29 ಕೊಠಡಿಗಳು ಬಳಸಲು ಯೋಗ್ಯವಿಲ್ಲ, ಹಾಗಾಗಿ ಇವುಗಳನ್ನು ಕೆಡವಬೇಕಾಗಿದೆ. ಉಳಿದಂತೆ ಎಲ್ಲ ಶಾಲೆಗಳಲ್ಲೂ ಅಗತ್ಯಕ್ಕೆ ತಕ್ಕಂತೆ ಹೊಸ ಕೊಠಡಿಗಳನ್ನು ನಿರ್ಮಾಣ ಮಾಡುವ ಕಾರ್ಯ ನಡೆದಿದೆ.

School Re-Open Preparation In Chikkaballapur District

ಇನ್ನು ಕೆಲವೆಡೆ ಶೌಚಾಲಯ, ಕುಡಿಯುವ ನೀರು, ಕ್ರೀಡಾಂಗಣ ಸೇರಿದಂತೆ ನಾನಾ ಮೂಲಸೌಕರ್ಯ ಕೊರತೆಯಿದೆ. ಕೆಲವು ಶಾಲೆಗಳಲ್ಲಿ ಒಂದೇ ಕೊಠಡಿಯಲ್ಲಿ 2-3 ತರಗತಿಗಳನ್ನು ನಡೆಸಬೇಕಾದ ಅನಿವಾರ್ಯತೆಯೂ ಇದೆ. ಶಿಕ್ಷಕರ ಕೊರತೆ ನೀಗಿಸಲು ಜಿಲ್ಲೆಗೆ 500ಕ್ಕೂ ಹೆಚ್ಚು ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ ನೀಡಲಾಗಿದ್ದು, ಶಿಕ್ಷಕರ ಕೊರತೆ ನೀಗುವ ಸಂಭವವಿದೆ.

ಶಾಲಾ ಪ್ರಾರಂಭೋತ್ಸವದ ದಿನದಂದು ಎಲ್ಲಾ ಶಾಲೆಯವರು ಅವರ ಮಟ್ಟದಲ್ಲೇ ಸ್ವಾಗತಕ್ಕೆ ಸಿದ್ಧತೆ ಮಾಡಲು ತಿಳಿಸಲಾಗಿದೆ. ಬಿಸಿಯೂಟವಾಗಿ ಸಿಹಿ ತಿನಿಸಿನೊಂದಿಗೆ ಮಕ್ಕಳನ್ನು ಸ್ವಾಗತಿಸಲು ಸೂಚನೆ ನೀಡಲಾಗಿದೆ. ಕೆಲವು ಕಡೆ ಶಾಲಾ ಆವರಣ ಮತ್ತು ಕೊಠಡಿಗಳಿಗೆ ಮಾವಿನ ತೋರಣ, ಬಾಳೆದಿಂಡಿನ ಅಲಂಕಾರ ತಯಾರಿ ನಡೆದಿದೆ. ಶಾಲೆಯ ಅಂಗಣದಲ್ಲಿ ರಂಗೋಲಿಗಳು ಮಕ್ಕಳನ್ನು ಕೈಬೀಸಿ ಕರೆಯಲಿದ್ದು, ಮಕ್ಕಳಿಗೆ ಗುಲಾಬಿ, ಸಿಹಿ ನೀಡಿ ಶಾಲೆಗೆ ಬರಮಾಡಿಕೊಳ್ಳಲು ಸಿದ್ಧತೆ ನಡೆದಿದೆ.

ಜೂನ್ 1ರಂದು ವಿದ್ಯಾರ್ಥಿಗಳ ಕೈ ಸೇರಲಿವೆ ಸಮವಸ್ತ್ರ

ಶಾಲೆಗಳಿಗೆ ಪೂರೈಕೆಯಾಗಿರುವ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲು ಆಯಾ ಶಾಲೆಗಳ ಶಿಕ್ಷಕರು ಭರದಿಂದ ಸಿದ್ಧತೆ ಮಾಡಿಕೊಂಡಿದ್ದಾರೆ.

ಈ ಕುರಿತು ಚಿಕ್ಕಬಳ್ಳಾಪುರ ಡಿಡಿಪಿಐ ಜಯರಾಮರೆಡ್ಡಿ ಪ್ರತಿಕ್ರಿಯೆ ನೀಡಿದ್ದು 'ಸೋಮವಾರದಿಂದ ಶಾಲೆಗಳ ಆರಂಭಕ್ಕೆ ಈಗಾಗಲೇ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿ ಸೂಚನೆ ನೀಡಲಾಗಿದೆ. ಶಾಲೆಗಳ ಆರಂಭದ ದಿನ ಮಕ್ಕಳನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಸಮವಸ್ತ್ರ ಮತ್ತು ಪಠ್ಯಪುಸ್ತಕಗಳು ಈಗಾಗಲೇ ಶಾಲೆಗಳಿಗೆ ಸೇರಿದ್ದು ಕೆಲವೆಡೆ ವಿತರಿಸಲಾಗಿದ್ದು ಉಳಿದಂತೆ ಎಲ್ಲೆಡೆ ಶಾಲೆ ಪ್ರಾರಂಭವಾದ ಕೂಡಲೆ ಮಕ್ಕಳಿಗೆ ವಿತರಿಸಲಿದ್ದಾರೆ' ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶಾಸಕರ ಪಣ

ನೂತನವಾಗಿ ಆಯ್ಕೆಯಾಗಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್‌ ಈಶ್ವರ್‌ ಪ್ರತಿಕ್ರಿಯೆ ನೀಡಿದ್ದು, ಸರಕಾರಿ ಶಾಲೆಗಳ ವಿಶೇಷ ಗಮನ ನೀಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಸರಕಾರಿ ಮತ್ತು ಅನುದಾನಿತ ಸರಕಾರಿ ಪ್ರೌಢಶಾಲೆಗಳಲ್ಲಿ ಆರಂಭದಿಂದಲೇ ಕಾರ್ಪೊರೇಟ್ ಮಾದರಿಯ ಶಿಕ್ಷಣ ನೀಡಲಾಗುವುದು. ಈ ಬಾರಿ ಸರಕಾರಿ ಶಾಲೆಗಳಿಂದ 100% ಫಲಿತಾಂಶದ ಜೊತೆಗೆ, ಪೂರ್ಣಾಂಕ ಗಳಿಸುವಂತೆ ಮಾಡಲು ರೂಪರೇಷೆ ತಯಾರಿಸಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೇ, ತಾನೇ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಹೇಳಿ ಕೊಡುತ್ತೇನೆ. ಸರ್ಕಾರಿ ಶಾಲೆಗಳಲ್ಲೂ ಉತ್ತಮ ಶಿಕ್ಷಣ ಒದಗಿಸುವುದೇ ನನ್ನ ಗುರಿ ಎಂದಿದ್ದಾರೆ.

ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿನಿಯರಿಗೆ ನೋಟ್ ಬುಕ್ ವಿತರಣೆ

ಚಿಕ್ಕಬಳ್ಳಾಪುರ ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಬಾಲಕೀಯರ ಪ್ರೌಢಶಾಲೆಯಲ್ಲಿ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿನಿಯರಿಗೆ ಉಚಿತವಾಗಿ ನೋಟ್ ಬುಕ್ ಹಾಗೂ ಬ್ಯಾಗ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಸಂದೀಪ್ ರೆಡ್ಡಿ ಮಾತನಾಡಿ ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಸದಾ ಸಿದ್ಧ ಇರುವುದಾಗಿ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+