ಇಂದಿನಿಂದ ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ, ತಪ್ಪಿದ್ರೆ ದಂಡ
ಚಿಕ್ಕಬಳ್ಳಾಪುರ, ನವೆಂಬರ್ 02: ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ ಅಭಿಯಾನ ಇಂದಿನಿಂದ ಪರಿಣಾಮಕಾರಿ ರೂಪ ಪಡೆಯಲಿದ್ದು, ಜಿಲ್ಲೆಯ ಜನರು ಇದಕ್ಕೆ ಸಹಕರಿಸಬೇಕು. ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 'ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ ಅಭಿಯಾನ' ಜಾರಿಯ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಈವರೆಗೆ ವರ್ತಕರಿಗೆ, ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಹಾಗೂ ಪ್ಲಾಸ್ಟಿಕ್ ಬದಲಾಗಿ ಇತರ ಮಾರ್ಗೋಪಾಯಗಳ ಬಳಕೆ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಜಿಲ್ಲೆಯಾದ್ಯಂತ ಕಳೆದ ಮೂರು ತಿಂಗಳಿಂದ ಮಾಡಲಾಗಿದೆ.

ಜನರು ಸಹ ಸಾಕಷ್ಟು ಜಾಗೃತಿ ಹೊಂದಿದ್ದಾರೆ. ಇಷ್ಟೆಲ್ಲಾ ಯುಕ್ತ ಕ್ರಮಗಳ ಮಧ್ಯೆಯು ಯಾರಾದರೂ ನಿಷೇಧಿತ ಪ್ಲಾಸ್ಟಿಕ್ ಬಳಸಿದರೆ, ಬಳಸಲು ಪ್ರೇರಿಪಿಸಿದರೆ ಅಂತಹವರಿಗೆ ಕಾನೂನು ರೀತಿಯ ದಂಡ ವಿಧಿಸುವ ಕಾರ್ಯ ಪರಿಣಾಮಕಾರಿಯಾಗಿ ಜಾರಿಯಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬ್ಯಾಗ್‌ಗಳ ಬದಲಾಗಿ ಬಟ್ಟೆಚೀಲಗಳನ್ನು ಬಳಸಬೇಕು ಎಂದರು.
ಮನೆಯಿಂದಲೇ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ನೀಡಬೇಕು. ಎಲ್ಲೆಂದರಲ್ಲಿ ಕಸವನ್ನು ಎಸೆಯಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಪಾನ್ ಜಗಿದು ಉಗಿಯುವುದು, ಮಲಮೂತ್ರ ವಿಸರ್ಜಿಸಿ ಮಾಲಿನ್ಯ ಮಾಡುವುದು, ಬಯೋ ಮೆಡಿಕಲ್ ವೆಸ್ಟನ್ನು ಎಸೆಯುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಅಂತಹವರ ವಿರುದ್ಧ ಮೂಲಾಜಿಲ್ಲದೆ ಜಿಲ್ಲಾಡಳಿತದ ಸಕ್ಷಮ ಅಧಿಕಾರಿಗಳು ಆಯಾ ಹಂತದಲ್ಲಿ ಕ್ರಮ ಕೈಗೊಳ್ಳುತ್ತಾರೆ. ಗ್ರಾಮಾಂತರ ಪ್ರದೇಶದಲ್ಲಿಯೂ ಈ ಕಾರ್ಯಗಳು ಪರಿಣಾಮಕಾರಿಯಾಗಿ ನಾಳೆಯಿಂದ ಜಾರಿಯಾಗುತ್ತವೆ ಎಂದು ಹೇಳಿದರು.

ಕನ್ನಡ ರಾಜ್ಯೋತ್ಸವ ದಿನದಂದು ನಮ್ಮ ನೆಲ,ಜಲ, ಪರಿಸರ ಸಂರಕ್ಷಿಸುವ 'ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ ಅಭಿಯಾನ' ದ ಚಾಲನೆ ಮೂಲಕ ವಿಭಿನ್ನವಾಗಿ ಕನ್ನಡ ರಾಜ್ಯೋತ್ಸವನ್ನು ಆಚರಣೆ ಮಾಡಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಈ ಹಿಂದೆ ಹೇಳಿದಂತೆ ಕಿರುಚಿತ್ರ, ಸಾಕ್ಷ್ಯಚಿತ್ರಗಳ ಬಿತ್ತರಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಮತ್ತು ಘನ,ದ್ರವ,ತ್ಯಾಜ್ಯ ಸೂಕ್ತ ವಿಲೇವಾರಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಕರ ಪತ್ರಗಳು, ಬಿತ್ತಿಪತ್ರಗಳ ವಿತರಣೆ, ಜಾಹೀರಾತು ಫಲಕಗಳ ಮೂಲಕ ಜಿಲ್ಲೆಯಾದ್ಯಂತ ಏಕ ಕಾಲಕ್ಕೆ ಪ್ರಚಾರ ಕೈಗೊಂಡು ಜಾಗೃತಿ ಕಾರ್ಯಗಳು ಜರುಗಲಿದೆ. ಜೊತೆಗೆ ಪ್ಲಾಸ್ಟಿಕ್ ಬಳಸುವವರ ಮೇಲೆ ದಂಡ ವಿಧಿಸಲು ದಾಳಿ ಕಾರ್ಯಗಳು ಇಂದಿನಿಂದ ನಡೆಯಲಿವೆ.
ಇನ್ನು 'ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ ಅಭಿಯಾನ' ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಜಿಲ್ಲಾ ಅರಣ್ಯಾಧಿಕಾರಿ ರಮೇಶ್, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ.ಎನ್.ಭಾಸ್ಕರ್, ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.











Click it and Unblock the Notifications