ಚಿಕ್ಕಬಳ್ಳಾಪುರದಲ್ಲಿ ಗಣಿಗಾರಿಕೆ ಸದ್ದು, ಜನ ಸಾಮಾನ್ಯರ ಬದುಕು ದುಸ್ಥರ: ಈ ಬಗ್ಗೆ ಶಾಸಕರು ಹೇಳಿದ್ದೇನು?
ಚಿಕ್ಕಬಳ್ಳಾಪುರ, ನವೆಂಬರ್, 06: ಬಳ್ಳಾರಿಯ ಐರನ್‍ಒರ್ ಗಣಿಗಾರಿಕೆಯನ್ನೇ ಮೀರಿಸಿ ಚಿಕ್ಕಬಳ್ಳಾಪುರದಲ್ಲಿ ಕಲ್ಲು ಗಣಿಗಾರಿಕೆ ಬೆಳೆದುನಿಂತಿದ್ದು, ಜನ ಸಾಮಾನ್ಯರ ಅರೋಗ್ಯದ ಪರಿಣಾಮ ಬಿರುತ್ತಿದೆ. ಆದ್ದರಿಂದ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವ ಮಾತುಗಳು ಒಂದೆಡೆ ಶಾಸಕರು ಹಾಗೂ ಶಾಸಕರ ಅಭಿಮಾನಿಗಳಿಂದ ಕೇಳಿಬರುತ್ತಿದೆ.
ಮತ್ತೊಂದೆಡೆ ಚಿಕ್ಕಬಳ್ಳಾಪುರದಲ್ಲಿ ಕಲ್ಲುಕ್ವಾರಿ, ಸ್ಟೋನ್ ಕ್ರಷರ್, ಗ್ರಾನೈಟ್ ಗಣಿಗಾರಿಕೆಯಿಂದ ಸರ್ಕಾರಕ್ಕೆ ಹರಿದು ಬರುತ್ತಿರುವ ಆದಾಯದ ಮೂಲವಾದ ರಾಜಧನ-ರಾಯಲ್ಟಿಯನ್ನು ಕಳೆದುಕೊಳ್ಳಲು ಸರ್ಕಾರ ಶಾಸಕರ ಬೆಂಬಲಿಗರ ಒತ್ತಡಕ್ಕೆ ಮಣಿಯುತ್ತಾ, ಇದು ಸಾಧ್ಯವೇ ಎಂಬ ಪ್ರಶ್ನೆಯು ಸಹ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ.

ಕಳೆದ ಕೆಲ ದಿನಗಳಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗಣಿಗಾರಿಕೆ ನಿಷೇಧ ಸಮರ ಶುರುವಾಗಿದೆ. ಮಿತಿ ಮೀರಿರುವ ಕಲ್ಲು ಗಣಿಗಾರಿಕೆಗೆ ಬ್ರೇಕ್ ಹಾಕುತ್ತೇವೆ ಎಂದು ಶಾಸಕ ಪ್ರದೀಪ್ ಈಶ್ವರ್ ಪಟ್ಟು ಹಿಡಿದು ಕೂತಿದ್ದಾರೆ. ಮತ್ತೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಏಕಾಏಕಿ ಬಂದ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದು ಹಲವು ಗೊಂದಲಗಳಿಗೆ ಕಾರಣವಾಗಿದೆ.
ಅದರಲ್ಲೂ ಶಾಸಕ ಪ್ರದೀಪ್ ಈಶ್ವರ್ ಹಾಗೂ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ಸ್ವಗ್ರಾಮವಾದ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಿತಿಮೀರಿದ ಗಾಣಿಗರಿಕೆ ನಡೆಯಲು ಮಾಜಿ ಸಚಿವರ ಕೃಪಾ ಕಟಾಕ್ಷವೇ ಕಾರಣ ಎಂಬ ವಾದ ಪ್ರತಿ ವಾದವು ನಡೆಯುತ್ತಿದೆ.
ಗಾಣಿಗರಿಕೆ ಬಂದ್ ಮುನ್ನಲೆಗೆ ಕಾರಣವೇನು?
ಪೆರೇಸಂದ್ರ ಮತ್ತು ಮಂಡಿಕಲ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಆರೋಗ್ಯ ಮೇಳಗಳಲ್ಲಿ ಕಂಡುಬಂದ ಆರೋಗ್ಯ ಸಮಸ್ಯೆಗಳಿಗೆ ಗಣಿಗಾರಿಕೆಯ ಧೂಳೇ ಕಾರಣ ಎಂದು ದೃಢಪಟ್ಟಿದೆ. ಹೀಗಾಗಿ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಗಣಿಗಾರಿಕೆ ಬಂದ್ ಮಾಡುವ ಹೇಳಿಕೆ ನೀಡಿದ ಬೆನ್ನಲೇ ಆ ಭಾಗದ ಜನರು ತಹಶೀಲ್ದಾರ್ ಕಚೇರಿ ಬಳಿ ಬೃಹತ್ ಪ್ರತಿಭಟನೆ ನಡೆಸಿ ಗಣಿಗಾರಿಕೆಯನ್ನು ಬಂದ್ ಮಾಡುವಂತೆ ಆಗ್ರಹಿಸಿದ್ದರು.
ಮತ್ತೊಂದೆಡೆ ಪ್ರದೀಪ್ ಈಶ್ವರ್ ಅವರ ಗಣಿ ಬಂದ್ ಕುರಿತ ಹೇಳಿಕೆಗೆ ದನಿ ಗೆಗೂಡಿಸಲು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಪೋಸ್ಟರ್ ಅಭಿಯಾನವನ್ನೂ ಶುರುಮಾಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲೆಯಲ್ಲಿ ಬರೋಬ್ಬರಿ 203 ಕಲ್ಲು ಕ್ವಾರಿಗಳು ಹಾಗೂ 77 ಕ್ರಷರ್‌ಗಳು ತಲೆ ಎತ್ತಿವೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚು ಕ್ರಷರ್ ಮತ್ತು ಕಲ್ಲು ಕ್ವಾರಿಗಳಿವೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದಾಗ ಆ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಗೆ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಅಲ್ಲಿನವರೆಲ್ಲ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ಆರಂಭಿಸಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗುತ್ತಿವೆ.
ಚಿಂತಾಮಣಿ ತಾಲೂಕಿನಲ್ಲಿ 3, ಶಿಡ್ಲಘಟ್ಟ, ಗೌರಿಬಿದನೂರು ತಾಲೂಕಿನಲ್ಲಿ ಗಣಿಗಾರಿಕೆ ನಡೆಯುತ್ತಿಲ್ಲ. ಉಳಿದೆಲ್ಲಾ ಗಣಿಗಾರಿಕೆ ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಮತ್ತು ಗುಡಿಬಂಡೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಜಿಲ್ಲೆ ಸೇರಿದಂತೆ ಬೆಂಗಳೂರಿನ ಬಹುಪಾಲು ಬೇಡಿಕೆಯನ್ನು ಈ ಕಲ್ಲು ಗಣಿಗಳೇ ನೀಗಿಸುತ್ತಿವೆ. ಹೀಗಾಗಿ ಈ ಕ್ರಷರ್ ಮತ್ತು ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸುವುದು ಸುಲಭದ ಮಾತಲ್ಲ. ಬಂಡವಾಳ ಶಾಹಿಗಳ ಕಪಿಮುಷ್ಟಿಯಲ್ಲಿರುವ ಕಲ್ಲು ಗಣಿಗಾರಿಕೆಯನ್ನು ಬಂದ್ ಮಾಡುವುದು ಜೇನುಗೂಡಿಗೆ ಕಲ್ಲು ಹಾಕಿದಂತೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.
ಬೃಹತ್ ನಿರ್ಮಾಣ ಸಂಸ್ಥೆಗಳು ಇದೇ ಕಲ್ಲು ಗಣಿಗಳನ್ನು ಅವಲಂಭಿಸಿರುವುದರಿಂದ ಬಂದ್ ಮಾಡಿದರೆ ನಿರ್ಮಾಣ ಕ್ಷೇತ್ರದ ಚಟುವಟಿಕೆಗಳಿಗೆ ಭಾರಿ ಹೊಡೆತ ಬೀಳಲಿದೆ. ಹೀಗಾಗಿ ಗಣಿಗಾರಿಕೆಯನ್ನು ಬಂದ್ ಮಾಡುವುದು ಕಷ್ಟ ಎನ್ನುವ ಪರಿಸ್ಥಿತಿ ಇದೆ.
ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‌ಗಳು ತಲೆ ಎತ್ತಿ ಹತ್ತಾರು ವರ್ಷಗಳೇ ಕಳೆದಿವೆ. ಕೆಲವು ಗಣಿಗಳ ಮೇಲೆ ಪರಿಶೀಲನೆ ಮಾಡಲಾಗಿದ್ದು, ಈ ವೇಳೆ ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆ ದಂಡ ವಿಧಿಸಿ ಬಂದ್ ಮಾಡಿದ ಹಿನ್ನೆಲೆ, ಗಣಿ ಮಾಲೀಕರು ಕೋರ್ಟ್ ಮೆಟ್ಟಿಲೇರಿರುವ ನಿದರ್ಶನಗಳಿವೆ. ಸದ್ಯ ಈಗ ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಏಕಾಏಕಿ ಗಣಿ ಬಂದ್ ಮಾಡಿದರೆ ಕಾನೂನಿನ ಹೋರಾಟಕ್ಕೂ ವೇದಿಕೆಯಾಗಬಹುದು. ಹೀಗಾಗಿ ಸದ್ಯಕ್ಕೆ ಕಾನೂನಿನ ಅನ್ವಯವೇ ಎಲ್ಲವನ್ನು ನಿಯಂತ್ರಣಕ್ಕೆ ತರಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಭಾಗದಲ್ಲಿ ಹಲವಾರು ವರ್ಷಗಳಿಂದ ಗಣಿಗಾರಿಕೆಗೆ ವಿರೋಧ ವ್ಯಕ್ತವಾಗಿದೆ. ಮಿತಿ ಮೀರಿದ ಟಿಪ್ಪರ್‌ಗಳ ಸಂಚಾರದಿಂದ ರಸ್ತೆಗಳು ಹಾಳಾಗಿವೆ. ನೂರಾರು ಹೆಕ್ಟೇರ್ ಕೃಷಿ ಭೂಮಿ ಕೆಲಸಕ್ಕೆ ಬಾರದಂತೆ ಆಗಿದೆ. ನೂರಾರು ಮಂದಿಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗಿವೆ. ಇದೆಲ್ಲದವರ ನಡುವೆಯೂ ಗಣಿಗಾರಿಕೆಗೆ ಅನುಮತಿ ನೀಡಿದ್ದು ಯಾಕೆ ಎಂಬುದೇ ಈಗ ಚರ್ಚೆಗೆ ಗ್ರಾಸವಾಗಿದೆ.
ಸಮನ್ವಯತೆ ಕೊರತೆ
ಗಣಿ ಇಲಾಖೆ ಅಧಿಕಾರಿಗಳು ಪೊಲೀಸ್ ಇಲಾಖೆ ಸಹಕಾರದೊಂದಿಗೆ 48ಕ್ಕೂ ಹೆಚ್ಚು ಕ್ರಷರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂದ್ ಮಾಡಲು ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಜಿಲ್ಲಾಧಿಕಾರಿಗಳು ಗಣಿಗಳ ಬಂದ್ ವಿಷಯವನ್ನು ಹಾಕಿದ್ದಾರೆ. ಕಾನೂನು ವ್ಯಾಪ್ತಿಯಲ್ಲೇ ಗಣಿಗಾರಿಕೆ ನಡೆಯುತ್ತಿರುವುದರಿಂದ ದಿಢೀರ್ ಬಂದ್ ಮಾಡಲು ಸಾಧ್ಯವಿಲ್ಲ ಎಂದು ಸಷ್ಟನೆ ನೀಡಿದ್ದು, ಇಲಾಖೆ ಮತ್ತು ಜನಪ್ರತಿನಿಧಿಗಳ ಗಣಿ ಬಂದ್ ವಿಚಾರದಲ್ಲಿ ಸಮನ್ವಯತೆ ಕೊರತೆ ಎದುರಾಗಿದೆಯಾ ಎನ್ನುವ ಅನುಮಾನ ಮೂಡಿದೆ.
ಮತ್ತೊಂದೆಡೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಬೇರೆ ಯಾರೋ ಬಂದು ನನ್ನ ಕ್ಷೇತ್ರದಲ್ಲಿ ಗಣಿಗಾರಿಕೆ ಮಾಡಿ ಜನರ ಜೀವಕ್ಕೆ ತೊಂದರೆ ಕೊಡುತ್ತಿದ್ದರೆ ಅವರನ್ನು ಹಾಗೆಯೇ ಬಿಡುವ ಪ್ರಶ್ನೆಯೇ ಇಲ್ಲ. ಕಾನೂನು ಮೀರಿ ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದು ನಿಶ್ಚಿತ. ಮಿತಿ ಮೀರಿದ ಕಲ್ಲು ಗಣಿಗಾರಿಕೆಯಿಂದ ಪೆರೇಸಂದ್ರ ಮತ್ತು ಮಡಿಕಲ್ ವ್ಯಾಪ್ತಿಯಲ್ಲಿ ಸಾಕಷ್ಟು ಜನರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಕಠಿಣ ಕ್ರಮ ಅನಿವಾರ್ಯ ಎಂದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಸಿ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಕಲ್ಲು ಗಣಿಗಾರಿಕೆಗಳನ್ನು ಏಕಾಏಕಿ ಬಂದ್ ಮಾಡುವುದ ಕಷ್ಟ. ಬಂದ್ ಮಾಡಿಸಿದರೆ ಗಣಿ ಮಾಲೀಕರು ಕಾನೂನು ಹೋರಾಟ ನಡೆಸುತ್ತಾರೆ. ಹೀಗಾಗಿ ಕಾನೂನು ಉಲ್ಲಂಘಿಸುವ ಗಣಿಗಾರಿಕೆಗಳವರನ್ನು ಮೊದಲು ಎಚ್ಚರಿಸುವ ಕೆಲಸ ಆಗಬೇಕಿದೆ. ಜನರಿಗೆ ಸಮಸ್ಯೆಯಾದರೆ ಅವರ ದೂರಿನ ಆಧಾರದಲ್ಲಿ ಬೇಕಾದರೆ ಕ್ರಮ ಕೈಗೊಳ್ಳಬಹುದು. ಹತ್ತಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಗಣಿಗಾರಿಕೆಯನ್ನು ಏಕಾಏಕಿ ನಿಲ್ಲಿಸುವುದು ಆತುರದ ನಿರ್ಧಾರವಾಗಲಿದೆ ಎಂದಿದ್ದಾರೆ.












Click it and Unblock the Notifications