ಚಿಕ್ಕಬಳ್ಳಾಪುರ: ಶಿಡ್ಲಘಟ್ಟದಲ್ಲಿ ನೂತನ ಹೈಟೆಕ್ ರೇಷ್ಮೆ ಮಾರುಕಟ್ಟೆಗೆ ಸ್ಥಳ ನಿಗದಿ
ಚಿಕ್ಕಬಳ್ಳಾಪುರ, ಜುಲೈ 28: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟವು ದೇಶದಲ್ಲಿಯೇ ಅತೀ ಹೆಚ್ಚು ರೇಷ್ಮೆ ವಹಿವಾಟು ನಡೆಸುವ ತಾಣವಾಗಿದೆ. ಇಂತಹ ರೇಷ್ಮೆ ಮಾರುಕಟ್ಟೆಯನ್ನು ಮತ್ತಷ್ಟು ಉನ್ನತಿಕರಿಸಲು ರಾಜ್ಯ ಸರಕಾರವು ಮಂಡಿಸಿದ ಬಜೆಟ್‌ನಲ್ಲಿ ಶಿಡ್ಲಘಟ್ಟ ನಗರದಲ್ಲಿ ಹೈಟೇಕ್ ಮಾರುಕಟ್ಟೆ ನಿರ್ಮಿಸಲು 75ಕೋಟಿ ರೂಪಾಯಿ ಅನುದಾನವನ್ನು ಸಹ ಘೋಷಿಸಿದೆ.
ಸರಕಾರವು ಹಣ ಘೋಷಿಸಿದರು ಸಹ ಮಾರುಕಟ್ಟೆ ನಿರ್ಮಾಣಕ್ಕೆ ಜಾಗದ ಸಮಸ್ಯೆ ಎದುರಾಗಿ ಯಾವ ಜಾಗದಲ್ಲಿ ನಿರ್ಮಾಣ ಮಾಡುವುದು, ಹೈಟೇಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಿಸಲು ಸೂಕ್ತ ಜಾಗ ಯಾವುದು ಎನ್ನುವ ಚರ್ಚೆಗಳು ಸಹ ನಡೆದಿದ್ದವು.

ಪ್ರಾರಂಭದಲ್ಲಿ ಶಿಡ್ಲಘಟ್ಟ ತಾಲೂಕಿನ ಕೊತ್ತನೂರಿನ ಬಳಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕಾಗಿ ಜಿಲ್ಲಾಡಳಿತವು ಸ್ಥಳ ಗುರುತಿಸಿ ಕೊಟ್ಟಿತ್ತು. ಆದರೆ ಈ ಜಮೀನು ಶಿಡ್ಲಘಟ್ಟ ನಗರದಿಂದ ಸುಮಾರು 15 ಕಿಲೋ ಮೀಟರ್ ಹೆಚ್ಚು ದೂರ ಇದ್ದಿದ್ದರಿಂದ ರೈತರು ಈ ಸ್ಥಳದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ರೈತರಿಂದ ವಿರೋಧ ವ್ಯಕ್ತವಾಗುತ್ತಿದಂತೆ ರೇಷ್ಮೆ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಿಂದಲೂ ಸ್ಥಳಕ್ಕೆ ಭೇಟಿ ಮಾಡಿ ವಾಸ್ತವ ಅರಿತುಕೊಂಡು ಕೊತ್ತನೂರಿನ ಜಮೀನು ದೂರ ಎನ್ನುವ ಮಾತುಗಳಿಗೆ ಸಹಮತ ಸಹ ಮೂಡಿಬಂದಿತ್ತು.
ಸರ್ಕಾರ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ಮುತುವರ್ಜಿ ವಹಿಸಿದ್ದರೂ ಜಾಗದ ಸಮಸ್ಯೆ ಕಾರಣ ಗೊಂದಲ ಎದುರಾಗಿತ್ತು. ಆದರೆ ಈಗ ಈ ಎಲ್ಲದಕ್ಕೂ ತೆರೆ ಎನ್ನುವಂತೆ ಶಿಡ್ಲಘಟ್ಟ ಸಮೀಪದಲ್ಲಿಯೇ ಜಾಗ ದೊರೆತಿದ್ದು, ಶಾಸಕ ಬಿ. ಏನ್. ರವಿಕುಮಾರ್, ಹಾಗೂ ಅಧಿಕಾರಿಗಳು ಸೇರಿ ನಗರದ ಸಮೀಪದಲ್ಲಿರುವ ವಾರದನಾಯಕನಹಳ್ಳಿ ಹಾಗೂ ಹನುಮಂತಪುರ ಬಳಿ ಜಮೀನು ಗುರುತಿಸಿದ್ದಾರೆ. ಬಹುತೇಕ ಈ ಜಾಗವೇ ಅಂತಿಮಗೊಳ್ಳುವ ಸಾಧ್ಯತೆ ಇದ್ದು, ನಗರಕ್ಕೆ ಸರಿ ಸುಮಾರು ಒಂದೂವರೆ ಕಿ.ಮೀ ದೂರದಲ್ಲಿರುವ ಸ್ಥಳವೇ ಅಂತಿಮಗೊಳ್ಳುವ ಸಂಭವ ಇದ್ದು, ಇದರಿಂದ ರೈತರು ಮತ್ತು ರಿಲರ್ಸ್ ಗಳೂ ಸೀರಿದಂತೆ ರೇಷ್ಮೆ ಉದ್ದಿಮೆಯ ಮೇಲೆ ಅವಲಂಬಿತವಾಗಿರುವ ಎಲ್ಲರಿಗೂ ಅನುಕೂಲವಾಗಲಿದೆ.
ಪ್ರಸ್ತುತ ನಗರದಲ್ಲಿರುವ ರೇಷ್ಮೆ ಮಾರುಕಟ್ಟೆಯು 4.30 ಎಕರೆ ಇದೆ. ಇದಕ್ಕೆ ಹೈಟೆಕ್ ಸ್ಪರ್ಶ ನೀಡಲು ಕನಿಷ್ಠ 15 ಎಕರೆಯಷ್ಟು ಜಾಗದ ಅವಶ್ಯಕತೆ ಇರುವುದರಿಂದ ಇಷ್ಟು ಸ್ಥಳ ಗುರುತಿಸಿ ಕೊಡುವಂತೆ ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸಿದ್ದಾರು.
ರೇಷ್ಮೆ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರಾದ ಬಿ. ಎನ್. ರವಿಕುಮಾರ್ ರವರ ಸಮ್ಮುಖದಲ್ಲಿ ನಡೆಸಿರುವ ಜಂಟಿ ಸರ್ವೇಯಲ್ಲಿ ಹನುಮಂತಪುರ ಹಾಗೂ ವರದನಾಯಕನಹಳ್ಳಿ ಬಳಿ ಗುರುತಿಸಿರುವ ಜಗವು ಹೈಟೇಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಅವಶ್ಯಕತೆ ಇರುವಷ್ಟು ಜಾಗ ದೊರೆತಿರುವುದರಿಂದ ಆದಷ್ಟು ಬೇಗ ನೂತನ ಮಾರುಕಟ್ಟೆ ನಿರ್ಮಾಣವಾಗಲಿ ಎಂದು ರೈತರು ಹಾಗೂ ರಿಲರ್ಸ್ ಗಳು ಕಾಯುತ್ತಿದ್ದಾರೆ.

ನೂತನ ಮಾರುಕಟ್ಟೆಯ ಸೌಲಭ್ಯಗಳು
ರೇಷ್ಮೆ ಗೂಡಿನ ಪ್ರಮಾಣಕ್ಕೆ ತಕ್ಕಂತೆ ಬೃಹದಾಕಾರದ ಪ್ರಾಂಗಣ ಇರುವ ಗೋದಾಮು, ಕುಡಿಯುವ ನೀರು, ಮಹಿಳೆಯರು, ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ, ರೈತರಿಗೆ ವಿಶ್ರಾಂತಿ ಗೃಹಗಳು, ರೈತರ ಮಕ್ಕಳು ಆಟ ಆಡಲು ವ್ಯವಸ್ಥೆ, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ವಸತಿ ಗೃಹಗಳು ನಿರ್ಮಾಣವಗಳಿವೆ.
ವಾಣಿಜ್ಯ ವಹಿವಾಟು ನಡೆಸುವ ರೈತರಿಗೆ ಹಾಗೂ ರಿಲರ್ಸ್ ಗಳಿಗೆ ಅನುಕೂಲವಾಗಲೆಂದು ಮಾರುಕಟ್ಟೆಯಲ್ಲಿ ಪ್ರತ್ಯೇಕ ಬ್ಯಾಂಕ್, ಎ.ಟಿ. ಎಂ ಕೇಂದ್ರ, ಸುಸಜ್ಜಿತವಾದ ಪಾರ್ಕಿಂಗ್ ವ್ಯವಸ್ಥೆ, ವಿಶ್ರಾಂತಿ ಪಡೆಯಲು ಉಧ್ಯಾನವನ, ನೂತನ ತಾಂತ್ರಿಕತೆಯ ತೂಕದ ಯಂತ್ರಗಳು, ಜಾಲರಿಗಳನ್ನು ಕಾಯ್ದಿರಿಸುವ ಕೇಂದ್ರಗಳು ನಿರ್ಮಾಣ ವಾಗಲಿವೆ.
ಮಾರುಕಟ್ಟೆಗೆ ಉತ್ತಮ ಜಾಗ
ಹನುಮಂತಪುರದ ಸರ್ವೆ ನಂಬರ್ 11 ರಲ್ಲಿ 105 ಎಕರೆ ಸರ್ಕಾರಿ ಜಮೀನು ಇದೆ. ಇದರಲ್ಲಿ 130 ಎಕರೆ ಅರಣ್ಯ ಪ್ರದೇಶವಿದೆ, ಸರ್ಕಾರಿ ಕಚೇರಿಗಳಿಗೆ ಮತ್ತು ರೈತರಿಗೂ ಇಲ್ಲಿ ಜಮೀನು ಮಂಜೂರಾಗಿದೆ. ಈ ಗ್ರಾಮದ ಪಕ್ಕದ ವರದನಾಯಕನಹಳ್ಳಿಯ ಸರ್ವೆ ನಂಬರ್ 10 ರಲ್ಲಿ 500 ಎಕರೆ ಸರ್ಕಾರಿ ಜಮೀನು ಇದೆ ಇದರಲ್ಲಿ 208 ಎಕರೆ ಅರಣ್ಯ ಭೂಮಿ ಇದೆ. ಇಲ್ಲಿಯೂ ಕೆಲವು ಇಲಾಖೆಗಳಿಗೆ ಜಮೀನು ನೀಡಲಾಗಿದೆ ಎಂದು ಶಾಸಕ ಬಿ. ಎನ್. ರವಿ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಹನುಮಂತಪುರದ ಸರ್ವೇ ನಂಬರ್ 19 ಮತ್ತು ವರದನಾಯಕನಹಳ್ಳಿಯ ಸರ್ವೇ ನಂಬರ್ 10 ಕ್ಕೆ ಜಂಟಿ ಎನ್ನುವ ರೀತಿ ಅಕ್ಕಪಕ್ಕದಲ್ಲಿಯೇ 10 ರಿಂದ 17 ಎಕರೆಯಷ್ಟು ಜಮೀನು ಇದ್ದು ಈ ಜಾಗವನ್ನು ಸರ್ವೇ ಮಾಡಲು ಸೂಚಿಸಲಾಗಿದೆ. ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ಈ ಸ್ಥಳದಲ್ಲಿಯೇ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿದೆ.
ಪ್ರಸ್ತುತ ಗುರುತಿಸಿರುವ ಜಾಗವು ನಗರಕ್ಕೆ ಕೇವಲ ಒಂದೂವರೆ ಕಿ.ಮಿ ಇರುವುದರಿಂದ ಎಲ್ಲರಿಗೂ ಅನುಕೂಲ ಆಗಲಿದೆ. ಕೃಷಿ ಇಲಾಖೆ ಹಾಗೂ ಶಾಲೆಯೂ ಇದೇ ಸ್ಥಳದಲ್ಲಿ ಇದ್ದರು , ಇಲ್ಲಿ ಮೂಲಸೌಕರ್ಯಗಳು ಇನ್ನೂ ಅಭಿವೃದ್ಧಿ ಆಗಿಲ್ಲ ಎಲ್ಲ ದೃಷ್ಟಿಯಿಂದಲೂ ಈಗ ಕೋರಿರುವ ಜಾಗ ಉತ್ತಮವಾಗಿದೆ ಎಂಬುದು ಕೃಷಿಕರು ಹಾಗೂ ರೈತರ ಒಮ್ಮತದ ಅಭಿಪ್ರಾಯವಾಗಿದೆ.
ಆನ್ಲೈನ್ ವಹಿವಾಟು ಬಂದ್ ಆಗುತ್ತಾ?
ಮಾರುಕಟ್ಟೆಯಲ್ಲಿ ರೈತರು ಮತ್ತು ಮಾರಿಗಳು ವಹಿವಾಟು ನಡೆಸಿದರೆ ಸರ್ಕಾರಕ್ಕೂ ಹೆಚ್ಚು ಆದಾಯ ದೊರೆಯುತ್ತದೆ, ಆದರೆ ಬಹಳಷ್ಟು ವ್ಯಾಪಾರಿಗಳು ಆನ್‌ಲೈನ್ ವಹಿವಾಟಿನ ಕಾರಣ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿಲ್ಲ. ಬಹುತೇಕ ರಿಲರ್ಸ್ ಗಳು ರೈತರ ಮನೆಗಳಿಗೆ ಹೋಗಿ ಗೂಡು ಖರೀದಿಸುತ್ತಿದ್ದಾರೆ, ಇದರಿಂದ ಸರ್ಕಾರಕ್ಕೂ ನಷ್ಟವಾಗುತ್ತದೆ. ಹೈಟೆಕ್ ಮಾರುಕಟ್ಟೆ ನಿರ್ಮಾಣವಾದ ಮೇಲೆ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತದೆ, ಆಗ ಆನ್‌ಲೈನ್ ವಹಿವಾಟ ನಿಲ್ಲಿಸಬೇಕು ಎಂದು ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಶಾಸಕರಾದ ಬಿ. ಎನ್. ರವಿಕುಮಾರ್ ಹೇಳಿದ್ದಾರೆ.












Click it and Unblock the Notifications