ಒಲಿದು ಬಂದರೂ ನಿಗಮ ಮಂಡಳಿ ಪಟ್ಟ ನಿರಾಕರಿಸಿದ ಶಾಸಕ ಸುಬ್ಬಾರೆಡ್ಡಿ: ಸಚಿವ ಸ್ಥಾನಕ್ಕೆ ಪಟ್ಟು
ಚಿಕ್ಕಬಳ್ಳಾಪುರ ಫೆಬ್ರವರಿ 1: ರಾಜ್ಯ ಸರಕಾರ ಈಗ ಕಾಂಗ್ರೆಸ್ ಅಧಿಪತ್ಯದಲ್ಲಿದೆ. ಈ ಬಾರಿ ಜಿಲ್ಲೆಯ ಸಾಕಷ್ಟು ಮಂದಿ ಕಾಂಗ್ರೆಸ್ ಮುಖಂಡರು ನಿಗಮ ಮಂಡಳಿ ಅಧ್ಯಕ್ಷರಾಗುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಸಾಕಷ್ಟು ಮಂದಿ ಲಾಬಿಯನ್ನೂ ಜೋರಾಗೇ ಮಾಡಿದ್ದರು. ಆದರೆ, ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ಯಾರಿಗೂ ನಿಗಮ ಮಂಡಳಿ ಅಧ್ಯಕ್ಷ ಗಿರಿ ಸಿಗುವುದು ಅನುಮಾನವಾಗಿದೆ. ಹೀಗಾಗಿ ಜಿಲ್ಲೆಯ ಕಾಂಗ್ರೆಸ್ ಪಾಳಯದಲ್ಲಿದ್ದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಸೆ ಕಮರಿದೆ.
ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರಿಗೆ ರಾಜ್ಯ ಬೀಜ ನಿಗಮ ನಿಯಮಿತದ ಅಧ್ಯಕ್ಷಗಿರಿ ಒಲಿದರೂ ಅವರು ಅದನ್ನು ನಿರಾಕರಿಸಿದ್ದಾರೆ. ನಾನು ನಿಗಮ ಮಂಡಳಿ ಅಧ್ಯಕ್ಷಗಿರಿಗೆ ಅರ್ಜಿ ಹಾಕಿಕೊಂಡಿಲ್ಲ. ನಾನೂ ಲಾಬಿನೂ ಮಾಡಿಲ್ಲ. ನಗರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡವೇ ಬೇಡ ಎಂದು ತಳ್ಳಿಹಾಕಿದ್ದಾರೆ. ಜನರಿಗೆ ಅನುಕೂಲ ವಾಗುವಂತಹ ಸಚಿವ ಗಿರಿ ಕೊಡಿ ಎನ್ನುವ ಬೇಡಿಕೆಯನ್ನು ಬಹಿರಂಗವಾಗೇ ಹೇಳಿದ್ದಾರೆ.

ಸ್ಥಾನಮಾನ ಅನುಮಾನ: ಜಿಲ್ಲಾ ಕಾಂಗ್ರೆಸ್ ನಲ್ಲಿ ನಿಗಮ ಮಂಡಳಿ ಅಧ್ಯಕ್ಷಗಿರಿ ರೇಸ್‌ನಲ್ಲಿ ಸಾಕಷ್ಟು ಮಂದಿ ಇದ್ದಾರೆ. ಮಾಜಿ ಶಾಸಕರು ಪ್ರಬಲ ಜನಾಂಗದ ಮುಖಂಡರು ಹೀಗೆ ಹತ್ತಾರು ಮಂದಿ ನಿಗಮ ಮಂಡಳಿ ಅಧ್ಯಕ್ಷಗಿರಿ ಸಿಗುವ ನಿರೀಕ್ಷೆಯಲ್ಲಿದ್ದರು. ಕೆಲವರು ಕಾಂಗ್ರೆಸ್ ಹೈಕಮಾಂಡ್ ಬಳಿ ದೊಡ್ಡ ಮಟ್ಟದ ಲಾಬಿಯನ್ನೂ ಮಾಡಿದ್ದರು. ಆದರೆ, ಜಿಲ್ಲೆಗೆ ಸದ್ಯಕ್ಕಂತೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗುವುದು ಅನುಮಾನ ಎನ್ನುವ ಪರಿಸ್ಥಿತಿ ಇದೆ.
ಚುನಾವಣೆ ಮೇಲೆ ಪರಿಣಾಮ: ಇನ್ನು ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಎದುರಾಗಲಿದೆ. ಹೀಗಾಗಿ ನಿಗಮ ಮಂಡಳಿ ಅಧ್ಯಕ್ಷಗಿರಿ ಯಾರಿಗಾದರೂ ಸಿಕ್ಕಿದ್ದರೆ ಪಕ್ಷ ಸಂಘಟನೆಗೆ ಒಂದಿಷ್ಟು ಅನುಕೂಲವಾಗುತ್ತಿತ್ತು. ಆದರೆ, ಸದ್ಯದ ಮಟ್ಟಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿಯ ಆಸೆಯಲ್ಲಿದ್ದವರೇ ಕೈ ಚೆಲ್ಲಿ ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯಾದ್ಯಂತ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರು ವುದರಿಂದ ಜಿಲ್ಲೆಯ ಮುಖಂಡರಿಗೆ ಅಧ್ಯಕ್ಷಗಿರಿ ಸಿಗುವುದು ಅಸಾಧ್ಯವಾಗಿದೆ.
ಬಿಜೆಪಿ ಸರಕಾರದಲ್ಲಿ ಬಂಪರ್: ಹಿಂದಿನ ಬಿಜೆಪಿ ಸರಕಾರದಲ್ಲಿ ಜಿಲ್ಲೆಯಲ್ಲಿ ನಾಲೈದು ಮಂದಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ಸಿಕ್ಕಿತ್ತು. ಹೀಗಾಗಿ ಈ ಬಾರಿ ಕಾಂಗ್ರೆಸ್ ಸರಕಾರ ಇರುವುದರಿಂದ ಜಿಲ್ಲೆಯಲ್ಲಿರುವ ಪ್ರಭಾವಿ ನಾಯಕರಿಗೆ ಆಯಕಟ್ಟಿನ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ಸರಿಯಾಗಿ ಲಾಬಿ ಮಾಡು ವವರು ಮತ್ತು ಶಿಫಾರಸು ಮಾಡುವವರ ಕೊರತೆಯಿಂದ ನಿಗಮ ಮಂಡಳಿ ಅಧ್ಯಕ್ಷಗಿರಿ ಕೈತಪ್ಪುವುದು ಬಹುತೇಕನಿಶ್ಚಿತ ಎನ್ನುವಂತಾಗಿದೆ.
ಯಾರಿಗೆ ಸಿಗುತ್ತೆ ಚಾನ್ಸ್ ?
ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರಿಗೆ ಕೊಟ್ಟಿದ್ದ ನಿಗಮ ಮಂಡಳಿ ಅಧ್ಯಕ್ಷಗಿರಿಯನ್ನು ನಿರಾಕರಿಸುವುದರಿಂದ ಬೇರೊಬ್ಬರಿಗೆ ಜಿಲ್ಲೆಯಲ್ಲಿ ಸಿಗಬಹುದು ಎಂಬ ನಿರೀಕ್ಷೆ ಇದೆ. ಆದರೆ, ಜಿಲ್ಲೆಯ ಯಾವ ತಾಲೂಕಿನ ಮುಖಂಡರಿಗೆ ನಿಗಮ ಮಂಡಳಿ ಸ್ಥಾನಮಾನ ಕೊಡುತ್ತಾರೆ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.
ಲೋಕಸಭೆ ಚುನಾವಣೆ ಹತ್ತಿರದಲ್ಲೇ ಇರುವು
ದರಿಂದ ಟಿಕೆಟ್ ಆಕಾಂಕ್ಷಿಗಳ ಮೂಲಕವೂ ನಿಗಮ ಮಂಡಳಿ ಅಧ್ಯಕ್ಷಗಿರಿ ಪಡೆಯಲು ಇನ್ನೂ ಕಸರತ್ತು ಗಳು ನಡೆಯುತ್ತಿವೆ. ಶಾಸಕರು ಮತ್ತು ಸಚಿವರ ಮೂಲಕವೂ ಕೆಲವರು ಶಿಫಾರಸು ಮಾಡಿಸಿದ್ದಾರೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಎನ್ನುವುದೇ ಪ್ರಶ್ನೆ. ಆದರೆ, ಇದುವರೆಗೂ ಯಾರಿಗೂ ಸ್ಥಾನಮಾನ ಸಿಗುವ ಸೂಚನೆ ಯಂತೂ ಸಿಕ್ಕಿಲ್ಲ.ಈಗಾಗಲೇ ಸಾಕಷ್ಟು ಮಂದಿ ಹೆಸರನ್ನು ನಿಗಮ ಮಂಡಳಿ ಅಧ್ಯಕ್ಷಗಿರಿಗೆ ಶಿಫಾರಸು ಮಾಡಲಾಗಿದೆ. ಆದರೆ, ಕಾಂಗ್ರೆಸ್ ಪಾಳಯ ದಲ್ಲಿ ನಡೆಯು ತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಜಿಲ್ಲೆಗೆ ಸೂಕ್ತ ಸ್ಥಾನಮಾನ ಸಿಗುವ ಸಾಧ್ಯತೆಗಳು ಕಾಣಿ ಸುತ್ತಿಲ್ಲ. ಹೀಗಾಗಿ ಜಿಲ್ಲೆಯ ಸಾಕಷ್ಟು ಮುಖಂಡರು ಕೈಚೆಲ್ಲಿ ಕೂತಿದ್ದಾರೆ.
ನಾನು ಯಾರ ಬಳಿಯೂ ನನಗೆ ನಿಗಮ ಮಂಡಳಿ ಅಧ್ಯಕ್ಷಪಟ್ಟಬೇಕು ಎಂದು ಲಾಬಿ ಮಾಡಿಲ್ಲ. ಜನರಿಗೆ ಸೇವೆ ಮಾಡುವಂತಹ ಹುದ್ದೆಗಳನ್ನು ಕೊಡಿ ಎಂದು ಕೇಳಿದ್ದೇನೆ. ಕೇವಲ ತೋರಿಕೆಗೆ ಸಿಗುವ ಅಧಿಕಾರ ನನಗೆ ಬೇಕಿಲ್ಲ. ಈ ಹಿಂದೆಯೂ ನಾನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದರೂ ನಿರಾಕರಿಸಿದ್ದೇ. ಈಗಲೂ ಅಷ್ಟೇ. ಜನರಿಗೆ ಕೆಲಸ ಮಾಡುವಂತೆ ಹುದ್ದೆ ಸಿಕ್ಕರೆ ಮಾತ್ರ ಸ್ವೀಕರಿಸುತ್ತೇನೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಎಲ್ಲರಿಗೂ ಮನವಿ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ನಮಗೆ ಅಂತಹ ಯಾವುದೇ ಭರವಸೆ ಸಿಕ್ಕಿಲ್ಲ. ಮುಖಂಡರಿಗೆ ಸೂಕ್ತ ಸ್ಥಾನಮಾನಗಳು ಸಿಗದೇ ಹೋದರೆ ಪಕ್ಷಸಂಘಟನೆ ಕಷ್ಟವಾಗಲಿದೆ. ಮುಂದಿನ ಲೋಕಸಭೆ ಚುನಾವಣೆ ಮೇಲು ಪ್ರಭಾವ ಬೀರಲಿದೆ ಎಂದು ಸ್ಥಾನಮಾನದ ನಿರೀಕ್ಷೆಯಲ್ಲಿರುವವರು ಹೇಳಿದರು.












Click it and Unblock the Notifications