ಚಿಂತಾಮಣಿ: ಬಸ್‌ಗಳ ನಡುವೆ ಭೀಕರ ಅಪಘಾತ, ಓರ್ವ ಸಾವು, ಮೂವರ ಸ್ಥಿತಿ ಚಿಂತಾಜನಕ
ಚಿಕ್ಕಬಳ್ಳಾಪುರ, ನವೆಂಬರ್ 09: ಮಿನಿ ಬಸ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಸಂಭವಿಸಿರುವ ಭೀಕರ ಅಪಘಾತದಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಚಿಂತಾಮಣಿ ಚಿನ್ನಸಂದ್ರ ಗೇಟ್ ಬಳಿ ನಡೆದಿದೆ. ಮಿನಿ ಬಸ್‌ನಲ್ಲಿದ್ದ ಕೈವಾರ ಮೂಲದ ನಿವಾಸಿ 40 ವರ್ಷದ ಇಲ್ಲು ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಪ್ರಯಾಣೀಕರಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಮಿನಿ ಬಸ್ ಚಿನ್ನಸಂದ್ರ ಗೇಟ್ ಬಳಿ ಚಾಲಕರ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದರೆ, ಮಿನಿ ಬಸ್ ಸಂಪೂರ್ಣ ಛಿದ್ರ ಛಿದ್ರವಾಗಿದೆ. ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು ಮೂವರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಗಾಯಾಳುಗಳನ್ನು ಸಮೀಪದ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಿಂದ ಚಿಂತಾಮಣಿ ಬೆಂಗಳೂರು ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನ ಸವಾರರು ಪರಾಡುವಂತಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಚಿಂತಾಮಣಿ ಪೊಲೀಸರು ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಘಟನೆ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರಿನಲ್ಲಿ ಭೀಕರ ರಸ್ತೆ ಅಪಘಾತ ಇಬ್ಬರು ಸಾವು
ತುಮಕೂರಿನ ಕೋರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 4ರ ಸಮೀಪದಲ್ಲಿ ಇಂದು ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಿಂತಿದ್ದ ಕ್ರೂಸರ್‌ಗೆ ಹಿಂಬದಿಯಿಂದ ಟೆಂಪೋ ಡಿಕ್ಕಿಯಾಗಿದೆ. ಗಂಗಾವತಿ ಮೂಲದ ಪಡಿತರ ವಿತರಣಾ ಕೇಂದ್ರದ ಮಾಲೀಕ ಸತೀಶ್ ಹಾಗೂ ಕ್ರೂಸರ್ ಚಾಲಕ ಶಂಕರ್ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ತುಮಕೂರಿನ ಕೋರ ಪ್ರದೇಶದ ಬಳಿಕ ಕ್ರೂಸರ್ ವಾಹನದ ಟೈರ್ ಪಂಚರ್ ಆಗಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿ ಟೈರ್ ಚೇಂಜ್ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಟೆಂಪೋ ಡಿಕ್ಕಿಯಾಗಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪಡಿತರ ವಿತರಣಾ ಕೇಂದ್ರದ ಮಾಲೀಕರ ಪ್ರತಿಭಟನೆಗೆ ತೆರಳುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಕೋರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆಸಿದೆ.












Click it and Unblock the Notifications