ವಿದ್ಯೆ ಜೊತೆಗೆ ದೇಶಭಕ್ತಿ ಸಂಸ್ಕೃತಿ ಮೈಗೂಡಿಸಿಕೊಳ್ಳಿ, ಬದುಕು ಸಾರ್ಥಕವಾಗುತ್ತೆ; ಡಾ. ಬಾಲಾಜಿ
ಗುಡಿಬಂಡೆ ಜನವರಿ 9: ವಿದ್ಯೆ ನಮ್ಮ ಬದುಕಿಗೆ ದಾರಿ ತೋರಿಸಿದರೆ, ದೇಶಭಕ್ತಿ, ಸಂಸ್ಕೃತಿ ನಮ್ಮ ಬಾಳನ್ನು ಹಸನಾಗಿಸುತ್ತದೆ. ವಿದ್ಯೆಯ ಜೊತೆಗೆ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ. ಇಂತಹ ವಿದ್ಯಾರ್ಥಿಗಳ ಭವಿಷ್ಯ ಖಂಡಿತ ಉಜ್ವಲವಾಗಿರುತ್ತದೆ. ಇವರು ಉತ್ತಮ ಪ್ರಜೆಗಳಾಗಿ ಹೊರಹೊಮ್ಮುತ್ತಾರೆ ಎಂದು ಭಾರತ ಸರ್ಕಾರ ಐಸಿಸಿಆರ್ ಕನ್ನಡ ಜಾನಪದ ಪರಿಷತ್ತು ರಾಜ್ಯಾಧ್ಯಕ್ಷ ಡಾ. ಬಾಲಾಜಿ ತಿಳಿಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದ ಪ್ರಕೃತಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನಾಣ್ಯಗಳ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ. ಪಾಠದ ಜೊತೆಗೆ ಸಹಪಠ್ಯ ಚಟುವಟಿಕಗಳಲ್ಲಿ ತರಬೇತಿ ಪಡೆಯುವುದು ಇಂದಿನ ದಿನಗಳಲ್ಲಿ ಹೆಚ್ಚು ಅವಶ್ಯವಾಗಿದೆ. ದೊಡ್ಡ ದೊಡ್ಡ ನಗರಗಳಲ್ಲಿ ವಿದ್ಯಾಭ್ಯಾಸ ಪಡೆಯುವುದಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದರೆ ವಿದ್ಯಾರ್ಥಿಳನ್ನು ತಮ್ಮ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಂಡು ಉತ್ತಮ ಶಿಕ್ಷಣ ನೀಡುತ್ತಾರೆ. ಶಿಕ್ಷಣ ಸಂಸ್ಥೆಗಳ ದೊಡ್ಡ ದೊಡ್ಡ ಕಟ್ಟಡಗಳನ್ನು ನೋಡಿ ಆಕರ್ಷಣೆಗೆ ಒಳಗಾಗದೆ, ಗುಣಮಟ್ಟದ ಶಿಕ್ಷಣ ಎಲ್ಲಿ ಸಿಗುವಲ್ಲಿ ದಾಖಲಾಗಿ ಎಂದರು.

ಇದೇ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ಭಾರತ ದರ್ಶನ- ಭಾರತದ ಪ್ರಾಚಿನ, ಅಪೂರ್ವ, ಅಮೂಲ್ಯ, ಐತಿಹಾಸಿಕ ನಾಣ್ಯಗಳ 163ನೇ ಪ್ರದರ್ಶನದಲ್ಲಿ ನಾಣ್ಯ ಸಂಗ್ರಹಕಾರ ಎಚ್ .ಕೆ.ರಾಮರಾವ್ ಮಾತನಾಡಿ
ನಾಣ್ಯಗಳು ಇತಿಹಾಸದ ಪ್ರತಿಬಿಂಬವಾಗಿದ್ದು ನಮ್ಮ ದೇಶವನ್ನು ಆಳ್ವಿಕೆ ಮಾಡಿದ ರಾಜಮನೆತನ , ರಾಜರು ಮತ್ತು ದೇಶದ ಇತಿಹಾಸ ಹೇಳುತ್ತವೆ. ಇವುಗಳ ಅಧ್ಯಯನದಿಂದ ಆ ಕಾಲದ ಜನರ ಜೀವನದ ಮಟ್ಟ, ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿ ಹಾಗೂ ಸಾಹಿತ್ಯ, ಸಂಸ್ಕೃತಿಯನ್ನೂ ತಿಳಿಯಬಹುದು. ದೇಶದ ಇತಿಹಾಸ ತಿಳಿಸುವ ಸಾಧನವಿದ್ದಂತೆ ಎಂದು ಹೇಳಿದರು.
ವಿಜಯನಗರದ ವೈಭವವನ್ನು ಆ ಕಾಲದ ಚಿನ್ನದ ನಾಣ್ಯಗಳೇ ಸಾರುತ್ತದೆ. ಹಾಗೆಯೇ ನಮ್ಮ ದೇಶದ ಸಂಸ್ಕೃತಿ ಹಾಗೂ ಇತಿಹಾಸವನ್ನು ತಿಳಿಸುತ್ತದೆ. ನಾಣ್ಯಗಳನ್ನು ತಯಾರಿಸಿದ ಲೋಹಗಳಿಂದ ಅಂದಿನ ಕಾಲದ ಆರ್ಥಿಕ ವ್ಯವಸ್ಥೆಯನ್ನು ಗಮನಿಸಬಹುದು. ಅಖಂಡ ಭಾರತದ ನಾಣ್ಯಗಳು ಈ ಪ್ರದರ್ಶನದಲ್ಲಿವೆ. ನಮ್ಮ ದೇಶದ ಇತಿಹಾಸ, ಪರಂಪರೆಯ ಬಗ್ಗೆ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕು ಎಂದರು ಅವರು.
ಮೌರ್ಯರು, ಶಾತವಾಹನರು, ಗುಪ್ತರು, ಕುಶಾನರು, ರಾಷ್ಟ್ರಕೂಟರು, ಚೋಳ, ಕೊಂಗು, ಚಾಲುಕೈ, ಕದಂಬ, ಬಹುಮನಿ ಸುಲ್ತಾನರು, ವಿಜಯನಗರ ಸಾಮ್ರಾಟರು, ಮೈಸೂರು ಅರಸರು ಸೇರಿದಂತೆ ಕ್ರಿಸ್ತ ಪೂರ್ವ 300ರಿಂದ ಈವರೆಗೆ ರಾಷ್ಟ್ರದಲ್ಲಿ ಚಲಾವಣೆಯಲ್ಲಿರುವ ಸುಮಾರು 500 ನಾಣ್ಯಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ನಾಣ್ಯವಾಗಿ ಬಳಕೆಯಾಗುತ್ತಿದ್ದ ಉಂಗುರಾಕಾರದ ಅಲಂಕಾರಿಕ ವಸ್ತುಗಳು, ಬೇಟೆಯಾಡುವುದರ ಜತೆಗೆ ನಾಣ್ಯವಾಗಿ ಉಪಯೋಗಿಸುತ್ತಿದ್ದ ಚೂಪಾದ ಕಬ್ಬಿಣದ ತುಂಡುಗಳು, ಚಿನ್ನದಿಂದ ಮುದ್ರಿತವಾದ ನಾಣ್ಯಗಳು, ಬೆಳ್ಳಿ ನಾಣ್ಯಗಳು ಎಲ್ಲರ ಗಮನ ಸೆಳೆದವು. ವಿಶೇಷ ಅಂಚೆ ಚೀಟಿಗಳು, ದೇಶ ವಿದೇಶದ ಪುರಾತನ ಮತ್ತು ಈಗಿನ ನೋಟುಗಳು ಸಹ ಪ್ರದರ್ಶನದಲ್ಲಿದ್ದವು.
ಈ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ ಬಿ.ಎನ್. ಕೃಷ್ಣಪ್ಪ, ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕಿ ಡಾ. ಉಷಾದೇವಿ, ಶಿಡ್ಲಘಟ್ಟ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಷಫಿ ಅಹಮ್ಮದ್, ಚಿಂತಾಮಣಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಇತಿಹಾಸ ಪ್ರಾಧ್ಯಾಪಕ ಎ. ಶಿವಕುಮಾರ್ ಮಾತನಾಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪ್ರಕೃತಿ ಕಾಲೇಜಿನ ವಿದ್ಯಾರ್ಥಿಗಳು ಪೆರೇಸಂದ್ರ ಮುಖ್ಯರಸ್ತೆಯಲ್ಲಿ ಡೊಳ್ಳುಕುಣಿತ, ವೀರಗಾಸೆ, ತಮಟೆ ವಾದ್ಯಗಳೊಂದಿಗೆ ಸಾಂಸ್ಕೃತಿಕ ದಿಬ್ಬಣದ ಮೂಲಕ ಮೆರವಣಿಗೆ ನಡೆಸಿದರು.
ಪ್ರಕೃತಿ ಪದವಿ ಪೂರ್ವ ಕಾಲೇಜು ಆಡಳಿತಾಧಿಕಾರಿ ಡಾ. ಶ್ರೀನಿವಾಸ್, ಕಾಲೇಜು ಪ್ರಾಂಶುಪಾಲ ಎಂ.ವೈ ಮುನಿಕೃಷ್ಣಪ್ಪ, ಸಂಯೋಜನಾಧಿಕಾರಿ ಪಿ.ಕೆ ಸುದರ್ಶನ್, ಸೋಮೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಂಗಳ ಅಶ್ವತ್ಥಪ್ಪ, ಕಿರುತೆರೆ ಹಿರಿತೆರೆ ಕಲಾವಿದ ವಕೀಲ ರಾಘವೇಂದ್ರ, ದೂರದರ್ಶನ ಕಲಾವಿದ ಸೂ.ಸು ನಾಗೇಂದ್ರ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎನ್ ನರಸಿಂಹಮೂರ್ತಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.












Click it and Unblock the Notifications