ಕೋಟಿ ಬೆಲೆಯ ಜಮೀನಿಗೆ ಸಾವಿರ ಲೆಕ್ಕದ ಪರಿಹಾರ: 'ಹೈಟೆನ್ನನ್' ಹೆಸರಲ್ಲಿ ರೈತರ ಬದುಕಿಗೆ ಕೊಳ್ಳಿ- ರೊಚ್ಚಿಗೆದ್ದ ರೈತರು
ಚಿಕ್ಕಬಳ್ಳಾಪುರ ಫೆಬ್ರವರಿ 10: ರೈತರ ಜೀವನಕ್ಕೆ ಆಧಾರವಾಗಿರುವ ಕೃಷಿ ಜಮೀನಿನಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಬೇಕಾದರೂ ಇಲಾಖೆಗಳು ಸದ್ಯದ ಮಾರುಕಟ್ಟೆ ದರದಲ್ಲಿ ಪರಿಹಾರ ಕೊಡಬೇಕೆಂಬುದು ನಿಯಮ. ಆದರೆ, ಕೆಪಿಟಿಸಿಎಲ್ ಹೈಟೆನ್ಸನ್ ವಿದ್ಯುತ್ ತಂತಿ ಆಳವಡಿಸಲು ಬ್ರಿಟಿಷರ ಕಾಲದಲ್ಲಿ ನಿಗದಿಯಾಗಿರುವ ಪರಿಹಾರ ಕೊಡುವುದಾಗಿ ಹೇಳಿ ಬೆಳೆ ಇರುವ ಕೃಷಿ ಭೂಮಿಗಳಲ್ಲಿ ಕಾಮಗಾರಿ ನಡೆಸಿ ರೈತರ ಜೀವನದ ಜತೆ ಚೆಲ್ಲಾಟಕ್ಕೆ ಇಳಿದಿದೆ.
ಇದೀಗ ಕೃಷಿ ಭೂಮಿ ಕಳೆದು ಕೊಳ್ಳುತ್ತಿರುವ ಬಾಧಿತ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೋಟ್ಯಂತರ ಬೆಲೆ ಬಾಳುವ ರೈತರ ಭೂಮಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿ ಎಲ್) ಹೈಟೆನ್ಸನ್ ವೈರ್ ಗಳನ್ನು ಅಳವಡಿಸುವ ಕಾಮಗಾರಿ ಕೈಗೊಂಡಿದೆ. ಚಿಂತಾ ಮಣಿ - ಮಿಟ್ಟೇಮರಿ, ಮಿಟ್ಟೇಮರಿ- ಚಿಕ್ಕಬಳ್ಳಾಪುರ ಹೀಗೆ ಹಲವೆಡೆ ಹೈಟೆನ್ನನ್ ವಿದ್ಯುತ್ ತಂತಿಗಳನ್ನು ಅಳವಡಿಸುವ ಕಾಮಗಾರಿಗಳು ಪ್ರಗತಿ ಯಲ್ಲಿವೆ. ಆದರೆ, ಸೂಕ್ತ ಪರಿಹಾರದ ಭರವಸೆ ಕೊಡದೇ ಮನಸೋಇಚ್ಛೆ ಕಾಮಗಾರಿ ನಡೆಸುತ್ತಿದೆ ಎಂಬ ಆರೋಪವಿದೆ.

ಸಾವಿರ ಲೆಕ್ಕದಲ್ಲಿ ಪರಿಹಾರ:
ಹೈಟೆನ್ನನ್ ವಿದ್ಯುತ್ ತಂತಿ ಅಳವಡಿಕೆ ಮಾರ್ಗದಲ್ಲಿ ರೈತರ ಜಮೀನಿನ 30 ಮೀಟರ್ ವ್ಯಾಪ್ತಿಯಲ್ಲಿ ಏನೂ ಮಾಡುವಂತಿಲ್ಲ, ಬೆಳೆ ಬೆಳೆಯುವಂತಿಲ್ಲ ಮನೆಗಳನ್ನು ಕಟ್ಟುವಂತಿಲ್ಲ ನಿಯಮಗಳನ್ನು ರೂಪಿಸಲಾಗಿದೆ. ಒಂದು ಟವರ್ ಹಾಕಲು 1 ಗುಂಟೆ ಜಮೀನನ್ನು ಪಡೆಯಲಾಗುತ್ತಿದೆ. ಆದರೆ, ಕೆಪಿಟಿಸಿಎಲ್‌ನಿಂದ ಗುಂಟೆಗೆ ಸಾವಿರ ಲೆಕ್ಕದಲ್ಲಿ ಪರಿಹಾರ ನೀಡುತ್ತಿರುವುದು ಈಗೆ ರೈತರನ್ನು ಕೆರಳಿಸಿದೆ.
ಖಾಲಿ ಬಾಂಡ್ ಪೇಪರ್‌ನಲ್ಲಿ ಸಹಿ:
ರೈತರನ್ನು ಒಂದೆಡೆ ಕೂರಿಸಿ ಇಂತಹ ಜಮೀನಿನಲ್ಲಿ ಹೀಗೆ ಕಾಮಗಾರಿ ನಡೆಸಬೇಕಿದೆ. ನಿಮಗಿಷ್ಟು ಪರಿಹಾರ ಕೊಡುತ್ತೇವೆ ಎನ್ನುವ ಯಾವುದೇ ಭರವಸೆ ನೀಡಿಲ್ಲ. ಕೆಲವು ಕಡೆ ರೈತರಿಂದ 100 ರೂ. ಖಾಲಿ ಬಾಂಡ್ ಪೇಪರ್ ಮೇಲೆ ಸಹಿ ಹಾಕಿಸಿಕೊಂಡು ಕಾಮಗಾರಿ ನಡೆ ಸುತ್ತಿದ್ದಾರೆ. ಅಲ್ಲದೇ ಅವರು ಕೊಡುವ ಅರೆಕಾಸಿನ ಪರಿಹಾರಕ್ಕೂ ಲಂಚ ಕೊಡ ಬೇಕಾದ ಪರಿಸ್ಥಿತಿ ಇದೆ ಎಂದು ರೈತರು ಆರೋಪಿಸುತ್ತಾರೆ.

ಬೆಳೆಗಳಿದ್ದರೂ ಡೋಂಟ್‌ಕೇರ್:
ವಿದ್ಯುತ್ ತಂತಿ ಹಾಕುವ ಜಾಗದಲ್ಲಿ ಯಾವುದೇ ವಾಣಿಜ್ಯ ಬೆಳೆಗಳಿದ್ದರೂ ಜೆಸಿಬಿಗಳಿಂದ ಕಾಮಗಾರಿ ಮಾಡ ಲಾಗುತ್ತಿದೆ. ಬೆಳೆಗಳ ಮೇಲೆ ಲಕ್ಷಾಂತರ ರೂ. ಬಂಡವಾಳ ಹಾಕಿರುವ ರೈತರು ಕೆಪಿಟಿಸಿಎಲ್ ಅಧಿಕಾರಿಗಳ ಅಂಧಾ ದರ್ಬಾರಿಗೆ ಕಣ್ಣೀರು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆ ಬರುವ ವರೆಗಾದರೂ ಕಾಮಗಾರಿ ನಡೆಸಬೇಡಿ ಎಂದರೂ ಯಾವುದೇ ಪರಿಹಾರ ನೀಡದೆ ಕಾಮಗಾರಿ ನಡೆಸುತ್ತಿರುವುದು ಈಗ ಆಕ್ರೋಶಕ್ಕೆ ಕಾರಣವಾಗಿದೆ.
ಕೆಪಿಟಿಸಿಎಲ್‌ನಿಂದ ಯಾವುದೇ ಕಾಮ ಗಾರಿ ಕೈಗೊಳ್ಳಬೇಕಾದರೂ ಜಮೀನಿಗೆ ಪರಿಹಾರ ನೀಡಲೆಂದೇ ಇಂತಿಷ್ಟು ಹಣ ಮೀಸಲಿಟ್ಟಿರುತ್ತಾರೆ. ಅದರಲ್ಲಿ ಭೂ ಸ್ವಾಧೀನಕ್ಕೂ ಹಣ ಮೀಸಲಿಡಲಾಗುತ್ತದೆ. ಆದರೆ, ಅಧಿ ಕಾರಿಗಳು ಯಾವುದೋ ಓಬಿರಾಯನ ಕಾಲದ ಪರಿಹಾರದ ದಾಖಲೆಗಳನ್ನು ತೋರಿಸಿ ಖಾಲಿ ಬಾಂಡ್ ಪೇಪರ್‌ಗಳ ಮೇಲೆ ರೈತರ ಸಹಿ ಹಾಕಿಸಿಕೊಂಡು ದೌರ್ಜನ್ಯವೆಸಗುತ್ತಿದ್ದಾರೆ.
ಅರೆಕಾಸಿನ ಪರಿಹಾರಕ್ಕೂ ಮೀನ ಮೇಷ:
ಹೈಟೆನ್ಸನ್ ವಿದ್ಯುತ್ ತಂತಿ ಹಾದು ಹೋಗುವ ವ್ಯಾಪ್ತಿಯಲ್ಲಿ ಬೆಳೆಯುವ ಪ್ರತಿ ಬೆಳೆ, ಮರ ಮತ್ತು ಭೂಮಿಗೆ ನಿಗದಿತ ಪರಿಹಾರ ನೀಡಬೇಕು ಎಂಬುದು ನಿಯಮ. ಆದರೆ, ಕೆಪಿಟಿಸಿಎಲ್ ಅಧಿಕಾರಿಗಳು ಅರೆಕಾಸಿನ ಪರಿಹಾರ ಕೊಟ್ಟು ರೈತರಿಂದ ಬಲವಂತ ವಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಕೆಲಸ ಮಾಡ ಲಾಗುತ್ತಿದೆ. ಕೆಲವು ಕಡೆ ಕಾಮಗಾರಿ ಮುಗಿದು ವರ್ಷಗಳು ಕಳೆದರೂ ರೈತರಿಗೆ ಬರಬೇಕಾದ ಪರಿಹಾರ ವನ್ನೇ ಕೆಪಿಟಿಸಿ ಎಲ್ ನೀಡಿಲ್ಲವೆಂಬ ಆರೋಪವೂ ಇದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ತಾಕೀತು:
ರೈತರಿಗೆ ಕೆಪಿಟಿಸಿಎಲ್‌ನಿಂದ ಆಗುತ್ತಿರುವ ಅನ್ಯಾಯದ ಬಗೆಗಿನ ದೂರುಗಳನ್ನು ಆಧರಿಸಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿ ಕಾರಿಗಳು ಮತ್ತು ರೈತರ ಸಭೆ ನಡೆಸಿದ್ದು, ರೈತರು ದೂರುಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಇದನ್ನೆಲ್ಲ ಗಮನಿಸಿದ ಜಿಲ್ಲಾಧಿಕಾರಿ ಅವರು ಕಾನೂನು ಪ್ರಕಾರ ರೈತರಿಗೆ ಪರಿಹಾರ ನೀಡುವವರೆಗೂ ನೀವು ಯಾವುದೇ ಕಾಮಗಾರಿ ನಡೆಸು ವಂತಿಲ್ಲ ಎಂದು ತಾಕೀತು ಮಾಡಿದ್ದಾರೆ.
ಬೆಳೆಗಳನ್ನು ನಾಶ ಪಡಿಸಿ ಕಾಮಗಾರಿ ನಡೆಸಿದ್ದರೆ ಬೆಳೆ ಪರಿಹಾರವನ್ನೂ ಕೊಡಬೇಕು ಎಂದು ಎಚ್ಚರಿಸಿದ್ದಾರೆ. ರೈತರ ಜತೆ ಕೂತು ಅವರಿಗೆ ಕಾಮಗಾರಿ ಅನಿವಾರ್ಯತೆ, ಪರಿಹಾರದ ಕುರಿತು ಸ್ಪಷ್ಟ ಮಾಹಿತಿ ನೀಡಿ ನಂತರ ಕಾಮಗಾರಿ ಆರಂಭಿಸುವಂತೆ ಆದೇಶಿಸಿದ್ದಾರೆ.
ಹೈಟೆನ್ನನ್ ವಿದ್ಯುತ್ ತಂತಿ ಹಾದು ಹೋಗುವ ಮಾರ್ಗದಲ್ಲಿ 10 ಗುಂಟೆ, 5 ಗುಂಟೆ ಜಮೀನು ಇರುವ ರೈತರೂ ಇದ್ದಾರೆ. ಅವರಿಗೆ ಈ ಜಮೀನೇ ಆಧಾರ. ಅಂತಹ ಜಮೀನುಗಳಿಗೂ ಇವರು ಸಾವಿರ ರೂ. ಲೆಕ್ಕದಲ್ಲಿ ಪರಿಹಾರ ಕೊಟ್ಟರೆ ಅವರು ಜೀವನ ನಡೆಸುವುದು ಹೇಗೆ..? ಬೆಳೆ ಬೆಳೆದಿರುವ ಹೊಲಗಳಲ್ಲೇ ಕೆಲಸ ನಡೆಸುತ್ತಿದ್ದು, ರೈತರಿಗೆ ಲಕ್ಷಾಂತರ ರೂ. ನಷ್ಟವಾಗಿದೆ. ಮಾರುಕಟ್ಟೆಯಲ್ಲಿ ಎಕರೆ ಬೆಲೆ ಕೋಟಿ ಲೆಕ್ಕದಲ್ಲಿದ್ದರೆ, ಇವರು ಸಾವಿರ ಲೆಕ್ಕದಲ್ಲಿ ಪರಿಹಾರ ನೀಡಲು ಬರುತ್ತಿದ್ದಾರೆ.












Click it and Unblock the Notifications