ಮಂಚೇನಹಳ್ಳಿಯಲ್ಲಿ ಕೈಗಾರಿಕಾ ವಲಯ ಸ್ಥಾಪಿಸಿ, ಪ್ರತಿ ಮನೆಗೂ ಉದ್ಯೋಗ- ಸಚಿವ ಸುಧಾಕರ್ ಭರವಸೆ
ಮಂಚೇನಹಳ್ಳಿ ವ್ಯಾಪ್ತಿಯಲ್ಲಿ ಕೈಗಾರಿಕಾ ವಲಯ ಸ್ಥಾಪಿಸಿ ತಾಲೂಕಿನ ಪ್ರತಿ ಮನೆಗೂ ಉದ್ಯೋಗ ಸಿಗುವಂತೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಾಲೂಕಿನ ಜನತೆಗೆ ಭರವಸೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ, ಮಾರ್ಚ್ 1: ಮಂಚೇನಹಳ್ಳಿ ವ್ಯಾಪ್ತಿಯಲ್ಲಿ ಕೈಗಾರಿಕಾ ವಲಯ ಸ್ಥಾಪಿಸುವ ಮೂಲಕ ಈ ಭಾಗದ ಪ್ರತಿ ಮನೆಗೆ ಉದ್ಯೋಗ ಕಲ್ಪಿಸಿ, ಈ ತಾಲೂಕನ್ನು ಮಾದರಿಯಾಗಿ ಮಾಡುವ ಪಣ ತೊಟ್ಟಿದ್ದು, ಇದಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿದ್ದಾರೆ.
ಮಂಚೇನಹಳ್ಳಿ ತಾಲೂಕಿನ ಮಿಣಕನಗುರ್ಕಿ ಗ್ರಾಮ ಪಂಚಾಯತಿ ಗ್ರಾಮ ಸಭೆಯಲ್ಲಿ ಮಾತನಾಡಿದ ಡಾ.ಕೆ. ಸುಧಾಕರ್, ಮಿಣಕನಗುರ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ 6 ಎಕರೆ ಪ್ರದೇಶದಲ್ಲಿ ನಿವೇಶನಗಳನ್ನು ಮಾಡಲಾಗಿದ್ದು, ಒಟ್ಟು 212 ನಿವೇಶನಗಳನ್ನು ವಸತಿ ರಹಿತರಿಗೆ ನೀಡಲಾಗುವುದು ಎಂದರು.

ಮಂಚೇನಹಳ್ಳಿ ತಾಲೂಕನ್ನು ಮಾದರಿ ತಾಲೂಕಾಗಿ ಮಾಡುವ ಭರವಸೆ ಈ ಹಿಂದೆ ನೀಡಿದ್ದು, ಅದರಂತೆ ತಾಲೂಕು ಕಚೇರಿ, ತಾಲೂಕು ಆಸ್ಪತ್ರೆ, ತಾಯಿ ಮತ್ತು ಮಗುವಿನ ಆಸ್ಪತ್ರೆ ಸೇರಿದಂತೆ ತಾಲೂಕಿಗೆ ಅಗತ್ಯವಿರುವ ಎಲ್ಲ ಅಭಿವೃದ್ಧಿ ಮಾಡುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
ತಾವು ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿದ್ದಾಗ ಅತಿ ಹೆಚ್ಚು ಮತಗಳನ್ನು ನೀಡಿ ಆಶೀರ್ವದಿಸಿದ ಮಿಣುಕಿನಗುರ್ಕಿ ಗ್ರಾಮ ಪಂಚಾಯತಿ ಬಗ್ಗೆ ತಮಗೆ ವಿಶೇಷ ಒಲವಿದ್ದು, ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಗ್ರಾಮ ಪಂಚಾಯತಿಗೆ ನೂತನ ಕಚೇರಿ ಕಟ್ಟಡದ ಅಗತ್ಯವಿದ್ದು, ಇದಕ್ಕಾಗಿ 5 ಗುಂಟೆ ಭೂಮಿ ಮಂಜೂರು ಮಾಡಿಸಲಾಗಿದೆ. ಈ ಜಾಗದಲ್ಲಿ ಮಾದರಿ ಗ್ರಾಮ ಪಂಚಾಯತಿ ಕಚೇರಿ ಕಟ್ಟಡ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಮಾತು ಮುಂದುವರಿದಿ ಸಚಿವರು, ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯಕ್ಕೆ ಒಟ್ಟು ಆರು ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಿಸಲಾಗಿದ್ದು, ಇದರಲ್ಲಿ ಹಾವೇರಿ, ಯಾದಗಿರಿ, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜು ಮಾರ್ಚ್ 17ರಂದು ಉದ್ಘಾಟನೆಯಾಗಲಿವೆ. ಉಳಿದಂತೆ ರಾಮನಗರ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಪ್ರಸ್ತುತ ಆಯವ್ಯಯದಲ್ಲಿ ವೈದ್ಯಕೀಯ ಕಾಲೇಜುಗಳು ಮಂಜೂರಾಗಿರುವುದಾಗಿ ತಿಳಿಸಿದ್ದಾರೆ.

ಅಲ್ಲದೇ ಮಿಣಕನಗುರ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ 212 ನಿವೇಶನಗಳನ್ನು ಉಚಿತವಾಗಿ ವಿತರಿಸುವ ಜೊತೆಗೆ 125 ಮನೆಗಳನ್ನು ಮಂಜೂರು ಮಾಡಲಾಗಿದೆ. ಆ ಮೂಲಕ ಸುಮಾರು 400 ಕುಟುಂಬಗಳಿಗೆ ವಸತಿ ಕಲ್ಪಿಸಲಾಗಿದೆ ಎಂದರು.
ಮಿಣಕನಗುರ್ಕಿ ಗ್ರಾಮ ಪಂಚಾಯತಿ ಗ್ರಾಮ ಸಭೆಯಲ್ಲಿ ಗೋವಿಂದರಾಜು, ರಮೇಶ್, ಭರತ್ ರೆಡ್ಡಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಹನುಮೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.












Click it and Unblock the Notifications