ಈಶ ಫೌಂಡೇಷನ್ ವತಿಯಿಂದ ಗ್ರಾಮೋತ್ಸವ: ಗ್ರಾಮೀಣ ಕ್ರೀಡಾಪಟುಗಳಿಗೆ ಸುವರ್ಣಾವಕಾಶ
ಚಿಕ್ಕಬಳ್ಳಾಪುರ, ಆಗಸ್ಟ್ 07: ಗ್ರಾಮೀಣ ಜನರಲ್ಲಿ ಹುರುಪು ತುಂಬುವ ಉದ್ದೇಶದಿಂದ ಈಶ ಫೌಂಡೇಶನ್ ವತಿಯಿಂದ ಕರ್ನಾಟಕ ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಗ್ರಾಮೋತ್ಸವ ಆಯೋಜಿಸಲಾಗಿದೆ.
ಚಿಕ್ಕಬಳ್ಳಾಪುರ,ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ಶಿವಮೊಗ್ಗ ಸೇರಿದಂತೆ ರಾಜ್ಯದ 12 ಜಿಲ್ಲೆಗಳ 3,200ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲು ಈಗಾಗಲೇ ಸಿದ್ಧತೆ ಕೈಗೊಂಡಿದ್ದು, ಗ್ರಾಮ ಮಟ್ಟದ ಕ್ರೀಡಾ ಪಂದ್ಯಾವಳಿಗಳು ಆಗಸ್ಟ್ 12ರಿಂದ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 3ರಂದು ಗೆದ್ದ ತಂಡಗಳ ವಿಭಾಗ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.

ಇದರ ಮಾದರಿಯಲ್ಲಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಪಾಂಡಿಚೆರಿಯಲ್ಲೂ ಸಹ ಸ್ಪರ್ಧೆಗಳು ನಡೆಯಲಿದ್ದು, ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿರುವ 112 ಅಡಿ ಎತ್ತರದ ಆದಿ ಯೋಗಿ ಎದುರು ಅಂತಿಮ ಪಂದಾವಳಿಗಳು ನಡೆಯಲಿದೆ.
ಗ್ರಾಮೀಣ ಭಾರತದ ಚೈತನ್ಯವನ್ನು ಪುನರುಜ್ಜೀವನಗೊಳಿಸಿ ಸಮುದಾಯ, ಸಂಪ್ರದಾಯ ಮತ್ತು ಆರೋಗ್ಯಕರ ಸ್ಪರ್ಧೆಯ ಪ್ರಜ್ಞೆ ಬೆಳೆಸುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಇದರಲ್ಲಿ ಕ್ರೀಡಾ ವೃತ್ತಿಪರರನ್ನು ಹೊರತುಪಡಿಸದಂತೆ ಯಾರು ಬೇಕಾದರೂ ಭಾಗವಹಿಸಬಹುದಾಗಿದೆ. ಪ್ರತಿನಿತ್ಯ ಕ್ರೀಡೆಗಳ ಕ್ರೀಡೆಗಳನ್ನು ಆಡಲು ಅವಕಾಶ ಇಲ್ಲದಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಇನ್ನು ತಂಡದಲ್ಲಿ ಒಂದೇ ಗ್ರಾಮದವರು ಮಾತ್ರ ಇರುವುದು ವಿಶೇಷವಾಗಿದೆ.
ಈಶ ಗ್ರಾಮೋತ್ಸವದ ಹಿಂದಿನ ಆವೃತ್ತಿಗಳಲ್ಲಿ 8,412 ತಂಡಗಳು ಸಾಕ್ಷಿಯಾಗಿದ್ದು, ಇದರಲ್ಲಿ 1,00,167 ಆಟಗಾರರು ಭಾಗವಹಿಸಿದ್ದರು. ಕ್ರೀಡೆ ಮತ್ತು ಯುವ ವ್ಯವಹಾರಗಳ ಸಚಿವಾಲಯವು ಈಶ ಔಟ್ ರಿಚ್ ವನ್ನು ರಾಷ್ಟ್ರೀಯ ಕ್ರೀಡಾ ಪ್ರಚಾರ ಸಂಸ್ಥೆ ಎಂಬುದಾಗಿ ಗುರುತಿಸಿದೆ. ಅಲ್ಲದೆ 2018ರಲ್ಲಿ ರಾಷ್ಟ್ರಪತಿಗಳಿಂದ ಕ್ರೀಡಾ ಅಭಿವೃದ್ಧಿಗಾಗಿ ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ ಪ್ರಶಸ್ತಿಯನ್ನು ಪಡೆದಿದೆ.
ಮೊದಲನೇ ಹಂತದ (ಕ್ಲಸ್ಟರ್) ಪಂದ್ಯಾವಳಿಗಳು ಆ.12 ಹಾಗೂ 13 ರಂದು ಚಿಕ್ಕಬಳ್ಳಾಪುರ, ವಿಜಯಪುರ, ಕೋಲಾರ, ವಿಜಯನಗರ, ಶಿವಮೊಗ್ಗ ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಆ.19 ಹಾಗೂ 20ರಂದು ಬೆಂಗಳೂರು ಗ್ರಾಮಾಂತರ, ತುಮಕೂರು, ಕೊಡಗು, ಚಾಮರಾಜನಗರ, ಅ.26 ಹಾಗೂ 27 ರಂದು ಚಿಕ್ಕಮಗಳೂರು, ಎರಡನೇ ಹಂತದ ಪಂದ್ಯಾವಳಿಗಳು ಫೆ.3 ರಂದು ಚಿಕ್ಕಬಳ್ಳಾಪುರ ಹಾಗೂ ಮೈಸೂರು ಜಿಲ್ಲೆ, ಫೆ.23 ರಂದು ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ಅಂತಿಮ ಪಂದ್ಯಾವಳಿಗಳು ನಡೆಯಲಿವೆ.

2004ರಲ್ಲಿ ಸದ್ಗುರುಗಳಿಂದ ಪ್ರಾರಂಭವಾದ ಗ್ರಾಮೋತ್ಸವದಡಿ ಈ ವರ್ಷ ಪುರುಷರಿಗಾಗಿ ವಾಲಿಬಾಲ್, ಮಹಿಳೆಯರಿಗಾಗಿ ಮೊದಲೆ ಮತ್ತು ತಮಿಳುನಾಡಿನ ಗ್ರಾಮೀಣ ಆಟಗಳು, ಕುರಿ, ಸ್ಪರ್ಧೆ ಕೈಗೊಂಡಿದ್ದು ಇದರಲ್ಲಿ 65 ಸಾವಿರಕ್ಕೂ ಹೆಚ್ಚು ಆಟಗಾರರು ಭಾಗವಹಿಸುವ ನಿರೀಕ್ಷೆ ಇದೆ. 56 ಲಕ್ಷ ರೂ ಮೌಲ್ಯದ ಬಹುಮಾನಗಳನ್ನು ನೀಡಲಾಗುತ್ತದೆ. ವಾಲಿಬಾಲ್ ಪಂದ್ಯಾವಳಿ ವಿಜೇತರಿಗೆ 5 ಲಕ್ಷ ರೂ ಕಬಡ್ಡಿ ಮತ್ತು ಥ್ರೋಬಾಲ್‌ನಲ್ಲಿ ಗೆದ್ದ ತಂಡಗಳಿಗೆ ತಲಾ 2 ಲಕ್ಷ ರೂ. ನೀಡಲಾಗುತ್ತದೆ.
ರಾಜ್ಯದ ಎಷ್ಟು ಜಿಲ್ಲೆಗಳಲ್ಲಿ ಕಾರ್ಯಕ್ರಮ?
ಈಶ ಫೌಂಡೇಷನ್‌ನ ಸಾಮಾಜಿಕ ಅಭಿವೃದ್ಧಿ ಅಂಗವಾದ ಈಶ ಔಟ್‌ರೀಚ್ ವತಿಯಿಂದ ಕರ್ನಾಟಕದ 13 ಜಿಲ್ಲೆಗಳ 3,200ಕ್ಕೂ ಹಳ್ಳಿಗಳಲ್ಲಿ ಈಶ ಗ್ರಾಮೋತ್ಸವಕ್ಕೆ ಸಿದ್ಧತೆ ನಡೆದಿದ್ದು, ಆ.12ರಂದು ಸ್ಪರ್ಧೆಗಳಿಗೆ ಚಾಲನೆ ದೊರೆಯಲಿದೆ.
ಮೊದಲನೇ ಹಂತದ ಪಂದ್ಯಗಳು ಆ.12 ಮತ್ತು 13 ರಂದು ಚಿಕ್ಕಬಳ್ಳಾಪುರ, ವಿಜಯಪುರ, ಕೋಲಾರ, ವಿಜಯನಗರ, ಶಿವಮೊಗ್ಗ, ಮೈಸೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಏಕ ಕಾಲಕ್ಕೆ ನಡೆಯಲಿವೆ. ನಂತರದ ಪಂದ್ಯಾವಳಿಗಳು ಆ.19 ಮತ್ತು 20ರಂದು ಬೆಂಗಳೂರು ಗ್ರಾಮಾಂತರ, ತುಮಕೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ, ಹಾಗೂ ಆ.26 ಮತ್ತು 27ರಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯಲಿವೆ.
ಎರಡನೇ ಹಂತದ ಪಂದ್ಯಗಳು ಸೆ. 3ರಂದು ಚಿಕ್ಕಬಳ್ಳಾಪುರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಆಯೋಜಿಸಲಾಗಿದೆ. ಸೆ.23ರಂದು ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ಫೈನಲ್ ಹಂತದ ಪಂದ್ಯಗಳು ನಡೆಯಲಿವೆ.
ಯಾವ್ಯಾವ ಕ್ರೀಡೆಗಳಿಗೆ ಅವಕಾಶ?
ಈಶಾ ವತಿಯಿಂದ ಹಮ್ಮಿಕೊಂಡಿರುವ ಗ್ರಾಮೋತ್ಸವದಲ್ಲಿ ಭಾಗವಹಿಸಲು ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ನೋಂದಣಿ ಉಚಿತವಾಗಿದೆ. ಪುರುಷರಿಗೆ ವಾಲಿಬಾಲ್ ಮತ್ತು ಮಹಿಳೆಯರಿಗೆ ಥ್ರೋಬಾಲ್ ಸ್ಪರ್ಧೆ ಆಯೋಜಿಸಲಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಕಬಡ್ಡಿ ಸ್ಪರ್ಧೆಯೂ ನಡೆಯಲಿದೆ. ವಾಲಿಬಾಲ್ ವಿಜೇತರಿಗೆ ₹ 5 ಲಕ್ಷ, ಕಬಡ್ಡಿ ಮತ್ತು ಥ್ರೋಬಾಲ್ ವಿಜೇತರಿಗೆ ತಲಾ ₹2 ಲಕ್ಷ ರೂ ಬಹುಮಾನವಿದೆ. ವಿವಿಧ ಸ್ಪರ್ಧೆಗಳಿಗೆ ಒಟ್ಟು ₹56 ಲಕ್ಷ ಬಹುಮಾನವಿದೆ ಎಂದು ಪ್ರಕಟಣೆ ತಿಳಿಸಿದೆ. ಕ್ರೀಡೆಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ 83000 30999 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಈಶ ಕೈಗೊಂಡಿರುವ ಅನೇಕ ಚಟುವಟಿಕೆಯಲ್ಲಿ ಈಶ ಗ್ರಾಮೋತ್ಸವವು ಒಂದು. ಕ್ರೀಡೆಗಳ ಮೂಲಕ ಗ್ರಾಮೀಣ ಭಾರತವನ್ನು ಪುನರುಜ್ಜಿವನ ಗೊಳಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ, ಇದು ಜಾತಿ, ಮತ ಮತ್ತು ಲಿಂಗದ ತಾರತಮ್ಯವನ್ನು ತೆಗೆದು, ಏಕತೆಯನ್ನು ಮೂಡಿಸುತ್ತದೆ ಎಂದು ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ಹೇಳಿದ್ದಾರೆ.












Click it and Unblock the Notifications