ಚಿಕ್ಕಬಳ್ಳಾಪುರ ಲೋಕಸಭಾ ಟಿಕೆಟ್ ಫೈಟ್ ತಾರಕಕ್ಕೆ: ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿಗಳ ಫೈನಲ್‌ಗೆ ಮೀನಮೇಷ- ಹೈಕಮಾಂಡ್ ಮೇಲೆ ಒತ್ತಡ
ಚಿಕ್ಕಬಳ್ಳಾಪುರ ಮಾರ್ಚ್ 21: ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿ ನಾಲ್ಕೈದು ದಿನ ಕಳೆದರು ಕ್ಷೇತ್ರಕ್ಕೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಇನ್ನು ಪಕ್ಕ ಆಗಿಲ್ಲ ಆದರೂ ಆಕಾಂಕ್ಷಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರದ ಆರ್ಭಟ ಜೋರಾಗಿದ್ದು ತಮ್ಮ ಪಕ್ಷದಿಂದ ಇಂತಹವರಿಗೆ ಟಿಕೆಟ್ ಕೊಡಬೇಕು ಕೊಟ್ಟೇ ಬಿಟ್ಟರು ಎಂಬ ಗೊಂದಲಗಳ ನಡುವೆ ನಾ ಕೊಡೆ ನೀ ಬಿಡೆ ಎಂಬಂತೆ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಹಗ್ಗಜಗ್ಗಾಟ ಜೋರಾಗಿ ನಡೆಯುತ್ತಿದೆ.
ಹೌದು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಮೇಲೆ ಎಲ್ಲರ ದೃಷ್ಟಿ ಬಿದ್ದಿದೆ, ಕಾರಣ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಪೈಪೋಟಿ. ಜೆಡಿಎಸ್ ಬಿಜೆಪಿ ಮೈತ್ರಿ ಆಗಿರುವ ಕಾರಣ ಆಕಾಂಕ್ಷಿಗಳ ಸಂಖ್ಯೆ ದ್ವಿಗುಣ ಗೊಂಡಿದ್ದು ಬಿಜೆಪಿಯಲ್ಲಿ ದಿನಕ್ಕೊಬ್ಬರ ಹೆಸರು ಕೇಳಿಬರುತ್ತಿದ್ದರೆ, ಕಾಂಗ್ರೆಸ್ ಇರೋ ಮೂವರಲ್ಲಿ ಒಬ್ಬರನ್ನು ಫೈನಲ್ ಮಾಡಲು ಕಾಂಗ್ರೆಸ್ ಹೈಕಮಾಂಡ್ ಬಿಜೆಪಿ ಕಡೆ ಮುಖ ಮಾಡಿ ತಿಣುಕಾಡುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಘೋಷಣೆಗಾಗಿ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂದು ಎದುರು ನೋಡಿದಂತೆ ಕಾಣುತ್ತಿದೆ.

ಸದ್ಯಕ್ಕೆ ಕಾಂಗ್ರೆಸ್‌ನಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಹಾಗೂ ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಹೆಸರು ಕೇಳಿಬರುತ್ತಿದೆ. ಸದ್ಯಕ್ಕೆ ರಕ್ಷಾ ರಾಮಯ್ಯ ಅವರ ಹೆಸರು ರೇಸ್‌ನಲ್ಲಿ ಮುಂದಿದೆ. ಆದರೆ ಮೊಯ್ಲಿ ಬೆಂಬಲಿಗರು ಇದು ಕೊನೆಯ ಬಾರಿ, ಟಿಕೆಟ್ ಕೊಟ್ಟು ಬಿಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಬೇಡಿಕೆ ಇಟ್ಟಿದ್ದಾರೆ.
ಮತ್ತೊಂದೆಡೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುವ ನಿರೀಕ್ಷೆಯಲ್ಲಿ ಮುಖಂಡದರಿದ್ದು ಈಗಾಗಲೇ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಣಿ ಸಾಧ್ಯತೆ ದಟ್ಟವಾಗಿದೆ, ಎರಡು ಕಡೆ ಅಭ್ಯರ್ಥಿಯ ಅಧಿಕೃತ ಘೋಷಣೆ ಮತ್ತು ಪ್ರಚಾರಕ್ಕೆ ಚಾಲನೆ ನೀಡುವ ನಿರೀಕ್ಷೆಯಲ್ಲಿ ಕಾರ್ಯಕರ್ತರು ಕಾಯುತ್ತಿದ್ದಾರೆ.
ಜೆಡಿಎಸ್ ನಿಲುವೇನು?
ಮೊದಲಿನಿಂದಲೂ ಡಾ. ಕೆ. ಸುಧಾಕರ್ ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರ ನಡುವಿನ ಗುದ್ದಾಟ ಇಡೀ ಜಿಲ್ಲೆಗೆ ತಿಳಿದಿರುವ ವಿಚಾರ, ರಾಜ್ಯ ಮಟ್ಟದ ನಾಯಕರ ಹಂತದಲ್ಲಿ ನಡೆದಿರುವ ಮೈತ್ರಿಗೆ ಕಾರ್ಯಕರ್ತರು ಹಳೇ ವೈಷಮ್ಯ ಮರೆತು ಕೈ ಜೋಡಿಸುತ್ತಾರ ಅಥವಾ ಒಳಗೊಳಗೇ ಮತ್ತೊಮ್ಮೆ ಸೇಡು ತೂರಿಸಿಕೊಳ್ಳುತ್ತಾರ ಎಂಬ ಅನುಮಾನ ಒಂದುಕಡೆ ಕಾಡುತ್ತಿರುವುದಂತೂ ಸುಳ್ಳಲ್ಲ.
ಮೊಯ್ಲಿ ಪರ ಪತ್ರ ಚಳವಳಿ:
ವೀರಪ್ಪಮೊಯ್ಲಿ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ನೂರಾರು ಕೋಟಿ ರೂ. ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕ್ಷೇತ್ರದ ಮತದಾರರೊಂದಿಗೆ ಉತ್ತಮ ಬಾಂಧವ್ಯವನ್ನೂ ಹೊಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ನಾನಾ ಕನಸುಗಳನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ಕೊನೆಯ ಬಾರಿ ಅವರಿಗೆ ಟಿಕೆಟ್ ನೀಡಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿ ಎಂದು ರಾಷ್ಟ್ರೀಯ ಮುಖಂಡರು ಹಾಗೂ ರಾಜ್ಯ ಮುಖಂಡರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಪತ್ರ ಬರೆದು ಒತ್ತಾಯಿಸಿದ್ದಾರೆ.
ಬಿಜೆಪಿ ಕಡೆ ಕಾಂಗ್ರೆಸ್ ಕಣ್ಣು:
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಇದುವರೆಗೂ ಪಕ್ಷದ ಅಭ್ಯರ್ಥಿಗಳನ್ನ ಘೋಷಣೆ ಮಾಡಿಲ್ಲ. ಮೈತ್ರಿ ಒಪ್ಪಂದದ ಹಿನ್ನೆಲೆಯಲ್ಲಿ ಈ ಬಾರಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯುವುದಿಲ್ಲ. ಹಾಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆ.
ಮತ್ತೊಂದೆಡೆ ಕಾಂಗ್ರೆಸ್ ಹೈಕಮಾಂಡ್ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿರುವ ಪೈಪೋಟಿಯನ್ನು ಗಮನಿಸಿ ಸದ್ಯಕ್ಕೆ ಟಿಕೆಟ್ ಘೋಷಣೆ ವಿಷಯದಲ್ಲಿ ತಟಸ್ಥ ನಿಲುವು ತಳೆದಿದೆ. ಇನ್ನೊಂದೆಡೆ ಬಿಜೆಪಿ ಟಿಕೆಟ್ ವಿಷಯದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಹೊರಗಿನವರ ನಾಲೈದು ಹೆಸರುಗಳು ಕೇಳಿ ಬರುತ್ತಿರುವ ಹಿನ್ನೆಲೆ ಕಾಂಗ್ರೆಸ್ ಕೂಡಾ ಬಿಜೆಪಿ ಅಭ್ಯರ್ಥಿಯನ್ನು ನೋಡಿಕೊಂಡು ತಮ್ಮ ಅಭ್ಯರ್ಥಿಯನ್ನು ಘೋಷಣೆ ಮಾಡುವ ಲೆಕ್ಕಾಚಾರಕ್ಕೆ ಇಳಿದಿದೆ.
ಸದ್ಯಕ್ಕೆ ಬಿಜೆಪಿಯಿಂದ ಸ್ಥಳೀಯ ಆಕಾಂಕ್ಷಿಗಳಾದ ಮಾಜಿ ಸಚಿವ ಡಾ.ಕೆ.ಸುಧಾಕರ್ ಮತ್ತು ಯಲಹಂಕದ ಅಲೋಕ್ ವಿಶ್ವನಾಥ್ ಬಿಟ್ಟು ಹೊರಗಿನಿಂದ ಕುಮಾರಸ್ವಾಮಿ, ಸುಮಲತಾ, ಡಿ.ವಿ.ಸದಾನಂದಗೌಡ ಹೀಗೆ ಹಲವರ ಹೆಸರು ಕೇಳಿಬರುತ್ತಿದೆ. ಹೀಗಾಗಿ ಕಾಂಗ್ರೆಸ್ ಮೊದಲು ಬಿಜೆಪಿ ಅಭ್ಯರ್ಥಿ ಟಿಕೆಟ್ ಘೋಷಣೆಯಾಗಲಿ ಆನಂತರ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡುವ ತೀರ್ಮಾನಕ್ಕೆ ಬಂದಿದೆ.

ಜಾತಿ ಆಧರಿತ ಟಿಕೆಟ್: ಜಾತಿ ಸಮೀಕರಣಕ್ಕೆ
ಜೋತು ಬಿದ್ದಿರುವ ಎರಡೂ ಪಕ್ಷಗಳು ಪ್ರಬಲ ಸಮುದಾಯಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹೆಚ್ಚಿನ ಗಮನ ಹರಿಸಿವೆ. ಸದ್ಯಕ್ಕೆ ಬಲಿಜ ಮತ್ತು ಒಕ್ಕಲಿಗ ಅಭ್ಯರ್ಥಿಗಳ ಕಡೆ ಒಲವು ತೋರಿರುವ ಪಕ್ಷಗಳು ಒಂದು ಪಕ್ಷಯಾರಿಗೆ ಟಿಕೆಟ್ ಕೊಡುತ್ತೆ ಎನ್ನುವುದನ್ನು ಗಮನಿಸಿ ಜಾತಿ ಲೆಕ್ಕಾಚಾರದಲ್ಲಿ ಮತ್ತೊಂದು ಪ್ರಬಲ ಜಾತಿಯವರಿಗೆ ಟಿಕೆಟ್ ಕೊಡುವ ಲೆಕ್ಕಾಚಾರ ಹಾಕುತ್ತಿವೆ.
ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಮಟ್ಟಿಗೆ ಜಾತಿ ಲೆಕ್ಕಾಚಾರ ಹೆಚ್ಚು ನಡೆದಿಲ್ಲ. ಕಳೆದ ಚುನಾ ವಣೆಯಲ್ಲಿ ಒಕ್ಕಲಿಗರಾದ ಬಿ.ಎನ್.ಬಚ್ಚೇಗೌಡ ಅವರು ಗೆದ್ದಿರುವುದನ್ನು ಬಿಟ್ಟರೆ ಹಿಂದಿನ ಚುನಾವಣೆಗಳಲ್ಲಿ ಪ್ರಬಲ ಜಾತಿಯವರಲ್ಲದಿದ್ದರೂ ಕ್ಷೇತ್ರದ ಜನ ಮಣೆ ಹಾಕಿದ್ದಾರೆ. ಪ್ರಬಲ ಜಾತಿಯವರು ಅಖಾಡದಲ್ಲಿದ್ದರೂ ಕಡಿಮೆ ಮತಗಳಿರುವ ಜಾತಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಪ್ರೌಢಿಮೆ ಕ್ಷೇತ್ರದ ಜನರಲ್ಲಿದೆ. ಆದರೆ ಬದಲಾದ ರಾಜಕೀಯದಲ್ಲಿ ಪಕ್ಷಗಳು ಜಾತಿಗೆ ಮಣೆ ಹಾಕುತ್ತಿರುವುದು ವಿಪರ್ಯಾಸ.
ಟಿಕೆಟ್‌ಗೆ ಜೆಡಿಎಸ್ ಮೂಲಕ ಲಾಬಿ:--
ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಶತಾಯಗತಾಯ ಟಿಕೆಟ್ ಗಿಟ್ಟಿಸಲು ಯತ್ನಿಸಿರುವ ಮಾಜಿ ಸಚಿವ ಡಾ.ಕೆ.ಸುಧಾಕರ್ ಈಗ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಮೂಲಕ ಬಿಜೆಪಿ ಮೇಲೆ ಒತ್ತಡ ಹೇರುವ ತಂತ್ರಕ್ಕೆ ಶರಣಾಗಿದ್ದಾರೆ ಎನ್ನುತ್ತವೆ ಮೂಲಗಳು. ಹೈಕಮಾಂಡ್ ಸುಧಾಕರ್‌ಗೆ ಟಿಕೆಟ್ ನೀಡಲು ಹಿಂದುಮುಂದು ನೋಡುತ್ತಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರ ಮೂಲಕ ಟಿಕೆಟ್‌ಗೆ ಒತ್ತಡ ಹೇರುವ ಯತ್ನ ನಡೆಸಿದ್ದಾರೆ. ಈ ಹಿಂದೆಯೇ ಜೆಡಿಎಸ್ ವರಿಷ್ಠರನ್ನು ಭೇಟಿಯಾಗಿದ್ದ ಸುಧಾಕರ್ ಬೆಂಬಲಕ್ಕೆ ಮನವಿ ಮಾಡಿದ್ದರು.
ಈಗಾಗಲೇ ಬಿಜೆಪಿ ಹೈಕಮಾಂಡ್ ಗೆ ಜೆಡಿಎಸ್‌ನಿಂದಲೂ ಸುಧಾಕರ್‌ಗೆ ಟಿಕೆಟ್ ನೀಡುವಂತೆ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಟಿಕೆಟ್ ವಿಷಯದಲ್ಲಿ ಭಾರೀ ಪೈಪೋಟಿ ನಡೆಯುತ್ತಿದ್ದು, ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತೆ ಎಂಬುದು ನಿಗೂಢವಾಗಿದೆ. ಅಲೋಕ್ ವಿಶ್ವನಾಥ್ ಮತ್ತು ಸುಧಾಕರ್ ಪರ ಬ್ಯಾಟಿಂಗ್ ಮಾಡುವವರೂ ಇದ್ದಾರೆ. ಇನ್ನೊಂದೆಡೆ ಜೆಡಿಎಸ್‌ನ ಕುಮಾರಸ್ವಾಮಿ ಅವರಿಗೂ ಸ್ಪರ್ಧಿಸುವ ಆಫರ್ ನೀಡುವ ಮೂಲಕ ನಾನಾ ಲೆಕ್ಕಾಚಾರಗಳಿಗೆ ಕಾರಣವಾಗಿದೆ.
ಹರಿದಾಡುತ್ತಿವೆ ಪೋಸ್ಟರ್ ಗಳು :-
ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನಮ್ಮ ನಾಯಕರಿಗೆ ಟಿಕೆಟ್ ಖಾತ್ರಿ ಎಂದು ಬೆಂಬಲಿಗರು ಪ್ರಚಾರ ಶುರುವಿಟ್ಟಿದ್ದಾರೆ. ಬಿಜೆಪಿ ಟಿಕೆಟ್ ಡಾಕ್ಟರ ಕೆ ಸುಧಾಕರ್ ಕಾಂಗ್ರೆಸ್ ಟಿಕೆಟ್ ರಕ್ಷಾ ರಾಮಯ್ಯ ಎನ್ನುವ ಪೋಸ್ಟರ್ಗಳು ಹರಿದಾಡುತ್ತಿವೆ. ಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮ ನಾಯಕರನ್ನ ಗೆಲ್ಲಿಸಿ, ನಮ್ಮ ಪಕ್ಷಕ್ಕೆ ಮತ ಕೊಡಿ ಎಂದು ಸಂದೇಶ ಸಾರಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖವಾಗಿ ಅಭ್ಯರ್ಥಿಗಳ ಪ್ರಚಾರ ಬಿಡಿಸಿನಿಂದ ನಡೆಯುತ್ತಿದ್ದು ಪಕ್ಷದ ಸಾಧನೆ ವರಿಷ್ಠರು ಮತ್ತು ನಾಯಕರ ಅಭಿವೃದ್ಧಿ ಕೆಲಸ ವಿಪಕ್ಷಗಳ ದುರಾಡಳಿತ ನೀತಿ ಸೇರಿ ನಾನಾ ವಿಚಾರಗಳು ಹರಿದಾಡುತ್ತಿದ್ದು ಇದರಲ್ಲಿ ಸ್ವಪಕ್ಷರನ್ನು ಹಾಡಿ ಹೊಗಳಿ ಆಟಕ್ಕೇರಿಸುವಂತಹ ಸಂದೇಶಗಳನ್ನು ಹಾಕಲಾಗುತ್ತಿದೆ.












Click it and Unblock the Notifications