Chikkaballapur: ಬಿರುಗಾಳಿ ಸಹಿತ ಆಲಿಕಲ್ಲು ಮಳೆ: ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಷ್ಟ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು ರೈತರ ಜೀವಾಳವಾಗಿದ್ದ ದ್ರಾಕ್ಷಿ, ಮಾವು, ಟೊಮೇಟೊ, ಪಪ್ಪಾಯ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳು ನಾಶವಾಗಿ ರೈತರು ಕಂಗಾಲಾಗಿದ್ದಾರೆ.
ಚಿಕ್ಕಬಳ್ಳಾಪುರ, ಮಾರ್ಚ್ 18: ಜಿಲ್ಲೆಯ ವಿವಿಧೆಡೆ ಗುರುವಾರ ಮತ್ತು ಶುಕ್ರವಾರ ಮಧ್ಯರಾತ್ರಿ ಗುಡುಗು ಹಾಗೂ ಸಿಡಿಲಿನೊಂದಿಗೆ ಮಳೆ ಸುರಿದ ಪರಿಣಾಮ ಸಾರಿಗೆ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಸಾರ್ವಜನಿಕ ಸೇವೆ ವ್ಯತ್ಯಯ ಉಂಟಾಗಿದೆ. ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು ರೈತರ ಜೀವಾಳವಾಗಿದ್ದ ದ್ರಾಕ್ಷಿ, ಮಾವು, ಟೊಮೇಟೊ, ಪಪ್ಪಾಯ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳು ನಾಶವಾಗಿ ರೈತರು ಕಂಗಾಲಾಗಿದ್ದಾರೆ.
ಗುಡಿಬಂಡೆ ತಾಲೂಕಿನ ಕಸಬಾ ಮತ್ತು ಸೋಮೇನಹಳ್ಳಿ ಹೋಬಳಿಯ ಉಲ್ಲೋಡು, ಎಲ್ಲೋಡು, ಹಂಪಸಂದ್ರ, ಚೆಂಡೂರು, ಸೋಮೇನಹಳ್ಳಿ, ತಿರುಮಣಿ, ಬೀಚಗಾನಹಳ್ಳಿ, ವರ್ಲಕೊಂಡ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆ ಬಿರುಗಾಳಿಗೆ ಸಿಲುಕಿ ನಾನಾ ಗ್ರಾಮಗಳ ರೈತರ ಬೆಳೆಗಳು ನಾಶವಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ.

ತೋಟಗಾರಿಕಾ ಬೆಳೆಗಳು ನಷ್ಟ
ರಾತ್ರೋ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ತೆಂಗಿನಮರಗಳು, ಆಲದ ಮರ , ನೀಲಗಿರಿ ಮರಗಳು ಮುರಿದು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಕಂಬಗಳು ಮತ್ತು ಮರಗಳುಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಿಂದ ತಾಲೂಕು ಸೇರಿದಂತೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಉರುಳಿವೆ. ಈ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ವಿವಿಧ ಭಾಗಗಳಲ್ಲಿ ಆಲಿಕಲ್ಲು ಬಿರುಗಾಳಿ ಸಹಿತ ಮಳೆ ಬಿದ್ದು ನೋಡ ನೋಡುತ್ತಿದ್ದಂತೆ ಬಿಳಿ ಕಲ್ಲು ಚೆಲ್ಲಿದಂತೆ ಬಿದ್ದು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿರುವ ತೋಟಗಾರಿಕಾ ಬೆಳೆಗಳಾದ ಟೊಮೇಟೊ, ಆಲೂಗಡ್ಡೆ, ಹೂಕೋಸು, ಸೌತೇಕಾಯಿ, ಬದನೆಕಾಯಿ, ಕ್ಯಾರೇಟ್, ಬೀನ್ಸ್ ಹೀಗೆ ನಾನಾ ತರವಾದ ಬೆಳೆಗಳಿಗೆ ಹಾನಿಯಾಗಿದ್ದು ರೈತರು ಕಂಗಾಲಾಗಿದ್ದಾರೆ.

ಬೆಳೆ ಹಾನಿ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ
ಅಲಿಕಲ್ಲು ಮಳೆಯಿಂದ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಕಟಾವು ಹಂತಕ್ಕೆ ಬಂದಿದ್ದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ದ್ರಾಕ್ಷಿ ಸಂಪೂರ್ಣ ಹಾಳಾಗಿದ್ದು ರೈತರು ಕಣ್ಣೀರು ಹಾಕುವಂತಾಗಿದೆ. ಸರ್ಕಾರದಿಂದ ಪರಿಹಾರ ಸಿಗುವಂತೆ ಮಾಡಿ ನಮ್ಮ ಕುಟುಂಬಗಳನ್ನು ರಕ್ಷಿಸಿ ಎಂದು ನೂರಾರು ರೈತರು ಮನವಿ ಮಾಡಿಕೊಂಡಿದ್ದಾರೆ. ಇನ್ನು ಬಿರುಗಾಳಿಯ ಹೊಡೆತಕ್ಕೆ ಸಿಕ್ಕ ಮಾವು ಬೆಳೆಯಂತೂ ಸಂಪೂರ್ಣ ಹಾನಿಯಾಗಿದೆ.
ತಡರಾತ್ರಿ ಬಿದ್ದ ಗಾಳಿ ಸಹಿತ ಆಲಿಕಲ್ಲು ಮಳೆಯಿಂದ ಮಾವು, ದ್ರಾಕ್ಷಿ ಟೊಮೆಟೋ, ಆಲೂಗಡ್ಡೆ ಹಾಗೂ ಇತರೆ ತರಕಾರಿ ಬೆಳೆಗಳು ನಾಶವಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮನಿಷಾ ಹಾಗೂ ಕಂದಾಯ ನಿರೀಕ್ಷಕ ಲಕ್ಷ್ಮೀನಾರಾಯಣ ಸೇರಿ ಇತರೆ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಲ್ಲದೇ ಸರ್ಕಾರಕ್ಕೆ ಶೀಘ್ರದಲ್ಲೇ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ದ್ರಾಕ್ಷಿ ಬೆಳೆಗಾರರಿಗೆ ಭಾರೀ ನಷ್ಟ
ಕಳೆದ 24 ಗಂಟೆಗಳಿಂದ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿವಿಧ ಕಡೆ ಬೃಹದಾಕಾರದ ಮರಗಳು ಹಾಗೂ ಕಂಬಗಳು ಮುರಿದು ಬಿದ್ದಿದ್ದು ತೆರವು ಕಾರ್ಯಾಚರಣೆ ತಡವಾಗಿರುವ ಕಾರಣ ಕಳೆದ 24 ಗಂಟೆಗಳಿಂದ ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರು ಸೇರಿದಂತೆ ಇತರೆ ಸಮಸ್ಯೆಗಳು ತಲೆದೋರಿವೆ.
ಇನ್ನು ಅಕಾಲಿಕ ಮಳೆಯ ಪರಿಣಾಮದ ಬಗ್ಗೆ ದ್ರಾಕ್ಷಿ ಬೆಳೆಗಾರ ನರಸಿಂಹಪ್ಪ ಮಾತನಾಡಿದ್ದು," ಪ್ರಕೃತಿ ವಿಕೋಪದಿಂದ ನಷ್ಟವಾಗಿರುವ ಬೆಳೆಗೆ ಸರ್ಕಾರ ಈ ಕೂಡಲೇ ತೋಟಗಳನ್ನು ಪರಿಶೀಲಿಸಿ ನಷ್ಟ ಪರಿಹಾರ ಕೊಡಬೇಕೆಂದು ರೈತರು ಆಗ್ರಹಿಸಿದ್ದಾರೆ. ನಮ್ಮ ಭಾಗದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬಿಟ್ಟಿದ್ದ ಮಾವಿನ ಫಸಲು ಪ್ರಕೃತಿ ವಿಕೋಪದಿಂದ ನಷ್ಟವಾಗಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು, ತಾಲೂಕು ಅಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರು ರೈತರ ಬಗ್ಗೆ ಗಮನ ಹರಿಸಿ ಬೆಳೆ ನಷ್ಟ ಪರಿಹಾರ ಅಂದಾಜು ಮಾಡಿ ರೈತರ ನೆರವಿಗೆ ಬರಬೇಕು ಎಂದರು.

ವಿದ್ಯುತ್ ಕಡಿತ: ಸೆಕೆಗೆ ಜನರ ಪರದಾಟ
ಬೇಸಿಗೆ ವೇಳೆ ಈ ರೀತಿ ಗುಡುಗು ಮಿಂಚಿನೊಂದಿಗೆ ಮಳೆ ಆಗಿರಲಿಲ್ಲ. ಇಂತಹ ಗುಡುಗು ಕೂಡ ಕೇಳಿರಲಿಲ್ಲ ಎಂದು ಮಧ್ಯರಾತ್ರಿ ಸರಿದ ಧಾರಾಕಾರ ಮಳೆ ಸದ್ದಿನ ಕುರಿತು ಜನ ಹೋಟೆಲ್, ಬಸ್ ನಿಲ್ದಾಣ, ಅರಳಿಕಟ್ಟೆ ಮುಂತಾದೆಡೆ ಗುಂಪು ಗುಂಪಾಗಿ ಕೂತ ಜನರು ಮಾತನಾಡಿ ಕೊಳ್ಳುತ್ತಿದ್ದರು. ರಾತ್ರಿ ವೇಳೆ ವಿದ್ಯುತ್ ಸಂಪರ್ಕವೂ ಕಡಿತವಾಗಿತ್ತು. ಮಳೆ ಜೋರಾಗುತ್ತಿದ್ದಂತೆ ಮಕ್ಕಳು ಎಚ್ಚರಗೊಂಡರು. ಗುಡುಗಿನ ಸದ್ದಿಗೆ ಗಾಬರಿಗೊಂಡಿದ್ದರು ಸ್ಥಳೀಯರು ತಿಳಿಸಿದ್ದಾರೆ.
ಹವಾಮಾನ ವೈಪರೀತ್ಯದಿಂದ ತಾಲೂಕಿನ ಹಲವೆಡೆ ಅಪಾರ ಪ್ರಮಾಣದ ದ್ರಾಕ್ಷಿಬೆಳೆ ಹಾನಿಗೀಡಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹೋಬಳಿ, ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಹಾಗೂ ಕಸಬಾ ಹೋಬಳಿಗಳು ಸೇರಿದಂತೆ ಹಲವೆಡೆ ಬೀನ್ಸ್, ಆಲೂಗಡ್ಡೆ, ಹೂಕೋಸು, ಕ್ಯಾರೆಟ್, ಕೊತ್ತಂಬರಿ, ಸೌತೇಕಾಯಿ ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣ ಆಲಿಕಲ್ಲು ಮಳೆಗೆ ಆಹುತಿಯಾಗಿವೆ. ಆಕಸ್ಮಿಕ ಮಳೆಯಿಂದ ಅತ್ತ ಬಿಸಿಲು ಅಲ್ಲದ ಇತ್ತ ತಂಪು ಇರದ ಸ್ಥಿತಿಯಲ್ಲಿ ಜನರು ಝಳದಿಂದ ಕಂಗೆಡುವಂತಾಯಿತು. ಈ ಮಧ್ಯೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನ ಸೆಕೆಯಿಂದ ಪರದಾಡಿದರು.












Click it and Unblock the Notifications