ನಾಳೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬರ ಅಧ್ಯಯನ: ಪರಿಹಾರದ ನಿರೀಕ್ಷೆಯಲ್ಲಿ ರೈತ ವರ್ಗ

ಚಿಕ್ಕಬಳ್ಳಾಪುರ, ಅಕ್ಟೋಬರ್‌ 05: ಈ ವರ್ಷದ ಮುಂಗಾರು ಅವಧಿಯಲ್ಲಿ ಮಳೆಯ ಅಭಾವಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯು ತತ್ತರಿಸಿರುವ ಹಿನ್ನಲೆಯಲ್ಲಿ ಕೇಂದ್ರ ಬರ ಅಧ್ಯಯನ ತಂಡವು ಸಮೀಕ್ಷಾ ಕಾರ್ಯವನ್ನು ನಾಳೆ ಅಂದರೆ ಅಕ್ಟೋಬರ್ 6ರಂದು ಸಂಬಂಧಪಟ್ಟ ವಿವಿಧ ಅಧಿಕಾರಿಗಳ ತಂಡಗಳೊಂದಿಗೆ ನಡೆಯಲಿದೆ.

ಪ್ರಸಕ್ತ ಸಾಲಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಶೇ.50ಕ್ಕೂ ಹೆಚ್ಚು ಬೆಳೆ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಎಲ್ಲ ತಾಲೂಕುಗಳನ್ನು ತೀವ್ರ ಬರ ಆವೃತ ಪ್ರದೇಶಗಳು ಎಂದು ಘೋಷಿಸಲಾಗಿದೆ. ಅದರಂತೆ ಕೇಂದ್ರಕ್ಕೆ ಬರ ಪರಿಹಾರಕ್ಕೆ ರಾಜ್ಯ ಸರ್ಕಾರವು ಪ್ರಸ್ತಾವನೆ ಸಲ್ಲಿಸಿರುವುದರಿಂದ ಇಲ್ಲಿನ ಸ್ಥಿತಿಗತಿಗಳ ಅಧ್ಯಯನಕ್ಕಾಗಿ ಅಧಿಕಾರಿಗಳ ತಂಡವು ಜಿಲ್ಲೆಗೆ ಭೇಟಿ ನೀಡುತ್ತಿದೆ.

Drought Study In Chikkaballapur District From Tomorrow

ಅಧಿಕಾರಿಗಳ ತಂಡ ಎಲ್ಲೆಲ್ಲಿಗೆ ಭೇಟಿ ನೀಡಲಿದ್ದಾರೆ?

ಬೆಳಗ್ಗೆ 10:10ಕ್ಕೆ ಚಿಕ್ಕಬಳ್ಳಾಪುರ ತಾಲೂಕಿನ ಚೊಕ್ಕಹಳ್ಳಿ, ಬೆಳಗ್ಗೆ 10.50ಕ್ಕೆ ಬಂಡಮನಹಳ್ಳಿ, ಬೆಳಗ್ಗೆ ಪ್ರವಾಸ 11:05ಕ್ಕೆ ದೊಡ್ಡಗಾನಹಳ್ಳಿಯ ರೈತರ ಜಮೀನುಗಳಿಗೆ ಭೇಟಿ ನೀಡಲಿದ್ದಾರೆ. ಪ್ರವಾಸ ಮುಂದುವರೆದು ಬೆಳಗ್ಗೆ 11.35ಕ್ಕೆ ಗೌರಿಬಿದನೂರು ತಾಲೂಕಿನ ಜಕ್ಕೇನಹಳ್ಳಿ ಮತ್ತು ಬೆಳಗ್ಗೆ 11.55 ಗಂಗಸಂದ್ರ ಹಾಗೂ ಮಧ್ಯಾಹ್ನ 12:15ಕ್ಕೆ ಕಡಬೂರು ರೈತರ ಜಮೀನುಗಳಿಗೆ ಭೇಟಿ ನೀಡಲಿದ್ದಾರೆ. ತದನಂತರ ನೆರೆಯ ತುಮಕೂರು ಜಿಲ್ಲೆಯಲ್ಲಿ ಬರ ವೀಕ್ಷಣೆ ಮುಂದುವರಿಯಲಿದ್ದು ಮಧ್ಯಾಹ್ನ 1.30ಕ್ಕೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿಗೆ ತೆರಳಿ ಅಲ್ಲಿಂದ ಬೇರೆ ಬೇರೆ ಕಡೆ ಅಧ್ಯಯನ ಕಾರ್ಯ ಸಾಗಲಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.

ಈ ಹಿಂದೆಯು ಜಿಲ್ಲೆಯಲ್ಲಿ ಬರ ಅಧ್ಯಯನ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ 13 ವರ್ಷಗಳಲ್ಲಿ ಹಲವು ಬಾರಿ ಜಿಲ್ಲೆಯನ್ನು ಬರ ಕಾಡಿದೆ. ಈ ಹಿಂದೆ ಎನ್.ಮಂಜುಳಾ, ಅನ್ವರ್ ಪಾಷಾ, ಆದಿತ್ಯ ಕಾನಡೆ, ಪಿ.ಅನಿರುದ್ಧ ಶ್ರವಣ್‌ ಜಿಲ್ಲಾಧಿಕಾರಿಗಳಾಗಿದ್ದ ಅವಧಿಯಲ್ಲಿ ಕೇಂದ್ರ ಅಧ್ಯಯನ ತಂಡವು ಜಿಲ್ಲೆಗೆ ಭೇಟಿ ನೀಡಿದ್ದವು. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಂಚರಿಸಿ, ಬರದ ವಾಸ್ತವ ಸ್ಥಿತಿಗತಿಯನ್ನು ಗಮನಿಸಿದ್ದನ್ನು ನಾವು ನೆನೆಯಬಹುದಾಗಿದೆ.

ಬರ ಅಧ್ಯಯನ ತಂಡದಲ್ಲಿ ಯಾರ್ಯಾರು..?

ಕೇಂದ್ರೀಯ ಜಲ ಆಯುಕ್ತಾಲಯ ನಿರ್ದೇಶಕ ವಿ.ಅಶೋಕ್ ಕುಮಾರ್, ಎಂಎನ್‌ಸಿಎಫ್‌ಸಿ ಕೇಂದ್ರ ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕಿರಣ್‌ ಚೌದರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧೀನ ಕಾರ್ಯದರ್ಶಿ ಸಂಗೀತ್ ಕುಮಾರ್, ರಾಜ್ಯ ಕಂದಾಯ ಇಲಾಖೆಯ ವಿಪತ್ತು ನಿರ್ವಾಹಣಿಯ ಹಿರಿಯ ಸಮಾಲೋಚಕ ಜಿ.ಎಸ್. ಶ್ರೀನಿವಾಸರೆಡ್ಡಿ ಸೇರಿದಂತೆ ಪ್ರಮುಖರು ಕೇಂದ್ರ ಬರ ಅಧ್ಯಯನ ತಂಡದಲ್ಲಿ ಇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Drought Study In Chikkaballapur District From Tomorrow

ಬೆಳಕಿಗೆ ಬರಲಿದೆ ಬೆಳೆ ನಷ್ಟ ಮಾಹಿತಿ

ಮುಂಗಾರು ಅವಧಿಗೆ 1.54 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಇದರಲ್ಲಿ ಶೇ.80ರಷ್ಟು ಸಾಧನೆಯಾಗಿದೆ. ಆದರೆ, ಬಿತ್ತನೆ ಸಂದರ್ಭದಲ್ಲಿ ಮಳೆ ಕೈಕೊಟ್ಟಿದ್ದರಿಂದ ಶೇ.60ಕ್ಕೂ ಹೆಚ್ಚು ಬೆಳೆಗಳು ನಾಶವಾಗಿ ರೈತರು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಪ್ರಸ್ತುತ ಮಳೆ ಕೊರತೆಯಿಂದಾಗಿ ಅಂತರ್ಜಲ ಕುಸಿತ, ಕೊಳವೆ ಬಾವಿಗಳ ವೈಫಲ್ಯ, ನೀರಿಗೆ ಹಾಹಾಕಾರ ಮತ್ತು ಮೇವಿನ ಕೊರತೆಯು ತೀವ್ರವಾಗಿಲ್ಲ. ಆದರೆ, ಬೆಳೆ ನಾಶವೇ ಗಂಭೀರ ಸಮಸ್ಯೆಯಾಗಿದೆ. ಕೃಷಿಕರು ಮತ್ತು ಕೂಲಿ ಕಾರ್ಮಿಕರ ಸಂಪಾದನೆಗೆ ಪೆಟ್ಟು ಬಿದ್ದಿದೆ.

ಅಹವಾಲು ಸ್ವೀಕಾರ

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು, ಶಿಡ್ಲಘಟ್ಟ, ಚಿಂತಾಮಣಿ ಸೇರಿದಂತೆ ಹೊಸ ತಾಲೂಕುಗಳಾದ ಮಂಚೇನಹಳ್ಳಿ ಹಾಗೂ ಚೇಳೂರು ಒಳಗೊಂಡಂತೆ ಎಲ್ಲಾ ತಾಲೂಕುಗಳು ಸಹ ಬರಪೀಡಿತ ಪ್ರದೇಶಗಳಾಗಿವೆ. ಈ ಪೈಕಿ ಅಧ್ಯಯನ ತಂಡವು ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರಿನಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, 6 ಗ್ರಾಮಗಳಲ್ಲಿ ರೈತರ ಅಹವಾಲು ಆಲಿಸಿ, ನಷ್ಟದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಇನ್ನು ರಾಷ್ಟ್ರೀಯ ಹೆದ್ದಾರಿ 234ರ ಮಾರ್ಗದಲ್ಲಿನ ಗ್ರಾಮಗಳಲ್ಲಿ ಸಂಚರಿಸುತ್ತ ತುಮಕೂರಿನತ್ತ ಬರ ಅಧ್ಯಯನಕ್ಕೆ ತಂಡ ತೆರಳಲಿದೆ.

ಸಕಲ ಸಿದ್ಧತೆಯಲ್ಲಿ ಜಿಲ್ಲಾಡಳಿತ ತಂಡ

ಬರದಿಂದ ತತ್ತರಿಸಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉಂಟಾಗಿರುವ ನಷ್ಟ, ಸಮಸ್ಯೆಗಳು ಮತ್ತು ನಿರೀಕ್ಷೆಯ ಪರಿಹಾರದ ಬಗ್ಗೆ ಗಮನ ಸೆಳೆಯುವ ನಿಟ್ಟಿನಲ್ಲಿ ತಂಡಕ್ಕೆ ಸಮಗ್ರ ಮಾಹಿತಿ ನೀಡಲು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಕಳೆದ ತಿಂಗಳು ಸೆ.30ಕ್ಕೆ ಬೆಳೆ ನಷ್ಟ ಅಂದಾಜು ಸಮೀಕ್ಷಾ ಕಾರ್ಯ ಮುಗಿದಿದೆ. ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿಯನ್ನು ತಯಾರಿಸಿ, ಪರ್ಯಾಯವಾಗಿ ಟ್ಯಾಂಕರ್ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.

ರಾಸುಗಳಿಗೆ ಬೇಕಾದ ಮೇವು ಉತ್ಪಾದನೆ ಹೆಚ್ಚಳಕ್ಕೂ ಆದ್ಯತೆ ನೀಡಲಾಗಿದೆ. ಇದರ ನಡುವೆ ಒಣಗಿ ಹೋದ ಬೆಳೆಗಳಿಂದ ಆರ್ಥಿಕ ಸಂಕಷ್ಟಕ್ಕೊಳಕ್ಕಾಗಿರುವ ರೈತರಿಗೆ ಸಮರ್ಪಕ ಪರಿಹಾರ ಒದಗಿಸಬೇಕಾಗಿದೆ. ಮುಂಬರುವ ದಿನಗಳಲ್ಲಿ ಬರದ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸುವಂತಾಗಲು ನಿರೀಕ್ಷೆಯ ಕೆಲಸಗಳಿಗೆ ವಿಶೇಷ ಅನುದಾನದ ಅಗತ್ಯವಿದೆ. ಇದರ ಬಗ್ಗೆ ರಾಜ್ಯ ಸರ್ಕಾರದ ಮೂಲಕ ಕೇಂದ್ರದ ಗಮನ ಸೆಳೆದಿದ್ದು, ಜಿಲ್ಲೆಗೆ ಆಗಮಿಸುವ ತಂಡಕ್ಕೆ ಪವರ್ ಪಾಯಿಂಟ್ ಪ್ರೆಸೆಂಟೇಷನ್, ಭಾವಚಿತ್ರ ಸಮೇತ ಅಂಕಿ ಅಂಶ, ಹಿರಿಯರ ಅಧಿಕಾರಿಗಳ ಸಮ್ಮುಖದಲ್ಲಿ ಖುದ್ದು ರೈತರಿಂದ ಸಮಸ್ಯೆಗಳನ್ನು ಪ್ರಸ್ತಾಪಿಸುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+