ಜಾತಿ ಮತ್ತು ಆದಾಯ ಪ್ರಮಾಣಪತ್ರ, ಅಟ್ಲಾಸ್, ಪಹಣಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಿಲ್ಲ!
ಚಿಕ್ಕಬಳ್ಳಾಪುರ, ಮಾರ್ಚ್ 12: ಪಹಣಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ಕಂದಾಯ ಇಲಾಖೆ ವಿವಿಧ ದಾಖಲೆಗಳನ್ನು ನೇರವಾಗಿ ರೈತರು ಮತ್ತು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಯೋಜನೆಗೆ ಚಾಲನೆ ಸಿಕ್ಕಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಪೋಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಂಗಿರ್ಲಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿದ್ಯುಕ್ತವಾಗಿ ಚಾಲನೆ ನೀಡಿದರು.
ಕಂದಾಯ ಇಲಾಖೆ ಗ್ರಾಮ ವಾಸ್ತವ್ಯ, ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ ಎಂಬ ವಿನೂತನ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಈಗಾಗಲೇ ಪರಿಚಯಿಸುವ ಮೂಲಕ ಕಂದಾಯ ಇಲಾಖೆ ಗಮನ ಸೆಳೆದಿದೆ. ಇದೀಗ ಪಹಣಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನು ನೇರವಾಗಿ ರೈತರು ಮತ್ತು ಸಾರ್ವಜನಿಕರ ಮನೆಬಾಗಿಲಿಗೆ ಉಚಿತವಾಗಿ ತಲುಪಿಸುವ ಮಹತ್ವದ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

55 ಲಕ್ಷ ರೈತರಿಗೆ 5 ಕೋಟಿ ವಿವಿಧ ಕಂದಾಯ ದಾಖಲೆ:
ರಾಜ್ಯದಲ್ಲಿ ಈ ವಿಶಿಷ್ಟ ಯೋಜನೆ ಮೂಲಕ ಒಂದೇ ದಿನದಲ್ಲಿ ಸುಮಾರು 55 ಲಕ್ಷ ರೈತರಿಗೆ 5 ಕೋಟಿ ವಿವಿಧ ಕಂದಾಯ ದಾಖಲೆಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಇದು ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಕಂದಾಯ ಕ್ರಾಂತಿಗೆ ಸಾಕ್ಷಿಯಾಗಲಿದೆ. ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯಿಂದ ರೈತರು ಮತ್ತು ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ. ಕಂದಾಯ ದಾಖಲೆಗಳು ನೇರವಾಗಿ ರೈತರ ಮನೆ ಬಾಗಿಲಿಗೆ ತಲುಪುವುದರಿಂದ ರೈತರಿಗೆ ಸರ್ಕಾರದ ಖಾತ್ರಿಯೊಂದಿಗೆ ದಾಖಲೆಗಳು ಅಧಿಕೃತ ಮತ್ತು ಸುಲಭವಾಗಿ ಸಿಗುತ್ತದೆ ಎಂದರು.
ಎತ್ತಿನಹೊಳೆ ಯೋಜನೆಗೆ 3 ಸಾವಿರ ಕೋಟಿ:
ಚಿಕ್ಕಬಳ್ಳಾಪುರ-ಕೋಲಾರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳ ನೀರಿನ ಬವಣೆ ನೀಗಿಸಲು ರಾಜ್ಯ ಸರ್ಕಾರ ಜಾರಿ ಮಾಡಿರುವ ಎತ್ತಿನಹೊಳೆ ಯೋಜನೆಗೆ ಈ ಬಾರಿಯ ಆಯವ್ಯಯದಲ್ಲಿ 3 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಎತ್ತಿನಹೊಳೆ ಕಾಮಗಾರಿಯ ವೇಗವನ್ನು ಹೆಚ್ಚಿಸಿ ಸಾಧ್ಯವಾದಷ್ಟು ಮಟ್ಟಿಗೆ ಮುಂದಿನ ವರ್ಷ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಹರಿಸಲು ಶ್ರಮಿಸಲಾಗುವುದು ಎಂದು ಸಿಎಂ ತಿಳಿಸಿದರು.
ಕಂದಾಯ ಇಲಾಖೆಯಲ್ಲಿ ಮಹತ್ವದ ಬದಲಾವಣೆಗೆ ನಾಂದಿ:
ಕಂದಾಯ ಇಲಾಖೆಯಲ್ಲಿ ಹಲವು ವಿನೂತನ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಕಂದಾಯ ದಾಖಲೆಗಳನ್ನು ನೇರವಾಗಿ ರೈತರ ಮನೆ ಬಾಗಿಲಿಗೆ ತಲುಪಿಸುವ ಯೋಜನೆಯಿಂದ ರಾಜ್ಯದ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ. ದಾಖಲೆಯನ್ನು ಪಡೆಯುವುದು ಪ್ರತಿಯೊಬ್ಬರ ಹಕ್ಕು. ಆ ಹಕ್ಕನ್ನು ಅತ್ಯಂತ ಸರಳ ರೀತಿಯಲ್ಲಿ ಪಡೆಯಲು ಈ ಮಹತ್ವದ ಯೋಜನೆ ಸಹಕಾರಿ ಆಗಲಿದೆ. ಭೂ ದಾಖಲೆಗಳ ಇಲಾಖೆಯಲ್ಲಿ ಭೂಮಾಪನಕ್ಕೆ ಸಂಬಂಧಿಸಿದಂತೆ 2 ಲಕ್ಷ ಅರ್ಜಿಗಳ ವಿಲೇವಾರಿ ಬಾಕಿಯಿದ್ದು, ಈಗಾಗಲೇ 3 ಸಾವಿರ ಭೂಮಾಪಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ರಾಜ್ಯಾದ್ಯಂತ 55 ಲಕ್ಷ ರೈತರಿಗೆ ಅಗತ್ಯ ದಾಖಲೆ:
ಕರ್ನಾಟಕದಾದ್ಯಂತ 55 ಲಕ್ಷ ರೈತಾಪಿ ವರ್ಗದವರಿಗೆ ಸುಮಾರು 5 ಕೋಟಿ ದಾಖಲೆಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಈ ದಾಖಲೆಗಳಿಂದ ರೈತರು ತಮ್ಮ ಹಕ್ಕುಸ್ವಾಮ್ಯದ ಬಗ್ಗೆ ಸೂಕ್ತವಾಗಿ ತಿಳಿದುಕೊಳ್ಳಬಹುದು. ಬ್ಯಾಂಕ್ ಮೂಲಕ ಸಾಲ ತೆಗೆದುಕೊಳ್ಳಲು ಹಾಗೂ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಪಡೆಯಲು ಸಹಕಾರಿ ಆಗುತ್ತದೆ. ಈ ಎಲ್ಲಾ ಅಂಶಗಳನ್ನು ಮನಗಂಡು 'ಅಲೆದಾಟ ಬೇಕಿಲ್ಲ ಇಂದು ನಾಳೆ ಸುತ್ತಾಟವಿಲ್ಲ ಬಂತು ನೋಡಿ ಮನೆ ಬಾಗಿಲಿಗೆ ದಾಖಲೆ' ಎಂಬ ವಾಕ್ಯದೊಂದಿಗೆ ಕಂದಾಯ ದಾಖಲೆ ಮನೆ ಬಾಗಿಲಿಗೆ ನಿಮ್ಮ ದಾಖಲೆ ಎಂಬ ವಿನೂತನ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.
ಅಧಿಕಾರಿಗಳು ದಿನವಿಡೀ ಅಭಿಯಾನದ ರೀತಿ ಈ ಯೋಜನೆಯನ್ನು ಯಶಸ್ವಿಗೊಳಿಸುತ್ತಿದ್ದಾರೆ. ಈ ಯೋಜನೆ ಮಾದರಿಯಲ್ಲೇ ಮನೆ ಬಾಗಿಲಿಗೆ ಪಿಂಚಣಿ ಹಾಗೂ ತ್ವರಿತ ಪಾರದರ್ಶಕ ಭೂ ಪರಿವರ್ತನೆ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮ:
ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯ ರಾಜ್ಯ ಮಟ್ಟದ ಚಾಲನಾ ಕಾರ್ಯಕ್ರಮದ ಅಂಗವಾಗಿ ಶನಿವಾರ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಹೋಬಳಿಯ ಪೊಶೇಟ್ಟಹಳ್ಳಿ ಗ್ರಾಮ ಪಂಚಾಯತಿಯ ಗುಂಗೀರ್ಲಹಳ್ಳಿ ಗ್ರಾಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿದರು. ಗ್ರಾಮದ ಪ್ರವೇಶ ರಸ್ತೆಯಲ್ಲಿ ಮಹಿಳೆಯರು ಸಿಎಂಗೆ ಆರತಿ ಬೆಳಗಿ ಹಾಗೂ ಕುಂಭ ಸ್ವಾಗತ ನೀಡಿ ಬರಮಾಡಿಕೋಂಡರು. ತದನಂತರ "ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆ"ಯಡಿ ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ನೀಡುತ್ತಿರುವ ಮೂಲ ದಾಖಲೆಗಳನ್ನು ಗುಂಗೀರ್ಲಹಳ್ಳಿ ಗ್ರಾಮದ ರೈತ ಹನುಮಪ್ಪ ದೊಡ್ಡಪ್ಪಯ್ಯ ಹಾಗೂ ಇತರರಿಗೆ ಸ್ವತಃ ಸಿಎಂ ಉಚಿತವಾಗಿ ವಿತರಿಸಿದರು. ಆ ಮೂಲಕ ಯೋಜನೆಗೆ ಚಾಲನೆ ನೀಡಿದರು.
ಕಂದಾಯ ದಾಖಲೆಗಳನ್ನು ಸ್ವೀಕರಿಸಿದ ಫಲಾನುಭವಿಗಳು:
ಒಬಳಪ್ಪ ಬಿನ್ ಓಬಳೇಶಪ್ಪ, ಚಿಕ್ಕಮಾರಪ್ಪ ಬಿನ್ ಮದ್ದೂರಪ್ಪ, ಹನುಮಪ್ಪ ಬಿನ್ ಓಬಳಪ್ಪ, ಗಂಗಮ್ಮ ಕೋಂ ಓಬಳಪ್ಪ, ಚಿಕ್ಕಪ್ಪಯ್ಯ ಬಿನ್ ದೊಡ್ಡಪ್ಪಯ್ಯ, ಅಶ್ವತ್ಥಮ್ಮ ಕೋಂ ಲೇ ಪಾಪಣ್ಣ, ಚಿಕ್ಕಪ್ಪಯ್ಯ ಬಿನ್ ನರಸಿಂಹಯ್ಯ, ಹನುಮಂತಪ್ಪ ಬಿನ್ ದೊಡ್ಡಕಲ್ಲಪ್ಪ, ಅಶ್ವತ್ಥಪ್ಪ ಬಿನ್ ದೊಡ್ಡಹನುಮಪ್ಪ, ಮುನಿಕೃಷ್ಣಪ್ಪ ಬಿನ್ ಹನುಮಂತಪ್ಪ, ದೊಡ್ಡನರಸಿಂಹಯ್ಯ ಬಿನ್ ನರಸಿಂಹಯ್ಯ, ಕದಿರಪ್ಪ ಬಿನ್ ಲಕ್ಕಪ್ಪ ಎಂಬ ರೈತರಿಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾಖಲೆಗಳನ್ನು ವಿತರಿಸಿದರು.
ಇನ್ನು ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ ಗಿರಿನಾಥ್, ಹಿರಿಯ ಭೂ ದಾಖಲೆಗಳ ಇಲಾಖೆಯ ಆಯುಕ್ತ ಮುನೀಶ್ ಮೌದ್ಗಿಲ್, ಕಂದಾಯ ಇಲಾಖೆಯ ಪ್ರಾದೇಶಿಕ ಆಯುಕ್ತ ನವೀನರಾಜ್ ಸಿಂಗ್, ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್, ಜಿಲ್ಲಾಧಿಕಾರಿ ಆರ್.ಲತಾ, ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಶಂಕರ್, ಕರ್ನಾಟಕ ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜು, ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ಪೋಶೆಟ್ಟಹಳ್ಳಿ ಗ್ರಾ.ಪಂ ನ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷ ನಾಗರತ್ನ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಹರೀಶ್, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರೈತರು ಮತ್ತು ಗುಂಗೀರ್ಲಹಳ್ಳಿಯ ಗ್ರಾಮಸ್ಥರು ಉಪಸ್ಥಿತರಿದ್ದರು.

ಗ್ರಾಮಸ್ಥರೊಂದಿಗೆ ಸಿಎಂ ಸಂವಾದ:
ಗುಂಗೀರ್ಲಹಳ್ಳಿ ಗ್ರಾಮದಲ್ಲಿನ ಹಳ್ಳಿಕಟ್ಟೆಯ ಮೇಲೆ ಕುಳಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು. ಗ್ರಾಮಸ್ಥರ ಅಹವಾಲು ಆಲಿಸುವುದರ ಜೊತೆಗೆ ಅರಿವು ಮೂಡಿಸಿದರು. ಎತ್ತಿನ ಬಂಡಿ ಏರಿ ಗ್ರಾಮದಲ್ಲಿ ಮೆರವಣಿಗೆ ಕೈಗೊಂಡು ಯೋಜಯ ಕುರಿತು ಜಾಗೃತಿ ಮೂಡಿಸಿದರು. ಅಲ್ಲಿಂದ ಗ್ರಾಮದಲ್ಲಿಯೇ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯ ರಾಜ್ಯಮಟ್ಟದ ಚಾಲನಾ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಹೂವಿನ ಅಲಂಕಾರದಿಂದ ಸಿಂಗಾರಗೊಂಡಿತ್ತು.
ಜಿಲ್ಲಾಡಳಿತಕ್ಕೆ ಅಭಿನಂದನೆ
ಕಂದಾಯ ದಾಖಲೆ ಮನೆಬಾಗಿಲಿಗೆ ಯೋಜನೆಯ ರಾಜ್ಯ ಮಟ್ಟದ ಚಾಲನಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಹಾಗೂ ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ಕಂದಾಯ ಸಚಿವ ಆರ್ ಅಶೋಕ್ ಅಭಿನಂದನೆ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಸರ್ಕಾರದ "ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆ"ಯಡಿ ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ಪಹಣಿ, ಅಟ್ಲಾಸ್ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ನೀಡುವ ಯೋಜನೆಗೆ ಜಿಲ್ಲೆಯಲ್ಲಿ ಚಾಲನೆ ನೀಡಿರುವುದು ಸಂತಸ ತಂದಿದೆ ಎಂದರು.
ನಿವೇಶನ ರಹಿತರಿಗಾಗಿ 1217.28 ಎಕರೆ ಮಂಜೂರು:
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶ ಒಳಗೊಂಡಂತೆ 1217.28 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ನಿವೇಶನ ರಹಿತರಿಗಾಗಿ ಮಂಜೂರು ಮಾಡಲಾಗಿದೆ. ಈ ಪೈಕಿ 794 ಎಕರೆಯನ್ನು ಸಂಬಂಧಪಟ್ಟ ಇಲಾಖೆಗಳಿಗೆ ಹಸ್ತಾಂತರಿಸಲಾಗಿದ್ದು, ಉಳಿದ 423.28 ಎಕರೆ ಜಮೀನನ್ನು ಸಿಎಂ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಸ್ತಾಂತರಿಸಿದರು.
1217.28 ಎಕರೆ ಪೈಕಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗುರುತಿಸಿರುವ ಎಲ್ಲಾ ನಿವೇಶನ ರಹಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ಸಲುವಾಗಿ 506 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಸದರಿ ಮಂಜೂರು ಮಾಡಿರುವ ಪ್ರದೇಶದಲ್ಲಿ ಸುಮಾರು 22, 770 ನಿವೇಶನ ರಹಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡಬಹುದು. ಸದರಿ ವಿಧಾನಸಭಾ ಕ್ಷೇತ್ರದಲ್ಲಿ ಬೇಡಿಕೆಗೆ ಅನುಗುಣವಾಗಿ ಅವಶ್ಯಕವಿದ್ದ ಸರ್ಕಾರಿ ಜಮೀನನ್ನು ಸಂಪೂರ್ಣ ಮಂಜೂರು ಮಾಡಲಾಗಿರುತ್ತದೆ. ಜಮೀನಿನ ನಿವೇಶನಗಳ ಹಕ್ಕುಪತ್ರಗಳನ್ನು ಮುಂದಿನ 3 ರಿಂದ 4 ತಿಂಗಳ ಒಳಗಾಗಿ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಸಚಿವ ಡಾ. ಕೆ ಸುಧಾಕರ್ ತಿಳಿಸಿದರು.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ












Click it and Unblock the Notifications