ಕನ್ನಡ ಪದಗಳು ತಪ್ಪಾಗಿದ್ದರೂ ಪತ್ರಕ್ಕೆ ತಹಶೀಲ್ದಾರ್ ಸಹಿ: ನೋಟಿಸ್ ಕೊಟ್ಟ ಚಿಕ್ಕಬಳ್ಳಾಪುರ ಡಿಸಿ
ಸರ್ಕಾರಿ ಅಧಿಕಾರಿ ಅಂದ್ರೆ ಸಾಮಾನ್ಯವಾಗಿ ಓದಲು ಬರೆಯಲು ಚೆನ್ನಾಗಿ ಗೊತ್ತಿರುತ್ತೆ ಅಂತಾನೆ ಅರ್ಥ. ಉದ್ಯೋಗ ಕೊಡಬೇಕಾದ್ರೂ ಇದೆಲ್ಲವನ್ನೂ ನೋಡಿ ನೇಮಕಾತಿ ಮಾಡಿಕೊಳ್ಳಲಾಗುತ್ತೆ. ಇನ್ನು ತಹಶೀಲ್ದಾರ್ ಅಂದ್ರೆ ಒಂದು ರೀತಿಯ ದೊಡ್ಡ ಜವಾಬ್ದಾರಿ. ಸಮಾಜದಲ್ಲಿನ ತಪ್ಪು ತಿದ್ದಬೇಕು ಅನ್ನೋ ಕಾರಣಕ್ಕೆ ನೇಮಕಗೊಳ್ಳುವ ಇವರೇ ತಪ್ಪು ಮಾಡಿದರೆ ಏನರ್ಥ? ಇಂತಹ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕನ್ನಡದಲ್ಲೇ ಪರೀಕ್ಷೆ ಬರೆದು ಹುದ್ದೆಗೇರಿರುವ ತಹಶೀಲ್ದಾರ್‌ವೊಬ್ಬರು ಕನ್ನಡ ಪದಗಳನ್ನು ತಪ್ಪಾಗಿ ಬಳಕೆ ಮಾಡಿದ್ದಾರೆ ಎನ್ನುವ ದೂರು ಕೇಳಿಬಂದಿದೆ. ಇದಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಗರಂ ಕೂಡ ಆಗಿ ನೋಟಿಸ್ ನೀಡಿದ್ದಾರೆ.
ಚಿಂತಾಮಣಿ ತಹಶೀಲ್ದಾರ್ ಸುದರ್ಶನ್ ಅವರ ಪತ್ರದಲ್ಲಿ ಕನ್ನಡ ಪದಗಳ ತಪ್ಪಾದ ಬಳಕೆ, ಕಾಗುಣಿತ ತಪ್ಪಾಗಿರುವುದು ಪತ್ತೆಯಾಗಿದೆ. ಇಲ್ಲಿನ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಲು ಸಂಘಟನೆಯೊಂದು ಅನುಮುತಿ ಕೋರಿ ಈ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿತ್ತು. ಇದಕ್ಕೆ ತಹಶೀಲ್ದಾರ್ ಸುದರ್ಶನ್ ಉತ್ತರಿಸಿ ಪತ್ರ ನೀಡಿದ್ದರು. ಈ ತಿಳುವಳಿಕೆ ಪತ್ರದಲ್ಲಿ ಸರಳವಾದ ಕನ್ನಡ ಪದಗಳನ್ನೇ ತಪ್ಪಾಗಿ ಬರೆಯಲಾಗಿತ್ತು. ಇದನ್ನು ಕಂಡ ಸಂಘಟನೆಯವರು ನೇರವಾಗಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರಿಗೆ ದೂರು ನೀಡಿದ್ದರು ಎನ್ನಲಾಗಿದೆ.

ಪತ್ರದಲ್ಲಿ ಈ ಲೋಪದೋಷಗಳನ್ನು ಕಂಡ ಜಿಲ್ಲಾಧಿಕಾರಿ ರವೀಂದ್ರ ಅವರು ಗರಂ ಆಗಿದ್ದಾರೆ. ಅಲ್ಲದೆ, ಈ ಸಂಬಂಧ ಚಿಂತಾಮಣಿ ತಹಶೀಲ್ದಾರ್ ಸುದರ್ಶನ್ ಅವರಿಗೆ ನೋಟಿಸ್ ಕೂಡ ಜಾರಿ ಮಾಡಿದ್ದಾರೆ. ಒಂದು ವಾರದೊಳಗೆ ಉತ್ತರ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಪತ್ರದಲ್ಲಿ ತಪ್ಪಾದ ಕನ್ನಡ ಪದಗಳಿದ್ದರೂ ಅದನ್ನು ಪರಿಶೀಲಿಸದೆ ಸಹಿ ಮಾಡಿರುವುದಕ್ಕೆ ತಹಶೀಲ್ದಾರ್‌ಗೆ ಸಂಕಷ್ಟ ಎದುರಾಗಿದೆ.
ಪತ್ರದಲ್ಲಿದ್ದ ತಪ್ಪುಗಳೇನು?
ಶಂಬೂಕ ಸಂಘರ್ಷ ಸಮಿತಿಯವರು ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಪೊಲೀಸರ ವಿರುದ್ಧ ಚಿಂತಾಮಣಿ ತಾಲ್ಲೂಕು ಕಚೇರಿ ಎದುರು ಧರಣಿ ಮಾಡಲು ಕೋರಿದ್ದರು. ಇದರಿಂದ ಪಕ್ಕದ ಕೋರ್ಟ್ ಕಾರ್ಯಕಲಾಪಗಳಿಗೆ ಅಡಚಣೆಯಾಗುತ್ತದೆ ಎಂದು ಧರಣಿ ನಡೆಸಲು ಅನುಮತಿ ನೀಡಲಾಗುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇದೇ ಪತ್ರದಲ್ಲಿ "ಅನುಸಾರಿರುತ್ತಿರುವ, ದರಣಿ, ಸಮೀತಿ, ಕಾಂಪೌಡ್" ಮುಂತಾದ ಸರಳ ಪದಗಳ ಕಾಗುಣಿತ ಅಕ್ಷರಗಳು ಬರದೇ ಇರುವ ತಹಶೀಲ್ದಾರ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಯವರು ದೂರು ನೀಡಿದ್ದರು. ಈ ಸಂಘಟನೆಯವರು ನೀಡಿರುವ ಮನವಿ ಹಾಗೂ ದೂರಿನ ಮೇರೆಗೆ ಆ ಪತ್ರವನ್ನು ಪರಿಶೀಲಿಸಲಾಗಿದೆ. ಅದರಲ್ಲಿ ಅನೇಕ ಪದಗಳು ತಪ್ಪಾಗಿ ನಮೂದಾಗಿವೆ. ಆದರೂ ಸಹಿ ಮಾಡಿ ತಿಳುವಳಿಕೆ ಪತ್ರ ನೀಡಿದ್ದೀರಿ ಎಂದು ಡಿಸಿ ಗರಂ ಆಗಿದ್ದಾರೆ.
ಒಬ್ಬ ಜವಾಬ್ದಾರಿ ತಾಲ್ಲೂಕು ತಹಶೀಲ್ದಾರ್ ಹಾಗೂ ದಂಡಾಧಿಕಾರಿಯಾದ ನೀವು ಪತ್ರಕ್ಕೆ ಸಹಿ ಹಾಕುವ ಮುನ್ನ ಓದದೇ ಇರುವ ಬಗ್ಗೆ ಸಮಜಾಯಿಷಿಯನ್ನು ಈ ಪತ್ರ ತಲುಪಿದ ಒಂದು ವಾರದೊಳಗೆ ಕಚೇರಿಗೆ ಸಲ್ಲಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ತಹಶೀಲ್ದಾರ್ ಅವರು ಕನ್ನಡ ತಪ್ಪು ಪದಗಳ ಬಳಕೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಪ್ಪುಗಳಿದ್ದರೂ ಸಹಿ ಮಾಡಿದ್ದಾರೆ ಎಂದರೆ ಇದು ಬೇಜವಾಬ್ದಾರಿತನ ಎಂದು ಸಾರ್ವಜನಿಕರು ಕೂಡ ಖಂಡಿಸಿದ್ದಾರೆ.












Click it and Unblock the Notifications