ವಿಷಪೂರಿತ ನೀರಿನಲ್ಲಿ ತರಕಾರಿ ಬೆಳೆದು ಬೆಂಗಳೂರಿನಲ್ಲಿ ಮಾರಾಟ!
ಚಿಕ್ಕಬಳ್ಳಾಪುರ ಮಾರ್ಚ್ 12: ಚಿಕ್ಕಬಳ್ಳಾಪುರದ ವಿಷಪೂರಿತ ನೀರಿನಲ್ಲಿ ತರಕಾರಿ ಬೆಳೆದು ಬೆಂಗಳೂರಿನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಖ್ಯಾತ ನೀರಾವರಿ ತಜ್ಞರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಎಚ್ ಎನ್ ವ್ಯಾಲಿ ಕೊಳಚೆ ನೀರಿನ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಧ್ವನಿ ಎತ್ತಲಾಗಿದೆ.
ಖ್ಯಾತ ನೀರಾವರಿ ತಜ್ಞ ಪರಮಶಿವಯ್ಯ ಅವರ 10ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ನೀರಾವರಿಗಾಗಿ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿ, ಎಚ್ ಎನ್ ವ್ಯಾಲಿ ಕೊಳಚೆ ನೀರಿನ ವಿರುದ್ಧ ಮಾತನಾಡಿದ್ದವರು, ಈಗ ಶಾಸಕರಾಗಿದ್ದಾರೆ. ಆದರೆ, ಅವರ ಸರಕಾರದ ಮೊದಲ ಬಜೆಟ್‌ನಲ್ಲಿ ಇದರ ಬಗ್ಗೆ ಏನೂ ಪ್ರಸ್ತಾಪ ಮಾಡಿಲ್ಲ. ಈಗಲೂ ಕಾಲ ಮಿಂಚಿಲ್ಲ. ಈಗಲಾದರೂ ಇದರ ಬಗ್ಗೆ ದನಿ ಎತ್ತಿ ಕ್ಷೇತ್ರದ ಜನರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲಿ ಎಂದು ಆಗ್ರಹಿಸಿದರು.

ಎಚ್.ಎನ್ ವ್ಯಾಲಿ ಯೋಜನೆ ವ್ಯಾಪ್ತಿ ಕೇವಲ ಚಿಕ್ಕಬಳ್ಳಾಪುರ ಕೇತ್ರ ಮಾತ್ರವಲ್ಲ ಎಲ್ಲೆಡೆ ವ್ಯಾಪಿಸಿದೆ. ವಿಷಪೂರಿತ ವ್ಯಾಲಿ ನೀರನ್ನು ಬಳಸಿ ತರಕಾರಿ ಬೆಳೆದು ಬೆಂಗಳೂರಿಗೆ ಕಳಿಸುತ್ತಿದ್ದೇವೆ. ವ್ಯಾಲಿ ನೀರಿನ ಒಂದಂಶದ ವಿಷವನ್ನು ಬೆಂಗಳೂರಿಗೂ ಕಳಿಸುತ್ತಿದ್ದೇವೆ. ಇದಕ್ಕೆಲ್ಲಾ ಕಾರಣ ದೂರದೃಷ್ಟಿಯಿಲ್ಲದ ರಾಜಕೀಯ ನಾಯಕರು. ಇಂತಹ ಅನ್ಯಾಯದ ವಿರುದ್ಧ ನಾವು ಒಗ್ಗಟ್ಟಿನ ಹೋರಾಟ ನಡೆಸಬೇಕಿದೆ ಎಂದು ತಿಳಿಸಿದರು.
ಇದೇ ವೇಳೆ ಹಲವು ನೀರಾವರಿ ಹೋರಾಟಗಾರರು ಬಯಲುಸೀಮೆ ಜಿಲ್ಲೆಗಳ ರೈತರಿಗೆ ಸರಕಾರಗಳಿಂದ ಆಗುತ್ತಿರುವ ಮೋಸವನ್ನು ಮೊದಲು ನಿಲ್ಲಿಸಬೇಕು. ಶುದ್ದ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ವ್ಯಾಲಿ ಯೋಜನೆ ಮೂಲಕ ಹರಿಯುತ್ತಿರುವ ಅರೆಬರೆ ಸಂಸ್ಕರಿತ ನೀರನ್ನು ಮೊದಲು ಮೂರು ಹಂತದ ಶುದ್ದೀಕರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಮಾವೇಶದಲ್ಲಿ ಹೋರಾಟಗಾರರಾದ, ನೀರಾವರಿ ಹರೀಶ್, ಲಕ್ಷ್ಮಯ್ಯ, ಲಕ್ಷ್ಮೀನಾರಾಯಣ್, ಗಂಗಾಧರಪ್ಪ, ನಾರಾಯಣಸ್ವಾಮಿ, ಪ್ರಭಾನಾರಾಯಣಗೌಡ, ನವೀನ್, ಮಹಾಂತೇಶ್, ಮುನಿಯಪ್ಪ, ರವಿಕು ಮಾರ್, ಸುಷ್ಮಾ ಶ್ರೀನಿವಾಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಈ ಬಗ್ಗೆ ಮಾತನಾಡಿದ ಭಗತ್ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ ಬಿ ರೆಡ್ಡಿ, ಎಚ್.ಎನ್ ವ್ಯಾಲಿ ಯೋಜನೆ ಜಾರಿ ವೇಳೆ ಆ ನೀರು ಕುಡಿದ್ರೆ ಬರಬಾರದ ರೋಗ ಬರುತ್ತೆ, ಇದಕ್ಕೆ ನಾವೆಲ್ಲಾ ಹೋರಾಡಬೇಕು ಎಂದು ವಿಡಿಯೊಗಳ ಮೇಲೆ ವಿಡಿಯೊ ಮಾಡಿದ್ದ ಸ್ಥಳೀಯ ಶಾಸಕರು ಈಗ ಮಾಡುತ್ತಿರುವುದೇನು. ಮೊದಲು ಈ ಭಾಗದ ಜನರಿಗೆ ಆಗುತ್ತಿರುವ ಅನ್ಯಾಯವನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲಿ ಎಂದು ಹೇಳಿದರು.
ಪ್ರತಿಭಟನಾ ರ್ಯಾಲಿ :
ನೀರಾವರಿಗಾಗಿ ಸಂಕಲ್ಪ ಸಮಾವೇಶಕ್ಕೂ ಮೊದಲು ಗೌರಿಬಿದ ನೂರು ರಸ್ತೆಯಲ್ಲಿರುವ ಮರಳು ಸಿದ್ದೇಶ್ವರ ಸ್ವಾಮಿ ದೇವಾಲಯದಿಂದ ರಿಯಲನ್ಸ್ ಪೆಟ್ರೋಲ್ ಬಂಕ್ ಬಳಿ ಇರುವ ವೇದಿಕೆವರೆಗೂ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.












Click it and Unblock the Notifications