Chikkaballapur Nature: ಹಸಿರಿನಿಂದ ಕಂಗೊಳಿಸುತ್ತಿರುವ ಮರ, ಗಿಡಗಳು: ಪ್ರಾಣಿ ಪಕ್ಷಿಗಳಿಗೆ ನೀರಿನ ಅಭಾವ ತೀರಿಸಿದ ವರುಣ
ಚಿಕ್ಕಬಳ್ಳಾಪುರ ಮೇ 25: ಚಿಕ್ಕಬಳ್ಳಾಪುರದಲ್ಲಿ ಬಿರು ಬೇಸಿಗೆಯ ಬಿಸಿಲಿನ ಝಳಕ್ಕೆ ಸೊರಗಿದ್ದ ಪ್ರಕೃತಿಗೀಗ ಕಳೆದ 2 ವಾರಗಳಿಂದ ಸುರಿಯುತ್ತಿರುವ ಮಳೆಯಿಂದ ಜೀವಕಳೆ ಬಂದಂತಾಗಿದೆ.
ಗ್ರಾಮೀಣ ಪ್ರದೇಶಗಳು, ಮೀಸಲು ಅರಣ್ಯ ಪ್ರದೇಶ ಹಾಗೂ ರಸ್ತೆ ಬದಿಯ ಮರ, ಗಿಡಗಳು ಚಿಗುರಿನೊಂದಿಗೆ ನಳನಳಿಸುತ್ತ ಪ್ರಕೃತಿಯ ಸೊಬಗು ಹೆಚ್ಚಿಸುವುದರ ಜತೆಗೆ ಸಾಕು ಪ್ರಾಣಿ ಹಾಗೂ ವನ್ಯ ಜೀವಿಗಳಿಗೆ ಜೀವಜಲದ ಅಭಾವ ನೀಗಿಸಿರುವುದು ಪ್ರಕೃತಿ ಹಾಗೂ ಪ್ರಾಣಿ ಪ್ರಿಯರ ಸಂತಸ ಇಮ್ಮಡಿಗೊಳಿಸಿದೆ.

ಕಳೆದ ಮುಂಗಾರಿನಲ್ಲಿ ಮಳೆ ಅಭಾವದಿಂದ ಕೆರೆ ಕುಂಟೆಗಳೆಲ್ಲ ಒಣಗಿ ಹೋಗಿದ್ದವು, ಹಿಂಗಾರು ಮಳೆಯೂ ಕೈಕೊಟ್ಟ ಹಿನ್ನಲೆಯಿಂದ ಹಾಗೂ ಬಿಸಿಲಿನ ತಾಪಮಾನ ಹೆಚ್ಚಳದಿಂದ ಗಿಡ, ಮರಗಳು ಒಣಗುತ್ತಿದ್ದವು.
ಅಲ್ಲದೆ, ಬೇಸಿಗೆ ಸಮಯವಾದ್ದರಿಂದ ಆಕಸ್ಮಿಕ ಬೆಂಕಿಯಿಂದ ಕಾಡಿನ ನಾಶಕ್ಕೂ ಕಾರಣವಾಗುತ್ತಿತ್ತು. ಆದರೆ ಈಗ ಸುರಿದ ಉತ್ತಮ ಮಳೆಯಿಂದ ಗಿಡ, ಮರಗಳಲ್ಲಿ ನವಚೈತನ್ಯ ತುಂಬಿ ನಳ ನಳಿಸುತ್ತಿರುವುದು ಸಾಕ್ಷಿಯಾಗಿದೆ.
ಕುರಿಗಾಹಿಗಳು ಸಂತಸ: ತಾಲೂಕಿನ ಹಳ್ಳಿಗಳಲ್ಲಿ ಕುರಿ, ಎತ್ತು, ಹಸು, ಎಮ್ಮೆ ಸಾಕಣೆದಾರರು ಹೆಚ್ಚಿದ್ದು, ಬೇಸಿಗೆಯಲ್ಲಿ ನೀರಿನ ಅಭಾವ ದಿಂದ ರೋಸಿ ಹೋಗಿದ್ದರು. ಮೇವಿಗಾಗಿ ಬೆಟ್ಟ ಗುಡ್ಡ ಹಾಗೂ ಬಯಲು ಪ್ರದೇಶಗಳತ್ತ ತೆರಳುತ್ತಿದ್ದ ಕುರಿಗಳನ್ನು ನೀರು ಕುಡಿಸುವುದಕ್ಕಾಗಿ ಮತ್ತೆ ವಾಪಸ್ ಊರು ಗಳಿಗೆ ಕರೆದೊಯ್ದು ಫಜೀತಿ ಪಡುತ್ತಿದ್ದರು.
ಆದರೆ ಈಗ ತಾಲೂಕಿನಲ್ಲಿ ಸಮೃದ್ಧವಾಗಿ ಮಳೆ ಸುರಿದಿರುವ ಹಿನ್ನೆಲೆ ಕೆರೆ, ಕಟ್ಟೆಗಳು, ಜಮೀನಿನ ಬದುಗಳು, ರಸ್ತೆ ಪಕ್ಕದ ಗುಂಡಿಗಳಲ್ಲಿ ನೀರು ನಿಂತಿರುವುದರಿಂದ ಜಾನುವಾರುಗಳಿಗೆ ಅನುಕೂಲ ವಾಗಿದೆ. ಕುರಿಗಳ ಜತೆ ಅಲೆದಾಡುವ ಕುರಿಗಾಹಿಗಳು ಮಾತ್ರ ತಮ್ಮ ಜೀವನಾಧಾರವಾಗಿರುವ ಕುರಿ, ಮೇಕೆಗಳಿಗೆ ಕುಡಿಯಲು ನೀರು ಸಿಗುತ್ತಿರುವುದಕ್ಕೆ ಸಂತಸಗೊಂಡಿದ್ದಾರೆ.

ನಾವು 60 ಕುರಿಗಳನ್ನು ಸಾಕಿದ್ದೇವೆ. ನಮ್ಮೂರಿನಲ್ಲಿ ಸಾಕಷ್ಟು ಜನರು ಮೇವಿಗಾಗಿ ಬಯಲು ಪ್ರದೇಶಗಳತ್ತ ಹೋಗುತ್ತೇವೆ, ಕಳೆದ ಹಲವು ತಿಂಗಳಿಂದ ಎಲ್ಲೂ ನೀರು ಸಿಗುತ್ತಿರಲಿಲ್ಲ.
ಹಾಗಾಗಿ, ಮಧ್ಯಾಹ್ನವೇ ಊರಿಗೆ ವಾಪಸ್ ಬಂದು ಕುರಿಗಳಿಗೆ ನೀರು ಕುಡಿಸುತ್ತಿದ್ದೆವು. ಈಗ ಮಳೆಯಾಗಿರುವುದರಿಂದ ಬೆಟ್ಟ ಗುಡ್ಡ ಸೇರಿ ಜಮೀನಿನ ಬದುಗಳಲ್ಲಿ, ಕೆರೆ, ಕಟ್ಟೆಗಳಲ್ಲಿ ನೀರು ನಿಂತಿರುವುದರಿಂದ ಕುರಿಗಳಿಗೆ ಕುಡಿಸಲು ಅನುಕೂಲವಾಗಿದೆ ಎಂದು ಕುರಿಗಾಹಿ ಮನೋಜ್ ಹೇಳಿದರು.
ನಿಟ್ಟುಸಿರು ಬಿಟ್ಟ ವನ್ಯಜೀವಿಗಳು:-
ಗುಡಿಬಂಡೆ ತಾಲೂಕಿನ ಮೀಸಲು ಅರಣ್ಯ ಪ್ರದೇಶದ ವನ್ಯಜೀವಿಗಳಿಗೆ ಪರಿಸರ ಪ್ರೇಮಿಗಳು, ಸಮಾಜ ಸೇವಕರು ಟ್ಯಾಂಕರ್‌ನಿಂದ ಕುಡಿವ ನೀರನ್ನು ಹಳ್ಳಗಳಿಗೆ ತುಂಬಿಸುತ್ತಿದ್ದರು.
ಆದರೆ, ಕಳೆದ ಹಲವು ದಿನಗಳಿಂದ ಸುರಿದ ಮಳೆಯಿಂದ ಚೆಕ್ ಡ್ಯಾಂ, ತೊಟ್ಟಿ, ಕೆರೆ, ಕಟ್ಟೆಗಳಲ್ಲಿ ನೀರು ಸಂಗ್ರಹವಾಗಿರುವ ಹಿನ್ನೆಲೆ ವನ್ಯಜೀವಿಗಳಿಗೆ ಹಾಗೂ ಪಶು ಪಕ್ಷಿಗಳಿಗೆ ಕುಡಿವ ನೀರು ಸಿಗುತ್ತಿರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ.
ಹಲವು ದಿನಗಳಿಂದ ಉತ್ತಮ ಮಳೆಯಾಗಿರುವುದರಿಂದ ಚೆಕ್ ಡ್ಯಾಂ, ತೊಟ್ಟಿಗಳು, ನಾಲಾ ಬಂಡ್‌ಗಳಲ್ಲಿ ಸ್ವಲ್ಪ ಮಟ್ಟಿಗೆ ನೀರು ನಿಂತಿರುವುದರಿಂದ ವನ್ಯಜೀವಿಗಳು ಸೇರಿದಂತೆ ಪ್ರಾಣಿ ಪಕ್ಷಿಗಳಿಗೆ ಕುಡಿವ ನೀರಿನ ಬವಣೆ ಸ್ವಲ್ಪ ಮಟ್ಟಿಗೆ ನೀಗಿದಂತಾಗಿದೆ ಎಂದು ಜಿಲ್ಲಾ ಪರಿಸರ ವೇದಿಕೆಯ ಅಧ್ಯಕ್ಷರಾದ ಗುಂಪು ಮರದ ಆನಂದ್ ಹೇಳಿದರು.












Click it and Unblock the Notifications