Chikkaballapur: ಛೂ ಮಂತರ ಎನ್ನುತ್ತಿರುವ ಮಹಿಳೆಗೆ ಬೆಚ್ಚಿ ಬಿದ್ದ ಚಿಕ್ಕಬಳ್ಳಾಪುರ ಜನ
ಚಿಕ್ಕಬಳ್ಳಾಪುರ ಮಾರ್ಚ್ 19: ರಾತ್ರಿ ನೋಡಿದ ಸ್ಥಳ ಬೆಳಗಾಗುವ ಹೊತ್ತಿಗೆ ಬದಲಾಗಿ ಹೋಗಿರುತ್ತದೆ. ಅಲ್ಲಲ್ಲಿ ಬೀಸಾಡಿದ ಕಡುಗೆಂಪು ಕುಂಕುಮ. ಒಡೆದು ಜಜ್ಜಿ ಬೀಸಾಡಿದ ನಿಂಬೆಹಣ್ಣುಗಳು. ಕಟ್ಟಿಗೆ, ಬಟ್ಟೆಯಿಂದ ಮಾಡಿದ ಮನುಷ್ಯನ ಆಕಾರ. ಕೂದಲು ಮೆಣಸಿನಕಾಯಿ ಹೀಗೆ ಒಂದಾ ಎರಡಾ? ಚಿಕ್ಕಬಳ್ಳಾಪುರದ ಜನ ಈ ದೃಶ್ಯಕ್ಕೆ ಬೆಚ್ಚಿ ಬಿದ್ದಿದ್ದಾರೆ. ರಾತ್ರಿ ಕಳೆದು ಬೆಳಗಾಗುವ ಹೊತ್ತಿದೆ ಕಣ್ಣೆದುರು ಕಾಣುವ ಈ ದೃಶ್ಯಗಳಿಂದಾಗಿ ಬೆಳಗ್ಗೆ ಮನೆ ಬಿಟ್ಟು ಹೊರಬರಲು ಜನ ಹೆದರುತ್ತಿದ್ದಾರೆ. ಅಷ್ಟಕ್ಕೂ ಈ ಮಾಟಮಂತ್ರದ ಭೀತಿ ಹುಟ್ಟಿಸಿದ್ದು ಯಾರು?
ಚಿಕ್ಕಬಳ್ಳಾಪುರ ಒಎಂಬಿ ನಗರದಲ್ಲಿ ನಿತ್ಯ ಮಾಟಮಂತ್ರದ ಭೀತಿ ಜನರಲ್ಲಿ ಹೆಚ್ಚಾಗಿದೆ. ಅಂಗಡಿ ಹಾಗೂ ಮನೆಗಳ ಮುಂದೆ ಮಾಟ ಮಂತ್ರದ ವಸ್ತುಗಳನ್ನು ಇಡಲಾಗುತ್ತಿದ್ದು ಇದರಿಂದ ಜನರಿಗೆ ನಾನಾ ಸಮಸ್ಯೆಗಳು ಉಂಟಾಗುತ್ತಿವೆ ಎನ್ನುವ ಆರೋಪ ಕೇಳಿ ಬಂದಿದೆ. ಮುನಿಲಕ್ಷ್ಮಮ್ಮ ಎಂಬ ಮಹಿಳೆ ಈ ಮಾಟಮಂತ್ರದ ವಸ್ತುಗಳನ್ನು ಇಟ್ಟು ಜನರಲ್ಲಿ ಆತಂಕ ಹುಟ್ಟಿಸುತ್ತಿದ್ದಾಳೆ. ಅಲ್ಲದೆ ಆಕೆಯ ಈ ಮಾಟಮಂತ್ರದಿಂದ ಜನರಿಗೆ ನಾನಾ ಸಮಸ್ಯೆಗಳು ಕಾಡುತ್ತಿವೆ ಎಂದು ಆರೋಪಿಸಲಾಗುತ್ತಿದೆ.

ವೃತ್ತಿಯಲ್ಲಿ ಟೈಲರ್ ಆಗಿರುವ ಶಾಂತಕುಮಾರ್ ಅವರು ತಮ್ಮ ಅಂಗಡಿ ಮುಂದೆ ನಿತ್ಯ ಒಂದಿಲ್ಲಾ ಒಂದು ಮಾಟ ಮಂತ್ರದ ವಸ್ತುಗಳನ್ನು ನೋಡುತ್ತಿದ್ದರು. ಇದನ್ನು ಯಾರು ಮಾಡುತ್ತಿದ್ದಾರೆ ಅನ್ನೋದು ಅವರಿಗೆ ತಿಳಿದಿರಲಿಲ್ಲ. ಇದರ ಹಿಂದೆ ಯಾರಿದ್ದಾರೆ ಎಂದು ತಿಳಿಯಲು ಶಾಂತಕುಮಾರ್ ಅವರು ತಮ್ಮ ಟೈಲರ್ ಅಂಗಡಿಗೆ ಸಿಸಿಟಿವಿ ಕ್ಯಾಮರಾವನ್ನು ಅಳವಡಿಸಿದರು.
ಹೀಗೆ ಕ್ಯಾಮರಾ ಅಳವಡಿಸಿ ಎರಡೇ ದಿನಕ್ಕೆ ಈ ಕೃತ್ಯ ಹೆಸಗಿರುವುದು ಮುನಿಲಕ್ಷ್ಮಮ್ಮ ಎಂಬುದು ಗೊತ್ತಾಗಿದೆ. ಶಾಂತಕುಮಾರ್ ಈ ದೃಶ್ಯವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಅಷ್ಟಕ್ಕೂ ಈ ಮಹಿಳೆ ತಮ್ಮ ಅಂಗಡಿಯ ಎದುರು ಮನೆಯಲ್ಲಿ ವಾಸವಾಗಿದ್ದಾಳೆ. ಈಕೆಯನ್ನು ಮಾತನಾಡಿಸಲು ಕೂಡ ಶಾಂತಕುಮಾರ್ ಅವರಿಗೆ ಭಯವಾಗಿದೆ. ಯಾಕೆಂದರೆ ಸಿಸಿಟಿವಿ ಅಳವಡಿಸಿ ಎರಡು ದಿನವಾದ ಬಳಿಕ ಅವರು ಕುಟುಂಬದಲ್ಲಿ ಒಬ್ಬರಾದ ಮೇಲ್ಲೊಬ್ಬರಂತೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರಂತೆ.
ಮುನಿಲಕ್ಷ್ಮಮ್ಮ ಕೇವಲ ಶಾಂತಕುಮಾರ್ ಅಂಗಡಿಗೆ ಮಾತ್ರ ಮಾಟಮಂತ್ರ ಮಾಡಿಸಿಲ್ಲ. ಜಯಲಕ್ಷ್ಮೀ ಎಂಬುವವರ ಮೇಲೂ ಈಕೆ ಮಾಟಮಂತ್ರ ಮಾಡಿಸಿದ್ದಾಳಂತೆ. ಈಕೆಯ ಕೃತ್ಯಕ್ಕೆ ಜಯಲಕ್ಷ್ಮೀ ಪತಿ ಸಾವನ್ನಪ್ಪಿದ್ದಾರಂತೆ. ವೈದ್ಯರೂ ಯಾವುದೇ ಕಾಯಿಲೆ ಇಲ್ಲ ಎಂದು ಹೇಳಿದರೂ ಕೂಡ ಜಯಲಕ್ಷ್ಮೀ ಪತಿ ಅಸುನೀಗಿದ್ದಾರಂತೆ. ಇದಕ್ಕೆಲ್ಲಾ ಮಾಟಮಂತ್ರವೇ ಕಾರಣ ಎಂದು ಆರೋಪಿಸಲಾಗಿದೆ.
ಇದರಿಂದ ಮುನಿಲಕ್ಷ್ಮಮ್ಮ ಮಾಟಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಈಕೆಯಿಂದ ಕಾಪಾಡುವಂತೆ ಸ್ಥಳೀಯರು ಪೊಲೀಸರ ಮೊರೆ ಹೋಗಿದ್ದಾರೆ. ಸದ್ಯ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಲಾಗಿದೆ. ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೆಂದು ಕಾದು ನೋಡಬೇಕಿದೆ.












Click it and Unblock the Notifications