ಚಿಕ್ಕಬಳ್ಳಾಪುರ: ಕೆರೆಗಳಲ್ಲಿ ನೀರು ಖಾಲಿ, ಮೀನು ಕೃಷಿಗೆ ಬರದ ಹೊಡೆತ
ಚಿಕ್ಕಬಳ್ಳಾಪುರ, ಅಕ್ಟೋಬರ್ 31: ರಾಜ್ಯಾದ್ಯಂತ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿರುವುದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದು, ಕೆರೆಗಳಲ್ಲಿ ನೀರು ಖಾಲಿಯಾದ ಕಾರಣ ಮೀನುಗಾರಿಕೆ ಮಾಡಲು ಹರಾಜಿನಲ್ಲಿ ಕರೆಗಳನ್ನು ಕೊಂಡಿರುವವರು ಆತಂಕಕ್ಕೆ ಸಿಲುಕಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಹ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಬೆಳೆ, ಮೇವು ಸಮಸ್ಯೆ ನಡುವೆ ಕೆರೆಗಳಲ್ಲಿ ಮೀನುಗಾರಿಕೆಗೂ ನಷ್ಟದ ಆತಂಕ ಕಾಡುತ್ತಿದೆ. ಜಿಲ್ಲೆಯಲ್ಲಿ ಮಳೆಯ ತೀವ್ರ ಅಭಾವದ ಹಿನ್ನೆಲೆಯಲ್ಲಿ ಬಹುತೇಕ ಕೆರೆ, ಜಲಾಶಯಗಳು ಸೇರಿ ಜಲಮೂಲಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿರುವ ಸುಮಾರು 80ಕ್ಕೂ ಹೆಚ್ಚು ಕರೆಗಳು ಕಳೆದ ವರ್ಷ ತುಂಬಿದ್ದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಹಾಗೂ ಗ್ರಾಪಂ ವ್ಯಾಪ್ತಿಗೆ ಒಳಪಡುವ ಕೆಲವು ಕೆರೆಗಳಲ್ಲಿ ಮೀನು ಸಾಕಾಣಿಕೆಗೆ ಕಾನೂನಿನ ಪ್ರಕಾರ ಹರಾಜು ಪ್ರಕ್ರಿಯೆ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಅನೇಕ ಮೀನು ಸಾಕಾಣಿಕೆದಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ, ಲಕ್ಷ ಲಕ್ಷ ಠೇವಣಿ ಇಟ್ಟು ಕೆರೆಗಳನ್ನು 3 ವರ್ಷಗಳ ಕಾಲಾವಧಿಗೆ ಪಡೆದು ಮೀನಿನ ಮರಿಗಳನ್ನು ಬಿಟ್ಟು ಪೋಷಿಸಿದ್ದರು, ಆದರೆ, ಹರಾಜು ಪಡೆದ ಒಂದೇ ಒಂದು ವರ್ಷಕ್ಕೆ ಕೆರೆಗಳಲ್ಲಿ ನೀರು ಖಾಲಿಯಾಗಿದ್ದು, ನಷ್ಟ ಅನುಭವಿಸುವಂತಾಗಿದೆ ಎಂದು ಮೀನು ಸಾಕಾಣಿಕೆಗಾರರು ಅತಂಕ ವ್ಯಕ್ತಪಡಿಸುತ್ತಿದ್ದಾರೆ.
ಆಗಾಗ ಬರ , ದಿನೇದಿನೆ ಅಂತರ್ಜಲಮಟ್ಟ ಕುಸಿತ ಕಾಣುತ್ತಿರುವ ಈ ಭಾಗದಲ್ಲಿ ಕೆರೆಗಳು ಪ್ರಮುಖ ನೀರಾವರಿ ಮೂಲ. ಇವುಗಳಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣದಿಂದ ಕೊಳವೆ ಬಾವಿಗಳ ಸಫಲ ಮತ್ತು ವೈಫಲ್ಯ ನಿರ್ಧಾರವಾಗುತ್ತದೆ. ಹಾಗೆಯೇ ಮೀನುಗಾರಿಕೆಯಲ್ಲಿ ಲಾಭ-ನಷ್ಟ ಕೆರೆಗಳನ್ನೇ ಹೆಚ್ಚಿಗೆ ಅವಲಂಬಿಸಿದೆ.

ಅದೇ ರೀತಿ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತಿಪ್ಪಗಾನಹಳ್ಳಿಯಲ್ಲಿ ಮೀನುಮರಿ, ಉತ್ಪಾದನಾ ಕೇಂದ್ರ ಚಿಂತಾಮಣಿಯಲ್ಲಿ ಮೀನುಮರಿ. ನರ್ಸರಿ ಸೇರಿ 2 ಮೀನುಮರಿ ಕೇಂದ್ರಗಳಿವೆ. ಇಲ್ಲಿ ಇಲಾಖೆಯಿಂದಲೇ ಮೀನುಮರಿ ಉತ್ಪಾದನೆ ಮತ್ತು ಪಾಲನೆಯನ್ನು ನಿರ್ವಹಿಸುತ್ತಿದ್ದು, ಉತ್ತಮ ಕಳೆ ಮತ್ತು ಗಾತ್ತದ ಮೀನುಮರಿಗಳನ್ನು ಪೂರೈಸಲಾಗುತ್ತಿದೆ.
ಕಟ್ಟಾ, ರೋಹು, ಮೃಗಾಲ್, ಸಾಮಾನ್ಯ ಗೆಂಡೆ, ಬೆಳ್ಳಿಗೆಂಡೆ ಮತ್ತು ಹುಲ್ಲು ಗಂಡ ಮೀನುಮರಿಗಳನ್ನು ವೈಜ್ಞಾನಿಕವಾಗಿ ಅಧುನಿಕತ ತಾಂತ್ರಿಕತೆ ಅಳವಡಿಸಿಕೊಂಡು ಬಿತ್ತನೆ ಮಾಡುವ ಮೂಲಕ ಮೀನು ಉತ್ಪಾದನೆ ಹೆಚ್ಚಿಸುವ ಗುರಿ ಹೊಂಡಲಾಗಿದೆ. ಇನ್ನು ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ 80 ಲಕ್ಷದಿಂದ 1 ಕೋಟಿಯವರೆಗೂ ಮೀನು ಮರಿ ಬಿತ್ತನೆಯಾಗುತ್ತದೆ. ಇದು ಮಳೆ ಮತ್ತು ಜಲಮೂಲಗಳಲ್ಲಿನ ಸಮೃದ್ಧಿ ನೀರನ್ನಾದರಿಸಿ ಮುಂದಿನ ಸಾಧನೆ ಕಂಡು ಬರುತ್ತದೆ.
ಜಿಲ್ಲೆಯಲ್ಲಿನ ಕೆರೆಗಳ ಪೈಕಿ ಸೂಕ್ತ ಮಾನದಂಡದಲ್ಲಿ ಮೀನುಗಾರಿಕೆಗೆ ಕೆರೆಗಳ ಆಯ್ಕೆ ನಿಯಮಾನುಸಾರ ಹರಾಜು, ಮೀನು ಮರಿ ಬಿತ್ತನೆ ಸೇರಿ ವಿವಿಧ ಚಟುವಟಿಕೆಯು ಬಿರುಸಿನಿಂದ ನಡೆಯಲಿದ್ದು, ಪ್ರಸಕ್ತ ಸಾಲಿನಲ್ಲಿ ಮೀನು ಬಿತ್ತನೆಗೆ ಅನುಗುಣವಾಗಿ ಲಾಭ ಸಿಗುತ್ತಿಲ್ಲ ಎನ್ನಲಾಗುತ್ತಿದೆ.

ಮಳೆಯ ಅಭಾವ ತೀವ್ರ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಾರ್ಷಿಕ 736 ಮಿ.ಮೀ ವಾಡಿಕೆ ಮಳೆಗೆ ಕೇವಲ 164 ಮಿ.ಮೀ. ಮಳೆ ಯಾಗಿದೆ. ಈ ಅಂಕಿ ಅಂಶಗಳು ತೀವ್ರತರದ ಮಳೆ ಕೊರತೆಯನ್ನು ಬಿಂಬಿಸುತ್ತಿವೆ. ಇದರಿಂದ 01 ಭಾಗದ ಎಲ್ಲ 6 ತಾಲೂಕುಗಳನ್ನು ತೀವ್ರ ಬರ ಪೀಡಿತ ಪ್ರದೇಶಗಳೆಂಬುದಾಗಿ ರಾಜ್ಯ ಸರ್ಕಾರವು ಸಹ ಘೋಷಿಸಿದೆ.
ಕಳೆದ ಎರಡು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ನಿರೀಕ್ಷೆ ಮೀರಿ ಮಳೆಯಾಗಿ ಅತಿವೃಷ್ಟಿ ಸಮಸ್ಯೆ ಕಾಡಿತ್ತು. ಆಗ ಕೆರೆಗಳು ತಿಂಗಳು ಗಟ್ಟಲೆ ಕೋಡಿ ಹರಿದು ಬಹುತೇಕ ಜಲಮೂಲಗಳು ಸಮೃದ್ಧವಾಗಿ, ಕೊಳವೆ ಬಾವಿಗಳಲ್ಲಿ ನೀರು ಉಕ್ಕಿ ಹರಿದು ಎಲ್ಲಿ ನೋಡಿದರು ನೀರಿನಿಂದ ಗಮನ ಸೆಳೆಯುತ್ತಿದ್ದವು. ಇದೇ ವೇಳೆ ಮೀನುಗಾರಿಕೆ ಚಟುವಟಿಕೆಗಳು ಸಹ ಬಿರುಸುಗೊಂಡಿತ್ತು. ಆದರೆ, ಈಗ ಮಳೆಯ ಅಭಾವದಿಂದ ಜಿಲ್ಲೆಯಲ್ಲಿ ಶೇ.75 ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ, ಮೀನುಗಳನ್ನು ಬೆಳೆಸುವಲ್ಲಿ ಹಿನ್ನಡೆ ಕಂಡು ಬಂದಿದೆ.
ನಿರುದ್ಯೋಗ ಆತಂಕ
ಮೀನು ಹಿಡಿಯುವವರಿಗೆ ಕೆಲಸ ತಪ್ಪುವ ಆತಂಕ ಶುರುವಾಗಿದೆ. ಕೆರೆಗಳಲ್ಲಿ ನೀರು ಇದ್ದರೆ, ಮಾಲೀಕರು ಕೆರೆಗೆ ಮೀನು ಬಿಡುತ್ತಾರೆ. ಮೀನು ಬಿಟ್ಟರೆ ನಮಗೆ ಕೆರೆ ನೋಡಿಕೊಳ್ಳುವುದರ ಜೊತೆಗೆ ಮೀನುಗಳನ್ನು ಹಿಡಿಯುವ ಕೆಲಸ ಸಿಗುತ್ತಿತ್ತು. ಆದರೆ, ಈಗ ಮಳೆ ಇಲ್ಲದೇ ಕೆರೆಗಳು ಬತ್ತಿಹೋಗಿದ್ದು, ನಮಗೆ ಕೆಲಸವೂ ಇಲ್ಲದಂತಗುತ್ತದೆ ಮುಂದೆ ನಮ್ಮ ಕುಟುಂಬ ನಿರ್ವಹಣೆ ಹೇಗೆ ಎಂಬ ಆತಂಕ ಶುರುವಾಗಿದೆ ಎಂಬುದು ಮೀನುಗಾರರ ಭಯಕ್ಕೆ ಕಾರಣವಾಗಿದೆ.
ಕಳೆದ ವರ್ಷ ಮಳೆ ಹೆಚ್ಚಾಗಿ ಕೆರೆ ಹರಿಯುತ್ತಿದ್ದು, ಕೆರೆಗೆ ಬಿಟ್ಟಿದ ಮೀನು ಬೇರೆ ಕೆರೆಗಳಿಗೆ ಹೋಗಿ ನಷ್ಟವಾಗಿತ್ತು. ಈಗ ಮಳೆ ನಿಂತ ಮೇಲೆ ಮತ್ತೆ ಲಕ್ಷಾಂತರ ರೂಪಾಯಿ ವ್ಯಯ ಮಾಡಿ ಮರಿಗಳನ್ನು ಬಿಡಲಾಗಿದೆ. ಆದರೆ, ಮಳೆ ಇಲ್ಲದೇ ಕೆರೆಗಳು ಬತ್ತಿ ಹೋಗಿ ಮತ್ತೊಮ್ಮೆ ನಷ್ಟ ಉಂಟಾಗಿದೆ. ಅಧಿಕಾರಿಗಳು ನಮಗೆ ಆಗಿರುವ ನಷ್ಟ ಪರಿಹಾರಕ್ಕಾಗಿ ಒಂದು ವರ್ಷ ಹರಾಜು ಪ್ರಕ್ರಿಯೆ ಮುಂದೂಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಉತ್ತಮ ಮಳೆ ಆಗುವ ನಿರೀಕ್ಷೆಯಿಂದ ಗ್ರಾಪಂ ವ್ಯಾಪ್ತಿಯ ಎರಡು ಕೆರೆಗಳನ್ನು ಹರಾಜಿನಲ್ಲಿ ಪಡೆದುಕೊಂಡು ಮರಿಗಳನ್ನು ಬಿಟ್ಟಿದ್ದೆವು. ಮೊದಲ ಬಾರಿ ಹೆಚ್ಚು ಮಳೆಯಾಗಿ ಮರಿಗಳೆಲ್ಲ ಕೊಡಿ ಹರಿದಾಗ ಬೇರೆಕಡೆ ಹೊರಟು ಹೋಗಿ ನಷ್ಟವಾಯಿತು. ಆದರೆ ಈ ಮಳೆಗಾಲದಲ್ಲಿ ವ್ಯತಿರಿಕ್ತ ಎಂಬಂತೆ ಈ ಬಾರಿ ಮಳೆಯಾಗಾದ ಪರಿಣಾಮ ಕೆರೆಗಳಲ್ಲಿ ನೀರು ಖಾಲಿಯಾಗಿ ನಷ್ಟ ಅನುಭವಿಸುವಂತಾಗಿದೆ.
ಹೀಗಾಗಿ ಎರಡು ಬಾರಿ ನಷ್ಟ ಆಗಿದ್ದು, ಸಾಲದ ಶೂಲಕ್ಕೆ ಸಿಲುಕಿದ್ದೇನೆ, ಆಧಿಕಾರಿಗಳು ನಮ್ಮ ನಷ್ಟ ಭರಿಸಲು ಇನ್ನು ಹೆಚ್ಚುವರಿಯಾಗಿ ಒಂದು ವರ್ಷದ ಮಟ್ಟಿಗೆ ನಮಗೆ ಕೆರೆಯಲ್ಲಿ ಮೀನು ಸಾಕಲು ಅವಕಾಶ ಮಾಡಿಕೊಡಬೇಕೆಂದು ಮೀನು ಸಾಕಾಣಿಕೆ ಮಾಡಲು ಕೆರೆ ಹರಾಜು ಮಾಡಿಕೊಂಡಿರುವ ನಿಚ್ಚನಬಂಡಹಳ್ಳಿ ಎನ್. ವಿ. ಗಂಗಾಧರ್ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಮೀನುಗಾರಿಕೆ ಕೆರೆಗಳು ಎಷ್ಟು..?
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಕೆರೆಗಳು (40 ಹೆಕ್ಟೇರ್‌ಗಿಂತ ಕಡಿಮೆ ಅಚ್ಚುಕಟ್ಟು ಕೆರೆಗಳು) 1341 ಕೆರೆಗಳಿದ್ದು, ಜಲ ವಿಸ್ತಿರ್ಣ 73,447.36 ಹೇಕ್ಟರ್ ಪ್ರದೇಶದಲ್ಲಿ ಮೀನುಗಾರಿಕೆ ಮಾಡಲಾಗುತ್ತಿದೆ.
ಅದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲೆಯ ಮೀನುಗಾರಿಕೆ ಇಲಾಖೆಯ ವ್ಯಾಪ್ತಿಗೆ ಬರುವ ಅಂದರೆ 40 ಹೆಕ್ಟೇರ್‌ಗಿಂತ ಹೆಚ್ಚು ಅಚ್ಚುಕಟ್ಟು ಪ್ರದೇಶ ಹೊಂದಿರುವ ಸುಮಾರು 214 ಕೆರೆಗಳಲ್ಲಿ ಸುಮಾರು 11,498.23 ಹೆಕ್ಟರ್ ಪ್ರದೇಶದಲ್ಲಿ ಮೀನುಗಾರಿಕೆ ಮಾಡಲಾಗುತ್ತಿದೆ.
ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಒಟ್ಟು ಎಲ್ಲಾ ರೀತಿಯ ಸಣ್ಣ, ಅತೀ ಸಣ್ಣ, ಮಧ್ಯಮ ಹಾಗೂ ದೊಡ್ಡ ಪ್ರಮಾಣದ ಕೆರೆಗಳು ಸೇರಿದಂತೆ ಒಟ್ಟು 1,555 ಕೆರೆಗಳಲ್ಲಿ ಸುಮಾರು 84,945.39 ಹೆ.ಪ್ರದೇಶದಲ್ಲಿ ಮೀನುಗಾರಿಕೆಗೆ ಹರಾಜು ಪ್ರಕ್ರಿಯೆಯಲ್ಲಿ ಅನುಮತಿ ನೀಡಲಾಗಿದ್ದು, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಹರಾಜು ಪ್ರಕ್ರಿಯೆಯಲ್ಲಿ ಅನುಮತಿ ಪಡೆದಿರುವ ಮಾಲೀಕರು ಹಾಗೂ ಮೀನುಗಾರಿಕೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುವವರಲ್ಲಿ ಆತಂಕ ಶುರುವಾಗಿದೆ.












Click it and Unblock the Notifications