ಚಿಕ್ಕಬಳ್ಳಾಪುರ-ಪುಟ್ಟಪರ್ತಿ ಹೊಸ ರೈಲು ಮಾರ್ಗ: ಅಪ್‌ಡೇಟ್ ಕೊಟ್ಟ ಸಚಿವರು
ಚಿಕ್ಕಬಳ್ಳಾಪುರ, ಡಿಸೆಂಬರ್ 02: ಚಿಕ್ಕಬಳ್ಳಾಪುರ-ಪುಟ್ಟಪರ್ತಿ ನಡುವಿನ ನೇರ ರೈಲು ಮಾರ್ಗ ಯೋಜನೆ ಕುರಿತು ಮತ್ತೆ ಚರ್ಚೆಗಳು ಆರಂಭವಾಗಿದೆ. ಈ ಮಾರ್ಗದಿಂದ ಬೆಂಗಳೂರು ನಗರಕ್ಕೂ ಅನುಕೂಲವಾಗಲಿದ್ದು, ಯಲಹಂಕ-ಚಿಕ್ಕಬಳ್ಳಾಪುರ ಮಾರ್ಗವನ್ನು ಪುಟ್ಟಪರ್ತಿಗೆ ಸಂಪರ್ಕಿಸಬೇಕು ಎಂದು ಹಲವಾರು ವರ್ಷಗಳಿಂದ ಬೇಡಿಕೆ ಇಡಲಾಗುತ್ತಿದೆ. ಆದರೆ ರೈಲ್ವೆ ಇಲಾಖೆ ಈ ಕುರಿತು ಯಾವುದೇ ತೀರ್ಮಾನವನ್ನು ಇನ್ನೂ ಸಹ ಕೈಗೊಂಡಿಲ್ಲ.
ಲೋಕಸಭೆ ಕಲಾಪದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಚಿಕ್ಕಬಳ್ಳಾಪುರ-ಪುಟ್ಟಪರ್ತಿ ನಡುವಿನ ನೇರ ರೈಲು ಮಾರ್ಗದ ಕುರಿತು ಮಾತನಾಡಿದ್ದಾರೆ. "ಚಿಕ್ಕಬಳ್ಳಾಪುರ-ಪುಟ್ಟಪರ್ತಿ ನಡುವೆ ನೇರ ರೈಲು ಮಾರ್ಗ ನಿರ್ಮಾಣ ಮಾಡುವ ಪ್ರಸ್ತಾವನೆ ಸದ್ಯಕ್ಕೆ ಇಲಾಖೆ ಮುಂದಿಲ್ಲ" ಎಂದು ಸ್ಪಷ್ಟಪಡಿಸಿದರು.

ಸದ್ಯ ಧರ್ಮಾವರಂ-ಪುಟ್ಟಪರ್ತಿ-ಪೆನುಕೊಂಡ, ಧರ್ಮಾವರಂ-ಮಕ್ಕಾಜಿಪಲ್ಲಿ-ಪೆನುಕೊಂಡ ರೈಲು ಮಾರ್ಗದ ಮೂಲಕ ಪುಟ್ಟಪರ್ತಿಗೆ ರೈಲು ಸಂಪರ್ಕವಿದೆ. ಇದು ಯಲಹಂಕ-ಬೆಂಗಳೂರು ಮಾರ್ಗಕ್ಕೂ ಸಂಪರ್ಕಿಸುತ್ತದೆ.
ಹಲವಾರು ವರ್ಷಗಳಿಂದ ಯಲಹಂಕ-ಚಿಕ್ಕಬಳ್ಳಾಪುರ ಮಾರ್ಗವನ್ನು ಪುಟ್ಟಪರ್ತಿಗೆ ಸಂಪರ್ಕಿಸಬೇಕು ಎಂದು ಬೇಡಿಕೆ ಇಡಲಾಗಿದೆ. ಇದರಿಂದಾಗಿ ಯಲಹಂಕ-ದೊಡ್ಡಬಳ್ಳಾಪುರ-ಪೆನುಕೊಂಡ-ಧರ್ಮಾವರಂ ಮಾರ್ಗಕ್ಕೆ ಪರ್ಯಾಯ ಮಾರ್ಗ ಸಿಗಲಿದೆ ಎಂದು ಒತ್ತಾಯಿಸಲಾಗುತ್ತಿದೆ.
ಸಮೀಕ್ಷೆಯು ನಡೆದಿದೆ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ, "ಪ್ರಸ್ತಾವಿತ ಚಿಕ್ಕಬಳ್ಳಾಪುರ-ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ (ಪುಟ್ಟಪರ್ತಿ) 103 ಕಿ. ಮೀ. ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ನಡೆದಿದೆ. ಆದರೆ ಕಡಿಮೆ ಸಂಚಾರ ದಟ್ಟಣೆಯ ಕಾರಣ ಸದ್ಯಕ್ಕೆ ಮಾರ್ಗ ನಿರ್ಮಾಣದ ಯೋಜನೆ ಇಲ್ಲ" ಎಂದು ಹೇಳಿದ್ದಾರೆ.
ಇದಕ್ಕೆ ಪೂರಕವಾಗಿ ಸಚಿವರು, "ಚಿಕ್ಕಬಳ್ಳಾಪುರ-ಗೌರಿಬಿದನೂರು 44 ಕಿ. ಮೀ. ರೈಲು ಮಾರ್ಗ ನಿರ್ಮಾಣಕ್ಕೆ ಕಾರ್ಯಸಾಧ್ಯತಾ ವರದಿಯನ್ನು ತಯಾರು ಮಾಡಲು ಅನುಮತಿ ನೀಡಲಾಗಿದೆ. ಆದರೆ ಯೋಜನೆಗೆ ಖರ್ಚು ಮತ್ತು ವೆಚ್ಚ, ಸಂಪರ್ಕದಿಂದ ಆಗುವ ಆರ್ಥಿಕ ಲಾಭಗಳು, ಪರಿಸರದ ಮೇಲಾಗುವ ಪರಿಣಾಮಗಳನ್ನು ಗಮನಿಸಿ ಒಪ್ಪಿಗೆ ನೀಡಲಾಗುತ್ತದೆ" ಎಂದು ಸಚಿವರು ಸ್ಪಷ್ಟಪಡಿಸಿದರು.
ಕರ್ನಾಟಕದಲ್ಲಿ ರೈಲು ಯೋಜನೆಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. 2021 ರಿಂದ 2024ರ ತನಕ 56 ಯೋಜನೆಗಳ ಸಮೀಕ್ಷೆಗೆ ಒಪ್ಪಿಗೆ ನೀಡಲಾಗಿದೆ. ಇವುಗಳಲ್ಲಿ 19 ಹೊಸ ರೈಲು ಮಾರ್ಗಗಳು, 37 ದ್ವಿಪಥ ಯೋಜನೆಗಳು ಸೇರಿದ್ದು, ಇವುಗಳು ಸುಮಾರು 6,159 ಕಿ. ಮೀ. ಒಳಗೊಂಡಿದೆ.
ಕೆಲವು ದಿನಗಳ ಹಿಂದೆ ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಕ್ಷೇತ್ರದ ರೈಲು ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. 60ಕ್ಕೂ ಅಧಿಕ ರೈಲು ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದರು. ಸಭೆಯಲ್ಲಿ ಚಿಕ್ಕಬಳ್ಳಾಪುರ-ಪುಟ್ಟಪರ್ತಿ ಯೋಜನೆ ಬಗ್ಗೆಯೂ ಚರ್ಚೆ ನಡೆದಿದೆ.
2023ರಲ್ಲಿಯೂ ಚಿಕ್ಕಬಳ್ಳಾಪುರ-ಬಾಗೇಪಲ್ಲಿ ಮಾರ್ಗವಾಗಿ ಆಂಧ್ರ ಪ್ರದೇಶದ ಗೋರಂಟ್ಲ, ಪುಟ್ಟಪರ್ತಿಗೆ ರೈಲು ಸಂಚಾರ ಆರಂಭಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಕರ್ನಾಟಕ-ಆಂಧ್ರ ಪ್ರದೇಶ ಗಡಿಭಾಗದ ರೈತರು ಈ ಕುರಿತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.
ಈ ರೈಲು ಮಾರ್ಗ ನಿರ್ಮಾಣಗೊಂಡರೆ ಬೆಂಗಳೂರು ನಗರಕ್ಕೆ ಸಹ ರೈಲು ಸಂಪರ್ಕಕ್ಕೆ ಸಹಾಯಕವಾಗಲಿದೆ ಎಂದು ಹೇಳಿದ್ದರು. ಎಂ. ವೀರಪ್ಪ ಮೊಯ್ಲಿ ಸಂಸದರಾಗಿದ್ದಾಗ ಈ ಮಾರ್ಗ ನಿರ್ಮಾಣಕ್ಕೆ ಅಂದಿನ ರೈಲ್ವೆ ಸಚಿವರ ಮೇಲೆ ಒತ್ತಡವನ್ನು ಹಾಕಿ, ಸಮೀಕ್ಷೆಗೆ ಅನುದಾನ ಮಂಜೂರು ಮಾಡಿಸಿದ್ದರು.












Click it and Unblock the Notifications