ಅಂತಿಮಗೊಳ್ಳದ ಅಭ್ಯರ್ಥಿಗಳ ಆಯ್ಕೆ: ಬಾಗೇಪಲ್ಲಿ ಕ್ಷೇತ್ರ ರಾಜಕೀಯ ರಾಜಧಾನಿಗೆ ಶಿಫ್ಟ್
ಚಿಕ್ಕಬಳ್ಳಾಪುರ, ಏಪ್ರಿಲ್ 03: ವಿಧಾನಸಭಾ ಕ್ಷೇತ್ರದ ಚುನಾವಣೆಗೆ ದಿನಾಂಕವನ್ನು ಚುನಾವಣಾ ಆಯೋಗ ಮುಹೂರ್ತ ನಿಗದಿ ಮಾಡಿದ್ದರೂ, ರಾಜಕೀಯ ಚಟುವಟಿಕೆಗಳು ಚುರುಕುಗೊಂಡಂತೆ ಕಾಣುತ್ತಿಲ್ಲ. ಕೆಲ ಪಕ್ಷಗಳಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳದಿರುವುದು, ಬಂಡಾಯದ ಬಿಸಿ ತಟ್ಟುವ ಗೊಂದಲ, ಹೀಗೆ ಅನೇಕ ಕಾರಣಗಳಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ.
ಚುನಾವಣೆ ಆಯೋಗವು ಮೇ 10ರಂದು ವಿಧಾನಸಭೆ ಚುನಾವಣೆಗೆ ಮತದಾನ ನಡೆಸುವುದಾಗಿ ಘೋಷಿಸಿದೆ. ಚುನಾವಣೆ ದಿನಾಂಕ ಪ್ರಕಟಿಸಿದ್ದರೂ ಜೆಡಿಎಸ್, ಸಿಪಿಐಎಂ ಮತ್ತು ಆಮ್ ಆದ್ಮಿ ಪಕ್ಷ ಹೊರತು ಪಡಿಸಿ ಉಳಿದ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿರುವುದರಿಂದ ರಾಜಕೀಯ ಕಣ ರಂಗೇರುತ್ತಿಲ್ಲ. ಕಾರ್ಯಕರ್ತರು ಸಹ ಅಭ್ಯರ್ಥಿ ಯಾರಾಗುತ್ತಾರೆ ಎಂದು ಕಾತುರದಿಂದ ಕಾಯುವಂತಾಗಿದೆ.

ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಕಳೆದ ಡಿಸೆಂಬರ್‌ನಿಂದ ಮಾರ್ಚ್ ಅಂತ್ಯದೊಳಗೆ ನಾನಾ ರೀತಿಯ ರಾಜಕೀಯ ಪ್ರಚಾರದ ಯಾತ್ರೆಗಳನ್ನು ನಡೆಸಿ, ಒಂದು ಸುತ್ತಿನ ಪ್ರಚಾರ ನಡೆಸಿವೆ. ಆದರೆ, ಚುನಾವಣೆಗೂ ಮೊದಲೇ ಬಿಜೆಪಿ ಪಕ್ಷದಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಅನೇಕರು ಆಕಾಂಕ್ಷಿಗಳಿರುವುದು ಬಿಜೆಪಿ ಪಕ್ಷಕ್ಕೆ ಅಭ್ಯರ್ಥಿಯ ಆಯ್ಕೆ ಕಗ್ಗಂಟಾಗಿದೆ.
ಕ್ಷೇತ್ರಗಳಲ್ಲಿ ಮೂರು ಜನ ಆಕಾಂಕ್ಷಿಗಳನ್ನು ಹೊಂದಿರುವ ಬಿಜೆಪಿ ಪಕ್ಷದಲ್ಲಿ ಟಿಕೆಟ್ ನೀಡಿಕೆ ಬಹುದೊಡ್ಡ ಸವಾಲಾಗಿದೆ ಇದರಿಂದ ಪಕ್ಷವು ಇಕ್ಕಟ್ಟಿಗೆ ಸಿಲುಕಿದಂತಿದೆ. ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆಗೆ ಪಕ್ಷ ಮುಂದಾಗಿದೆ.
ಕಾಂಗ್ರೆಸ್ ಪಕ್ಷದ ಟಿಕೆಟ್ ಹಾಲಿ ಶಾಸಕರಿಗೆ ಅಂತಿಮ ಆಗಿದ್ದರೂ ಮಾಜಿ ಶಾಸಕ ವೈ.ಸಂಪಂಗಿ ಕ್ಷೇತ್ರದಲ್ಲಿ ಅಭಿಮಾನಿಗಳೊಂದಿಗೆ ಹಲವು ಸುತ್ತಿನ ಸಮಾವೇಶಗಳ ಮೂಲಕ ಚುನಾವಣಾ ಕಣದಲ್ಲಿ ಉಳಿಯುವ ಸೂಚನೆ ನೀಡಿದ್ದು ಕಾಂಗ್ರೆಸ್ ಪಕ್ಷಕ್ಕೆ ತಲೆ ನೋವಾಗಿದೆ. ಬಂಡಾಯದ ಬಾವುಟ ಹಾರಿಸದಂತೆ ತಡೆಯುವುದು ಕಾಂಗ್ರೆಸ್ ಹೈಕಮಾಂಡ್ ಹೆಣಗಾಡುತ್ತಿದ್ದಂತೆ ಕಾಣುತ್ತಿದೆ.

ಜೆಡಿಎಸ್, ಆಮ್ ಆದ್ಮಿ ಪಕ್ಷಗಳ ಭರ್ಜರಿ ಪ್ರಚಾರ
ಜೆಡಿಎಸ್ ,ಸಿಪಿಐಎಂ ಹಾಗೂ ಆಮ್ ಆದ್ಮಿ ಪಕ್ಷಗಳು ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿದ್ದು, ಕಳೆದ ಐದಾರು ತಿಂಗಳಿನಿಂದ ಮನೆ ಮನೆ ಭೇಟಿ ಮೂಲಕ ಬಾಗೇಪಲ್ಲಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ಅಭ್ಯರ್ಥಿಗಳು ತೊಡಗಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರಭಲ ಸಂಘಟನೆಯಿದ್ದು ಅಭ್ಯರ್ಥಿಗಳ ಆಯ್ಕೆ ಗೊಂದಲದ ನಡುವೆಯೂ ವೈಯಕ್ತಿಕವಾಗಿ ಪಕ್ಷದ ಚಿನ್ಹೆ ಅಡಿಯಲ್ಲಿ ಮನೆ ಮನೆ ಭೇಟಿ ಮುಗಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿ ವೈಯಕ್ತಿಕವಾಗಿಯೇ ಪ್ರಭಾವ ಬೆಳೆಸಿಕೊಳ್ಳಲು ಪ್ರಯತ್ನ ಮುಂದುವರಿದಿದ್ದು, ಪಕ್ಷದ ಸಂಘಟನೆ ಹಾಗೂ ಮತಗಟ್ಟಿ ಮಾಡಿಕೊಳ್ಳಲು ಚುನಾವಣೆಯ ಈ ಹಂತದಲ್ಲಿಯೇ ಅಭ್ಯರ್ಥಿಗಳು ಕೈಗೊಳ್ಳುವಂತಾಗಿದೆ. ಚುನಾವಣೆಯಲ್ಲಿ ಅತೃಪ್ತರು ಕಾಟಕೊಡುವ ಆತಂಕವೂ ಎಲ್ಲ ರಾಜಕೀಯ ಪಕ್ಷಗಳಲ್ಲಿದೆ.

ಆಮ್ ಆದಿ ಪಾರ್ಟಿ ಸೇರಿದಂತೆ ಇನ್ನಿತರೆ ಸಣ್ಣಪುಟ್ಟ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಕೊಂಡು ಪ್ರಚಾರಕ್ಕೆ ಇಳಿದಿವೆ. ಆದರೆ, ರಾಷ್ಟ್ರೀಯ ಪಕ್ಷಗಳಲ್ಲಿಯೇ ಟಿಕೆಟ್‌ಗೆ ಪೈಪೋಟಿ ಹೆಚ್ಚಾಗಿದ್ದು, ಜಿದ್ದಾಜಿದ್ದಿ ಕಾಣಸಿಗುತ್ತಿದೆ. ಟಿಕೆಟ್ ಹಂಚಿಕೆಯಲ್ಲಿ ತರಾತುರಿ ತೋರಿದರೆ, ಅನಂತರದಲ್ಲಿ ಅಸಮಾಧಾನದ ಬಿಸಿ ಎದುರಿಸಬೇಕಾಗಿ ಬರುವ ಆತಂಕ ಪಕ್ಷಗಳಿಗೆ ಇರುವುದರಿಂದ ಕ್ಷೇತ್ರದ ರಾಜಕೀಯ ಚಟುವಟಿಕೆ ಇದೀಗ ರಾಜ್ಯದ ರಾಜಧಾನಿ ಬೆಂಗಳೂರಿಗೆ ಸ್ಥಳಾಂತರಗೊಂಡಿದ ಪರಿಣಾಮ ನಾಯಕರು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ಅಭ್ಯರ್ಥಿಯ ಹೆಸರು ತಿಳಿಯಲು ಕಾತುರರದಾದ ಕಾರ್ಯಕರ್ತರು
ಬೆಂಗಳೂರು ಮತ್ತು ಹೊಸದಿಲ್ಲಿಯ ಮಧ್ಯೆ ಆಕಾಂಕ್ಷಿಗಳು ಟಿಕೆಟ್‌ಗಾಗಿ ಓಡಾಡುತ್ತಿದ್ದು, ಬಾಗೇಪಲ್ಲಿ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬ ಕುತೂಹಲ ಮೂಡಿದೆ. ಆದರೆ, ಕಾರ್ಯಕರ್ತರು ಅಭ್ಯರ್ಥಿಯ ಹೆಸರು ತಿಳಿಯಲು ಕಾತರದಿಂದ ಕಾಯುತ್ತಿದ್ದು, ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳದೆ ಬಿಜೆಪಿ ಪಕ್ಷದ ಪ್ರಚಾರವೂ ಬಹುತೇಕ ಸ್ಥಗಿತಗೊಂಡಂತೆ ಕಾಣಿಸುತ್ತಿದೆ. ಕ್ಷೇತ್ರದಲ್ಲಿ ಈಗಾಗಲೇ ಡಿ.ಜೆ.ನಾಗರಾಜ ರೆಡ್ಡಿಗೆ ಟಿಕೆಟ್ ಘೋಷಣೆಯಾಗಿದ್ದು ಯಾವುದೇ ಗೊಂದಲವಿಲ್ಲದೆ ಕ್ಷೇತ್ರದಾದ್ಯಂತ ಬಿರುಸಿನ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಹಾಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಅವರಿಗೆ ಟಿಕೆಟ್ ಘೋಷಣೆಯಾಗಿದೆ.
ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ನೀರಾವರಿ ಹೋರಾಟಗಾರ ಡಾ.ಮಧು ಸೀತಪ್ಪ ಹೆಸರು ಅಂತಿಮಗೊಂಡಿರುವ ಹಿನ್ನಲೆಯಲ್ಲಿ ಪೊರಕೆ ಹಿಡಿದು ಮತದಾರರ ಮನ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಜಿ.ವಿ.ಶ್ರೀರಾಮರೆಡ್ಡಿಯವರಿಂದ ಸ್ಥಾಪನೆಯಾಗಿದ್ದ ಪಿಎಸ್ಎಸ್ ಬೆಂಬಲದೊಂದಿಗೆ ಹಲವು ಗ್ರಾಮಗಳ ಮುಖಂಡರೊಂದಿಗೆ ಹಾಗೂ ಜನಪ್ರತಿನಿಧಿಗಳ ಸೇರ್ಪಡೆ ಕಾರ್ಯಕ್ರಮಗಳ ಮೂಲಕ ಸದ್ದು ಮಾಡುತ್ತಿದ್ದಾರೆ.
ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಕಾಂಗ್ರೆಸ್, ಹಲವು ಬಾರಿ ಗೆದ್ದ ಇತಿಹಾಸವಿರುವ ಹಾಲಿ ಶಾಸಕರಿಗೆ ಟಿಕೆಟ್ ಅಂತಿಮ ಮಾಡಿದ್ದರೂ, ಮಾಜಿ ಶಾಸಕರು ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಸ್ಪರ್ಧೆ ಮಾಡುವ ತೀರ್ಮಾನಕ್ಕೆ ಬಂದಿರುವುದು, ಹಾಲಿ ಶಾಸಕರಿಗೆ ಹಾಗೂ ಪಕ್ಷದ ಹೈಕಮಾಂಡ್ ಬಂಡಾಯದ ಬಾವುಟ ಹಾರಿಸದಂತೆ ನೋಡಿಕೊಳ್ಳುವರೆ ಕಾದು ನೋಡಬೇಕಿದೆ.
ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಗೆ ಕಸರತ್ತು
ಕ್ಷೇತ್ರದಲ್ಲಿ ಹಿಂದೆಂದಿಗಿಂತ ಪ್ರಬಲವಾಗಿರುವಂತೆ ಕಾಣುತ್ತಿರುವ ಬಿಜೆಪಿ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಸಿ.ಮುನಿರಾಜು ಹಾಗೂ ಕೋನಪ್ಪರೆಡ್ಡಿ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಬಿಜೆಪಿ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ, ಪಕ್ಷವು ಅಭ್ಯರ್ಥಿ ಆಯ್ಕೆಗೆ ಹರಸಾಹಸ ಪಡುತ್ತಿದ್ದು, ಟಿಕೆಟ್ ಈಗಲೇ ಪ್ರಕಟಿಸಿದರೆ ಭಿನ್ನಮತ ಏಳುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications