ಗಡಿ ಕ್ಯಾತೆ ತೆಗೆದ ಅಜಿತ್ ಪವಾರ್‌ಗೆ ಬಿಜೆಪಿ ಸಂಸದ ಸುಧಾಕರ್ ತಕ್ಕ ಉತ್ತರ
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತೆ ಗಡಿ ಕ್ಯಾತೆ ತೆಗೆದಿದ್ದಾರೆ. ಕರ್ನಾಟಕದಲ್ಲಿ ಮರಾಠಿ ಮಾತನಾಡುವ ಪ್ರದೇಶಗಳು ಇನ್ನೂ ಮಹಾರಾಷ್ಟ್ರದ ಭಾಗವಾಗಿಲ್ಲ ಎನ್ನುವ ಮೂಲಕ ಕನ್ನಡಿಗರನ್ನು ಕೆಣಕಿದ್ದಾರೆ. ಇದಕ್ಕೆ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ತಿರುಗೇಟು ನೀಡಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ, ಭಾಷಾವಾರು ರಾಜ್ಯಗಳ ಪುನರ್ವಿಂಗಡಣೆಯಾಗಿ 70 ವರ್ಷಗಳಾದ ಮೇಲೂ ಇಂತಹ ವಿಭನಜನಕಾರಿ, ಪ್ರಚೋದನಕಾರಿ ಹೇಳಿಕೆಗಳನ್ನು ಕೊಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಸುಧಾಕರ್ ಹೇಳಿದ್ದಾರೆ.
ಕನ್ನಡ ಭಾಷಿಕರೇ ಹೆಚ್ಚಾಗಿರುವ ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಅಕ್ಕಲಕೋಟೆ ಕರ್ನಾಟಕಕ್ಕೆ ಸೇರಬೇಕು ಎಂದು ಕರ್ನಾಟಕ ಬೇಡಿಕೆ ಇಟ್ಟರೆ ಮಹಾರಾಷ್ಟ್ರದ ಉತ್ತರವೇನು? ಹೀಗೆ ಮಾಡುತ್ತಾ ಹೋದರೆ ಭಾರತದಂತಹ ವಿವಿಧತೆಯಲ್ಲಿ ಏಕತೆ ಇರುವ ದೇಶದಲ್ಲಿ ಇಂತಹ ಹಗ್ಗಜಗ್ಗಾಟಗಳಿಗೆ ಕೊನೆಯೇ ಇರುವುದಿಲ್ಲ. ಆದ್ದರಿಂದ ಜವಾಬ್ದಾರಿಯುತ ಸ್ಥಾನದಲ್ಲಿರುವ ಹಿರಿಯ ರಾಜಕೀಯ ನಾಯಕರು ಇಂತಹ ಅಸಂಬದ್ಧ, ಕೆಲಸಕ್ಕೆ ಬಾರದ ಹೇಳಿಕೆಗಳನ್ನು ಕೊಡುವುದು ಬಿಟ್ಟು, ನಾವೆಲ್ಲರೂ ಮೊದಲಿಗೆ ಭಾರತೀಯರು ಎಂಬ ಒಗ್ಗಟ್ಟಿನ ಭಾವನೆಯಿಂದ ಅಭಿವೃದ್ಧಿಯ ಕಡೆ, ಗಡಿ ಭಾಗಗಳ ಜನರ ಕಲ್ಯಾಣದ ಕಡೆ ಗಮನ ಹರಿಸುವುದು ಎಲ್ಲರಿಗೂ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

ಅಜಿತ್ ಪವಾರ್ ಹೇಳಿದ್ದೇನು?
ಮಹಾರಾಷ್ಟ್ರ ರಚನೆಯಾಗಿ 65 ವರ್ಷಗಳು ಕಳೆದರೂ ಪಕ್ಕದ ಕರ್ನಾಟಕದ ಬೆಳಗಾವಿ ಮತ್ತು ಕಾರವಾರ ಈಗಲೂ ಮಹಾರಾಷ್ಟ್ರದೊಂದಿಗೆ ವಿಲೀನವಾಗಿಲ್ಲ. ಬೆಳಗಾವಿ, ಕಾರವಾರ, ನಿಪ್ಪಾಣಿ ಪ್ರದೇಶಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನ ಮಾಡಬೇಕು. ಮಹಾರಾಷ್ಟ್ರ ಹೋರಾಟದಿಂದಲೇ ರೂಪುಗೊಂಡ ರಾಜ್ಯ. ಮಹಾರಾಷ್ಟ್ರ 65 ವರ್ಷಗಳನ್ನು ಪೂರೈಸಿದ್ದರೂ ನಮ್ಮ ಹೃದಯದಲ್ಲಿ ಒಂದು ಬೇಸರವಿದೆ. ಬೆಳಗಾವಿ ಮತ್ತು ಕಾರವಾರದ ಮರಾಠಿ ಜನರು ನಮ್ಮೊಂದಿಗೆ ಇಲ್ಲ. ಈ ಕೇಸ್ ಸುಪ್ರೀಂಕೋರ್ಟ್‌ನಲ್ಲಿದೆ. ಅವರೆಲ್ಲರೂ ಮಹಾರಾಷ್ಟ್ರಕ್ಕೆ ಸೇರಿಕೊಂಡ ನಂತರವೇ ನಾವು ಪೂರ್ಣ ಎಂದು ವಿಶ್ವಾಸದಿಂದ ಹೇಳಬಹುದು ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಎಸ್‌ಎಸ್‌ಎಸ್‌ಸಿ ವಿದ್ಯಾರ್ಥಿಗಳಿಗೆ ಸುಧಾಕರ್ ಅಭಿನಂದನೆ
ಇಂದು ಪ್ರಕಟವಾದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಯಶಸ್ವಿಯಾದ ಎಲ್ಲ ವಿದ್ಯಾರ್ಥಿಗಳಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಮಕ್ಕಳ ಯಶಸ್ಸಿಗೆ ಕಾರಣರಾದ ಪೋಷಕರಿಗೆ, ಶಿಕ್ಷಕರಿಗೂ ನನ್ನ ಅಭಿನಂದನೆಗಳು ಎಂದು ಸಂಸದ ಸುಧಾಕರ್ ಹೇಳಿದ್ದಾರೆ. ಕೇವಲ ಅಂಕಗಳೇ ಪ್ರತಿಭೆಯ ಮಾನದಂಡವಲ್ಲ. ಧೃತಿಗೆಡದೆ ಸಕಾರಾತ್ಮಕವಾಗಿ ಮುಂದಿನ ಹೆಜ್ಜೆಯಿಡಿ. ಭವಿಷ್ಯದ ಅವಕಾಶಗಳು ಇನ್ನೂ ಬಹಳಷ್ಟಿವೆ. ಇಂದಲ್ಲ ನಾಳೆ, ನಿಮಗೆ ಆಸಕ್ತಿ ಇರುವ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಖಂಡಿತ ನಿಮ್ಮದಾಗಲಿದೆ ಎನ್ನುವುದು ಪರೀಕ್ಷೆಯಲ್ಲಿ ಸಫಲರಾಗದ ಅಥವಾ ನಿರೀಕ್ಷಿತ ಫಲಿತಾಂಶ ಬರದ ವಿದ್ಯಾರ್ಥಿಗಳಿಗೆ ನನ್ನ ಕಿವಿಮಾತು ಎಂದಿದ್ದಾರೆ.

ಇಂದು ಪ್ರಕಟವಾದ 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಾಧಕಿಯರಾದ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಟೌನ್‌ನ ನೀಲಗಿರೇಶ್ವರ ಪ್ರೌಢಶಾಲೆಯ ಸಿ.ಭಾವನ ಹಾಗೂ ದೊಡ್ಡಬಳ್ಳಾಪುರ ಟೌನ್‌ನ ಮೆಳೆಕೋಟೆ ಕ್ರಾಸ್‌ನಲ್ಲಿರುವ ಎಸ್.ಜೆ.ಸಿ.ಆರ್ ಶಾಲೆಯ ಎ.ಸಿ.ರಂಜಿತಾ ಈ ಇಬ್ಬರೂ ವಿದ್ಯಾರ್ಥಿನಿಯರು 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಈ ಇಬ್ಬರೂ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಹಾಗು ಅವರ ಪೋಷಕರಿಗೆ, ಶಾಲೆಯ ಶಿಕ್ಷಕರಿಗೆ ಅಭಿನಂದನೆಗಳು ಎಂದು ಸುಧಾಕರ್ ಹೇಳಿದ್ದಾರೆ.












Click it and Unblock the Notifications