ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಅಂತರದಿಂದ ಬಿಜೆಪಿಗೆ ಗೆಲುವು- ಕೆ ಸುಧಾಕರ್
ಚಿಕ್ಕಬಳ್ಳಾಪುರ ಮಾರ್ಚ್ 2: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮೈತ್ರಿಯೂ ಇರುವುದರಿಂದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹೆಚ್ಚಿನ ಅಂತರದಿಂದ ಬಿಜೆಪಿ ಗೆಲ್ಲಲಿದೆ. ನರೇಂದ್ರ ಮೋದಿಯವರನ್ನು ಮರಳಿ ಪ್ರಧಾನಿಯಾಗಿಸುವುದೇ ನಮ್ಮ ಸಂಕಲ್ಪ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ದೇವನಹಳ್ಳಿ ಹೆದ್ದಾರಿ ಬಳಿ ಆರಂಭಿಸಲಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಕಚೇರಿಯನ್ನು ಸಂಸದ ಡಿ.ವಿ.ಸದಾನಂದಗೌಡ, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರೊಂದಿಗೆ ಮಾಜಿ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿಯೇ ನಾವೆಲ್ಲರೂ ಮತ ಯಾಚಿಸುತ್ತೇವೆ, ಯಾರು ಅಭ್ಯರ್ಥಿಯಾಗಬೇಕೆಂಬುದನ್ನು ವರಿಷ್ಠರು ತೀರ್ಮಾನಿಸುತ್ತಾರೆ. ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸಲು ಶ್ರಮಿಸುತ್ತೇವೆ ಎಂದರು.

ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸುವುದು ನಮ್ಮ ಸಂಕಲ್ಪ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅತಿ ದೊಡ್ಡ ಪಕ್ಷದಲ್ಲಿ ಆಕಾಂಕ್ಷಿಗಳಿರುವುದು ಸಹಜ. ನಾನು ಸ್ಪಷ್ಟೀಕರಣ ಕೊಟ್ಟ ಮೇಲೂ ಪಕ್ಷ ಬದಲಾವಣೆ ಬಗ್ಗೆ ಗಾಳಿ ಸುದ್ದಿ ಬರುತ್ತಿದೆ. ನನಗೆ ವರಿಷ್ಠರಲ್ಲಿ ವಿಶ್ವಾಸವಿದ್ದೇ ಬಿಜೆಪಿಗೆ ಬಂದಿದ್ದೇನೆ ಎಂದರು.
ಕರಾಳ ದಿನ:
ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಜಯಘೋಷವನ್ನು ಕಾಂಗ್ರೆಸ್ ಕಾರ್ಯಕರ್ತರು ಕೂಗಿರುವ ದಿನ ರಾಜಕೀಯ ಇತಿಹಾಸದಲ್ಲೇ ಕರಾಳ ದಿನ. ಪಾಕಿಸ್ತಾನ ಪರ ಜೈಕಾರ ಹಾಕಿದವರು ನೂರಕ್ಕೆ ನೂರು ದೇಶದ್ರೋಹಿಗಳೇ. ಅಂತಹವರಿಗೆ ಶಿಕ್ಷೆಯಾಗಬೇಕು. ಅದರ ಹೊಣೆಯನ್ನು ನೂತನ ರಾಜ್ಯಸಭಾ ಸದಸ್ಯರು ಹೊರಬೇಕು. ಕಾಂಗ್ರೆಸ್ ದೇಶದ ಜನರಲ್ಲಿ ಬೇಷರತ್ ಕ್ಷಮೆ ಕೋರಬೇಕು. ಈ ಸುದ್ದಿಯನ್ನು ನಾವು ಹಬ್ಬಿಸಿಲ್ಲ. ಮಾಧ್ಯಮಗಳಲ್ಲೇ ಈ ಸುದ್ದಿ ಬಂದಿದ್ದು, ಅದಕ್ಕಾಗಿ ಕಾಂಗ್ರೆಸ್ ನಾಯಕರು ಮಾಧ್ಯಮಗಳನ್ನು ತೆಗಳಿದ್ದಾರೆ. ಮಾಧ್ಯಮದವರು ನಡೆದ ಘಟನೆಯನ್ನು ಹೊಣೆಗಾರಿಕೆಯಿಂದ ತೋರಿಸಿದ್ದಾರೆ. ಈ ಸುದ್ದಿ ತೋರಿಸದಿದ್ದರೆ ಇಂತಹ ವ್ಯಕ್ತಿಗಳು ನಮ್ಮ ಸುತ್ತ ಇದ್ದಾರೆ ಎನ್ನುವುದು ಜನರಿಗೆ ಗೊತ್ತಾಗುತ್ತಿರಲಿಲ್ಲ. ಅದಕ್ಕಾಗಿ ಮಾಧ್ಯಮಗಳನ್ನು ಅಭಿನಂದಿಸುತ್ತೇನೆ ಎಂದರು.

ಕಾಂಗ್ರೆಸ್‌ಗೆ ದೇಶಪ್ರೇಮ ಹಾಗೂ ಸ್ವಾಭಿಮಾನ ಇದ್ದರೆ ಜನರ ಕ್ಷಮೆ ಯಾಚಿಸಬೇಕು. ಯಾರ ಕಾಲದಲ್ಲಿ ದೇಶ ಒಡೆದಿದೆ ಎಂಬುದನ್ನು ಇತಿಹಾಸವೇ ಹೇಳುತ್ತದೆ. ಅದಕ್ಕೆ ಬೇಕಿದ್ದರೆ ಕಾಂಗ್ರೆಸ್ ನಾಯಕರಿಗೆ ಚರಿತ್ರೆಯ ಪುಸ್ತಕ ನೀಡುತ್ತೇನೆ. ಅವರು ಬೇಕಿದ್ದರೆ ಓದಿಕೊಳ್ಳಲಿ. ಕಾಂಗ್ರೆಸ್‌ನಿಂದಲೇ ದೇಶ ಒಡೆದಿದೆ. ಮೊನ್ನೆ ತನಕ ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನವಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದು ಕೂಡ ಕಾಂಗ್ರೆಸ್. ಅವರ ಅಂತ್ಯಸಂಸ್ಕಾರಕ್ಕೂ ಕಾಂಗ್ರೆಸ್ ಜಾಗ ನೀಡಲಿಲ್ಲ. ಅವರ ಹೆಸರು ಹೇಳಲು ಕೂಡ ಕಾಂಗ್ರೆಸ್‌ಗೆ ನೈತಿಕತೆ ಇಲ್ಲ. ಕಾಂಗ್ರೆಸ್ ದಲಿತ ಚಿಂತಕರಿಗೆ ಟಿಕೆಟ್ ನೀಡದೆ ದೆಹಲಿಯಲ್ಲಿರುವವರಿಗೆ ಟಿಕೆಟ್ ನೀಡಿದೆ. ಇದನ್ನು ಕಾಂಗ್ರೆಸ್‌ನಲ್ಲಿರುವ ದಲಿತ ಸಚಿವ ಪ್ರಿಯಾಂಕ್ ಖರ್ಗೆ ಮೊದಲಾದವರು ಪ್ರಶ್ನೆ ಮಾಡಬೇಕಿತ್ತು. ಇವರು ಎಂದಿಗೂ ದಲಿತರನ್ನು ಉದ್ಧಾರ ಮಾಡಿಲ್ಲ. ಆದರೆ ದಲಿತರ ಹೆಸರಲ್ಲಿ ಓಟು ಕಸಿಯುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications