ರೇಷ್ಮೆ ಹುಳಕ್ಕೆ ವಿಚಿತ್ರ ಕಾಯಿಲೆ ಕಾಟ: ಸಂಕಷ್ಟದಲ್ಲಿ ರೈತ ವರ್ಗ
ಚಿಕ್ಕಬಳ್ಳಾಪುರ, ಮೇ 30: ಒಂದೆಡೆ ರೇಷ್ಮೆಗೂಡಿನ ಬೆಲೆ ಕುಸಿತದ ಹೊಡೆತದಂತೆ ಈಗ ರೇಷ್ಮೆಹುಳುಗಳಿಗೆ ಜೀವಿತಾವಧಿ ವಿಸ್ತರಣೆಯ ವಿಚಿತ್ರ ಕಾಯಿಲೆ ಕಾಡುತ್ತಿದೆ. ಕೊನೆವರೆಗೂ ಚೆನ್ನಾಗೇ ಕಾಣುವ ರೇಷ್ಮೆಹುಳಗಳು ಕೊನೆಯಲ್ಲಿ ರೇಷ್ಮೆಗೂಡು ಕಟ್ಟದೇ ಹಾಗೇ ಉಳಿದು ಸಾಯುತ್ತಿದ್ದು, ರೈತರನ್ನು ಚಿಂತಾಕ್ರಾಂತರನ್ನಾಗಿ ಮಾಡಿದೆ. ಆದರೆ ಇದಕ್ಕೆ ಸ್ಪಷ್ಟ ಕಾರಣ, ಪರಿಹಾರ ಏನೂ ಎಂಬುದು ಇನ್ನೂ ಗೊತ್ತಾಗಿಲ್ಲ. ಎನ್ನುವುದೇ ವಿಪರ್ಯಾಸ.
ರೇಷ್ಮೆ ಕೃಷಿ ಒಂದೇ ತಿಂಗಳಲ್ಲಿ ಕೈಗೆ ಸಿಗುವ ಬೆಳೆ, ರೇಷ್ಮೆ ಸಾಕಣೆಯ ಪ್ರತಿ ಹಂತದಲ್ಲೂ ಮೈಯೆಲ್ಲಾ ಕಣ್ಣಾಗಿರಬೇಕು. ಆದರೆ ಇತ್ತೀಚೆಗೆ ರೇಷ್ಮೆಹುಳಗಳು ನೋಡಲು ಚೆನ್ನಾಗಿ ಇದ್ದಂತೆ ಕಾಣುತ್ತವೆ. ಇನ್ನೇನು ಗೂಡು ಕಟ್ಟಬೇಕು ಎನ್ನುವ ಹಂತದಲ್ಲಿ ಹಾಗೇ ಉಳಿದು ಬಿಡುತ್ತಿದ್ದು, 4ನೇ ಜ್ವರದ ನಂತರ 12 ರಿಂದ 15 ದಿನಗಳವರೆಗೂ ಇದ್ದು ಆ ನಂತರ ಗೂಡು ಕಟ್ಟದೇ ಹಾಗೇ ಸಾಯುತ್ತಿವೆ. ಇದರಿಂದ ಸಾವಿರಾರು ರೂ. ಖರ್ಚು ಮಾಡಿ ರೇಷ್ಮೆ ಹುಳ ಸಾಕಣೆ ಮಾಡಿದ ರೈತರು ಕೊನೆ ಕ್ಷಣದಲ್ಲಿ ನಷ್ಟಕ್ಕೆ ಒಳಗಾಗುತ್ತಿದ್ದಾರೆ.

ರೇಷ್ಮೆ ಹುಳ ಸಾವಿಗೆ ತಿಳಿಯದ ನಿಖರ ಕಾರಣ
ಈ ರೀತಿ ರೇಷ್ಮೆ ಕೃಷಿಗೆ ಆಪತ್ತು ಎದುರಾಗಿರುವುದು ಏಕೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಕಾರಣ ಸಿಗುತ್ತಿಲ್ಲ. ಆದರೆ ಹಿಪ್ಪುನೇರಳೆ ತೋಟಗಳಿಗೆ ಯಾವುದೇ ರೋಗಗಳು ಬಾರದೆ ಇರುವಂತೆ ಸಿಂಪಡಿಸುತ್ತಿರುವ ಔಷಧಗಳೇ ಕಾರಣ ಇರಬಹುದು ಎಂದು ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
3 ತಿಂಗಳ ಹಿಂದೆ ಶಿಡ್ಲಘಟ್ಟ ತಾಲೂಕಿನಲ್ಲಿ ಸಮಸ್ಯೆ ಇದ್ದ ಗ್ರಾಮಗಳಿಗೆ ಭೇಟಿ ನೀಡಿದ್ದ ವಿಜ್ಞಾನಿಗಳ ತಂಡ ಸ್ಯಾಂಪಲ್‌ನ್ನು ಪರೀಕ್ಷೆಗೊಳಪಡಿಸಿ ಈ ರೀತಿ ಅಭಿಪ್ರಾಯ ಪಟ್ಟಿದೆ. ಆದರೆ ನಿಖರ ಕಾರಣಕ್ಕಾಗಿ ಹೆಚ್ಚಿನ ಪರೀಕ್ಷೆ ಕೇಂದ್ರ ರೇಷ್ಮೆ ಸಂಶೋಧನಾ ಸಂಸ್ಥೆಗೆ ಕಳುಹಿಸಿದ್ದು, ನಿಖರ ಕಾರಣಕ್ಕೆ ಎದುರು ನೋಡುತ್ತಿದ್ದಾರೆ.
ಕೆಲವು ರೈತರು ಹಿಪ್ಪುನೇರಳೆ ತೋಟಗಳು ಚೆನ್ನಾಗಿ ಬೆಳೆಯಲು ಶಿಫಾರಸು ಮಾಡದ ಕೆಲವು ಔಷಧಗಳನ್ನು ಸಿಂಪಡಿಸುತ್ತಿದ್ದಾರೆ. ಕ್ರಿಮಿನಾಶಕದ ವಿಷ ಪ್ರಮಾಣ ಗಿಡದಲ್ಲೇ ಉಳಿಯುವಕಾರಣ ಅದು ರೇಷ್ಮೆಹುಳಗಳು ಕೊನೆಗೆ ದೇಹ ಸೇರಿ ಹುಳಗಳು ತಮ್ಮೊಳಗಿನ ರೇಷ್ಮೆಯನ್ನು ಹೊರ ಹಾಕಲಾಗದೆ ಹಾಗೇ ಉಳಿಯುತ್ತವೆ. ಇನ್ನೊಂದೆಡೆ ಗಾಳಿಯಲ್ಲಿ ಪಕ್ಕದ ತೋಟಗಳಿಂದ ಬರುವ ಔಷಧ ಪ್ರಮಾಣವೂ ಇದಕ್ಕೆ ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ. ಆದರೆ ಸ್ಪಷ್ಟ ಕಾರಣ ಇನ್ನೂ ನಿಗೂಢವಾಗಿದೆ.

ವಿಚಿತ್ರ ಕಾಯಿಲೆಯಿಂದ ಸಂಕಷ್ಟ ಮಾರುಕಟ್ಟೆಯಲ್ಲಿ ಹಿಂದೆ ರೇಷ್ಮೆಗೂಡಿಗೆ ಕೆ.ಜಿ.ಗೆ 700 ರೂ. ನಿಂದ 800ರೂ. ವರೆಗೂ ಬೆಲೆಯಿತ್ತು. ಆದರೆ ಈಗ ರೇಷ್ಮೆಗೂಡಿನ ಬೆಲೆಯೂ 200 ರೂ ಗೆ ಕುಸಿದಿದೆ. ಇದರೊಟ್ಟಿಗೆ ರೇಷ್ಮೆ ಹುಳಗಳಿಗೆ ಎದುರಾಗಿರುವ ವಿಚಿತ್ರ ರೋಗಕ್ಕೆ ರೇಷ್ಮೆ ಬೆಳೆಗಾರರು ಕಂಗಾಲಾಗಿದ್ದಾರೆ. ಹಾಕಿದ ಬಂಡವಾಳವೂ ವಾಪಸ್ ಆಗದೇ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ಇನ್ನೊಂದೆಡೆ ರೇಷ್ಮೆಹುಳಗಳನ್ನು ಕೊಟ್ಟ ಚಾಕಿ ಸಾಕಾಣಿಕೆ ಕೇಂದ್ರದ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದೆ. ಉತ್ತಮ ಮೊಟ್ಟೆಗಳನ್ನು ನೀಡಿದರೂ ರೈತರು ಪ್ರತಿದಿನ ವಿಚಿತ್ರ ಕಾಯಿಲೆಯ ದೂರುಗಳನ್ನು ಹೇಳುತ್ತಿದು ಚಾಕಿ ಸಾಕಾಣೆ ಮಾಡುವವರಿಗೂ ಸಂಕಷ್ಟ ಎದುರಾಗಿದೆ. ಸಾವಿರಾರೂ ರೂಪಾಯಿ ಕೊಟ್ಟು, ಚಾಕಿ ಖರೀದಿಸಿದ ರೈತರಿಗೆ ಯಾವುದೇ ಉತ್ತರ ಹೇಳಲಾಗದ ಪರಿಸ್ಥಿತಿ ಎದುರಿಸುವಂತಾಗಿದೆ.
ರೇಷ್ಮೆಗೂಡಿನ ಬೆಲೆ ಕುಸಿತ
ಈ ಬಗ್ಗೆ ಚಿಕ್ಕಬಳ್ಳಾಪುರ ತಾಲೂಕು ರೇಷ್ಮೆ ಬೆಳೆಗಾರ ಸಂಘದ ಸದಸ್ಯ ವೇಣುಗೋಪಾಲ್ ಮಾತನಾಡಿ 'ರೇಷ್ಮೆಗೂಡಿನ ಬೆಲೆ ಕುಸಿದಿದೆ. ಇನ್ನೊಂದೆಡೆ ರೇಷ್ಮೆಹುಳ ಗೂಡು ಕಟ್ಟುವ ಸಮಯ ಬಂದರೂ ಕಟ್ಟದೇ ಹೆಚ್ಚಿನ ದಿನ ಇದ್ದು ಸಾಯುತ್ತಿವೆ. ಇದರಿಂದ ರೇಷ್ಮೆ ಬೆಳೆಗಾರರು ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಸಮಸ್ಯೆ ಕುರಿತಾಗಿ ಪ್ರತಿನಿತ್ಯ ಚಾಕಿ ಸಾಕಣೆ ಕೇಂದ್ರಗಳಿಗೆ ದೂರುಗಳನ್ನು ನೀಡುತ್ತಿದ್ದರು. ಅವರಿಂದಲೂ ನಿಖರ ಕಾರಣ ಕೊಡಲಾಗುತ್ತಲ್ಲ ಹಾಗಾಗಿ ಯಾವುದೇ ಪ್ರಯೋಜನವಾಗುತ್ತಿಲ್ಲ. ಆದಷ್ಟು ಬೇಗ ಇದಕ್ಕೆ ಪರಿಹಾರ ಸೂಚಿಸಲು ಕ್ರಮ ಕೈಗೊಳ್ಳಬೇಕಿದೆ.

ರಾಜ್ಯ ರೇಷ್ಮೆ ಸಂಶೋಧನೆ ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿ ಡಾ.ಎನ್.ಬಿ ಜ್ಯೋತಿ ಪ್ರತಿಕ್ರಯಿಸಿ' ರೇಷ್ಮೆ ಹುಳಗಳ ಜೀವಿತಾವಧಿ ವಿಸ್ತರಣೆಗೊಳ್ಳುತ್ತಿರುವ ಬಗ್ಗೆ ನಿಖರ ಕಾರಣಕ್ಕಾಗಿ ಸಮಸ್ಯೆಗೆ ಒಳಗಾಗಿರುವ ತೋಟಗಳಿಂದ ಸೊಪ್ಪು ಮತ್ತು ಹುಳಗಳ ಮಾದರಿಯನ್ನು ಸಂಗ್ರಹಿಸಿ ತರಲಾಗಿದೆ. ಈ ಸಮಸ್ಯೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಕಂಡು ಬರುತ್ತಿದೆ. ಇದಕ್ಕೆ ನಿಖರ ಕಾರಣಕ್ಕಾಗಿ ವಿವರವಾದ ಅಧ್ಯಯನ ನಡೆಸಿ ಪರಿಹಾರ ಸೂಚಿಸಲಾಗುವುದು' ಎಂದು ತಿಳಿಸಿದರು.












Click it and Unblock the Notifications