ಯಾರ ತಾಳಕ್ಕೋ ಕುಣಿಯುತ್ತಿದ್ದಾರೆ ರಜನೀಕಾಂತ್: ಡಿಎಂಕೆ
ಚೆನ್ನೈ, ಅಕ್ಟೋಬರ್ 26: ಚಿತ್ರ ನಟ ರಜನೀಕಾಂತ್ 'ಕೆಲ ವ್ಯಕ್ತಿಗಳ' ಕೈಯಲ್ಲಿ ಗೊಂಬೆಯಾಗಿದ್ದು, ಅವರನ್ನು 'ಕೋಮುವಾದಿ' ಶಕ್ತಿಗಳು ಬೆಂಬಲಿಸುತ್ತಿವೆ ಎಂದು ಡಿಎಂಕೆ ಶುಕ್ರವಾರ ಆರೋಪ ಮಾಡಿದೆ. ರಜಿನಿ ಮಕ್ಕಳ್ ಮಂಡ್ರಮ್ ಬಗೆಗೆ ಈಚೆಗೆ ರಜನೀಕಾಂತ್ ನೀಡಿದ ಹೇಳಿಕೆ ಬಗ್ಗೆ ಪಕ್ಷದ ಮುಖವಾಣಿಯಲ್ಲಿ ಪ್ರಶ್ನೆ ಮಾಡಲಾಗಿದೆ.
ರಾಜಕಾರಣದಲ್ಲಿ ಬದಲಾವಣೆ ತರುವ ಸಲುವಾಗಿ ಬಂದಿದ್ದೇನೆ ಹೊರತು ಹಣಕ್ಕಾಗಿಯೋ ಅಧಿಕಾರಕ್ಕಾಗಿಯೋ ಅಲ್ಲ ಎಂದು ಮಂಗಳವಾರ ಹೇಳಿದ್ದರು. ಯಾರಿಗೆ ಹಣ ಅಥವಾ ಪದವಿ ಮೇಲೆ ಕಣ್ಣಿದೆಯೋ ಅಂಥವರಿಗೆ ತಮ್ಮ ಪಕ್ಷದಲ್ಲಿ ಅವಕಾಶ ನೀಡುವುದಿಲ್ಲ ಎಂದು ಕಳೆದ ವರ್ಷ ಹೇಳಿದ್ದ ಮಾತನ್ನೇ ಇನ್ನೊಮ್ಮೆ ಹೇಳಿದ್ದರು.
ಡಿಎಂಕೆ ಮುಖವಾಣಿ 'ಮುರಸೋಳಿ'ಯಲ್ಲಿ ರಜನೀಕಾಂತ್ ರ 'ಮುಗ್ಧ ಅಭಿಮಾನಿ' ಹೆಸರಲ್ಲಿ ಪ್ರಶ್ನೆ ಮಾಡಲಾಗಿದೆ. ರಜನೀಕಾಂತ್ ಗೆ ಪದವಿ ಬೇಡ ಅಂತಾದರೆ ದಿವಂಗತ ಇ.ವಿ.ರಾಮಸಾಮಿ ಪೆರಿಯಾರ್ ರೀತಿಯಲ್ಲಿ ಚಳವಳಿ ಆರಂಭಿಸಬಹುದಿತ್ತು ಎನ್ನಲಾಗಿದೆ.

"ಪ್ರೀತಿಯ ನಾಯಕರೇ, ಅಧಿಕಾರ ಮುಖ್ಯವಲ್ಲ, ಅದಕ್ಕಾಗಿ ರಾಜಕೀಯಕ್ಕೆ ಬರುತ್ತಿಲ್ಲ ಅನ್ನೋದಾದರೆ ಎಲ್ಲ ವಿಧಾನಸಭಾ ಕ್ಷೇತ್ರದಲ್ಲೂ ಮುಂದಿನ ಚುನಾವಣೆಗೆ ನಿಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಯಾಕೆ ಇಳಿಸುವುದಾಗಿ ಘೋಷಿಸಿದಿದ್ದೀರಿ" ಎಂದು ಪ್ರಶ್ನೆ ಮಾಡಲಾಗಿದೆ.
ಹಾಗಿದ್ದಾಗ ನೀವು ಪೆರಿಯಾರ್ ಅವರ ಥರ ಪಕ್ಷ ಆರಂಭಿಸಿ ಸಿದ್ಧಾಂತಕ್ಕಾಗಿ ಹೋರಾಡಿ ಎಂದು ಮುಗ್ಧ ಅಭಿಮಾನಿ ಕೇಳಿದ್ದಾರೆ. ಇದೇ ಸಂದರ್ಭದಲ್ಲಿ ರಜನೀಕಾಂತ್ ರನ್ನು ಎಚ್ಚರಿಸಿದ್ದು, 'ಗುಂಪೊಂದು' ನಿಮ್ಮ ಜನಪ್ರಿಯತೆಗೆ ಕುಂದು ತರಲು ಯತ್ನಿಸುತ್ತಿದೆ. ಅವರ ತಾಳಕ್ಕೆ ನಿಮ್ಮನ್ನು ಕುಣಿಸಲು ಯತ್ನಿಸುತ್ತಿದ್ದಾರೆ. ಇದರಿಂದ ಅಭಿಮಾನಿಗಳ ಮಧ್ಯೆ ವರ್ಚಸ್ಸು ಕಳೆದುಕೊಳ್ಳಬೇಕಾಗುತ್ತದೆ ಎನ್ನಲಾಗಿದೆ.
ನಾವು (ಅಭಿಮಾನಿಗಳು) ನಿಮ್ಮನ್ನು ನಂಬಿದೆವು. ಆದರೆ ನೀವು ಯಾರದೋ ಕೈಗೊಂಬೆಯಾಗಿ, ತಾಳಕ್ಕೆ ಕುಣಿಯುತ್ತಿದ್ದೀರಿ? ಯಾರು ಆ ಬ್ಲಾಕ್ ಶೀಪ್ ಎಂಬ ಎಂಥಿರನ್ ಸಿನಿಮಾದ ಸಂಭಾಷಣೆಯನ್ನೇ ಬಳಕೆ ಮಾಡಲಾಗಿದೆ.












Click it and Unblock the Notifications