ಅಪ್ಪ ಮಾಡಿದ್ದಂತೆಯೇ 100 ದಿನದಲ್ಲಿ ಎಲ್ಲ ಭರವಸೆ ಈಡೇರಿಸುತ್ತೇನೆ: ಸ್ಟಾಲಿನ್
ತಿರುವಣ್ಣಾಮಲೈ, ಜನವರಿ 29: ತಮ್ಮ ತಂದೆ ಅಧಿಕಾರದಲ್ಲಿದ್ದಾಗ ನಡೆದುಕೊಂಡಂತೆಯೇ ತಾವು ಅಧಿಕಾರಕ್ಕೆ ಬಂದಾಗ ಎಲ್ಲ ಆಶ್ವಾಸನೆಗಳನ್ನೂ ಈಡೇರಿಸುವುದಾಗಿ ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಶುಕ್ರವಾರ ಭರವಸೆ ನೀಡಿದರು.
ತಮಿಳುನಾಡಿನ ತಿರುವಣ್ಣಾಮಲೈನಲ್ಲಿ 'ಉಂಗಳ್ ತೊಗುದಿಯಿಳ್ ಸ್ಟಾಲಿನ್' ಎಂಬ ಜನರನ್ನು ಸಂಪರ್ಕಿಸುವ ಗುರಿ ಹೊಂದಿರುವ ಮಹತ್ವಾಕಾಂಕ್ಷಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಮ್ಮ ತಂದೆ ಕರುಣಾನಿಧಿ ಅವರು ರೈತರಿಗೆ ಉಚಿತ ವಿದ್ಯುತ್, 7000 ಕೋಟಿ ರೂ ಮೊತ್ತದ ಕೃಷಿ ಸಾಲಗಳ ಮನ್ನಾ ಮತ್ತು ಕಲರ್ ಟಿವಿಗಳ ಹಂಚಿಕೆ ಸೇರಿದಂತೆ ಚುನಾವಣೆಯ ಪ್ರಚಾರದಲ್ಲಿ ನೀಡಿದ ಎಲ್ಲ ಭರವಸೆಗಳನ್ನೂ ಈಡೇರಿಸಿದ್ದರು ಎಂದು ಜನರಿಗೆ ನೆನಪಿಸಿದರು.

'ನನ್ನ ತಂದೆ ಮಾಡಿದ್ದಂತೆ, ನಾನು ರಾಜ್ಯದಲ್ಲಿ ಅಧಿಕಾರಕ್ಕೆ ಮರಳಿ ಬಂದ 100 ದಿನಗಳ ಒಳಗಾಗಿ ನಾನು ನೀಡುವ ಎಲ್ಲ ಭರವಸೆಗಳನ್ನೂ ಈಡೇರಿಸುತ್ತೇನೆ' ಎಂದು ಹೇಳಿದರು.
ಸ್ವಸಹಾಯ ಸಂಘಗಳ ಸ್ಥಾಪನೆ, ಹೊಗೇನಕಲ್-ರಾಮನಾಥಪುರಂ ಸಂಯೋಜಿತ ನೀರು ಪೂರೈಕೆ ವ್ಯವಸ್ಥೆ, ನಮಕ್ಕು ನಾಮಕರಣ ಯೋಜನೆ, ಅಣ್ಣಾ ಮರುಮಲರ್ಚಿ ಯೋಜನೆ ಸೇರಿದಂತೆ ತಮ್ಮ ಅನೇಕ ಸಾಧನೆಗಳ ಬಗ್ಗೆ ಹೇಳಿಕೊಂಡರು. ಜತೆಗೆ ಸ್ಥಳೀಯ ಆಡಳಿತ ಸಚಿವರಾಗಿದ್ದ ಸಂದರ್ಭದಲ್ಲಿ ಅನೇಕ ಕೈಗಾರಿಕಾ ಯೋಜನೆಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಗಿ ತಿಳಿಸಿದರು.
'ರಾಜ್ಯದಲ್ಲಿ ಈ ಎಲ್ಲ ಯೋಜನೆಗಳನ್ನು ಜಾರಿಗೆ ತಂದಿದ್ದಕ್ಕೆ ಗರ್ವಯುತ ಹೆಮ್ಮೆ ಪಡುತ್ತೇನೆ. ತಮಿಳುನಾಡನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಪರಿವರ್ತಿಸಲು ನಾನು ಯೋಜನೆಯೊಂದನ್ನು ಹೊಂದಿದ್ದೇನೆ' ಎಂದರು.












Click it and Unblock the Notifications