ಬೆಳ್ಳಂಬೆಳಗ್ಗೆ ಮಾಧ್ಯಮ ಸಂಸ್ಥೆ ಮೇಲೆ ಬಾಂಬ್ ದಾಳಿ
ಚೆನ್ನೈ, ಮಾ.12: ತಮಿಳು ನ್ಯೂಸ್ ಚಾನೆಲ್ ಪುಧಿಯಾ ಥಲೈಮುರೈ ಕಚೇರಿ ಮೇಲೆ ಬೆಳ್ಳಂಬೆಳಗ್ಗೆ ಬಾಂಬ್ ದಾಳಿ ನಡೆದಿದೆ. ಅದರೆ, ಅದೃಷ್ಟವಶಾತ್ ಬಾಂಬ್ ದಾಳಿಯಲ್ಲಿ ಯಾರಿಗೂ ಹಾನಿಯುಂಟಾಗಿಲ್ಲ.
ಗುರುವಾರ ಬೆಳಗ್ಗೆ 3 ಗಂಟೆ ವೇಳೆಗೆ ನಾಲ್ಕು ಜನ ವ್ಯಕ್ತಿಗಳು ಎರಡು ಬೈಕ್ ಗಳಲ್ಲಿ ಬಂದು ದಾಳಿ ನಡೆಸಿರುವ ಮಾಹಿತಿ ಸಿಕ್ಕಿದೆ. ಗಿಂಡಿ ಕೈಗಾರಿಕಾ ಪ್ರದೇಶದಲ್ಲಿರುವ ಕಚೇರಿ ಬಳಿ ಟಿಫಿನ್ ಬಾಕ್ಸ್ ಬಾಂಬ್ ಎಸೆದಿದ್ದಾರೆ. ಒಂದು ಬಾಂಬ್ ಕಾಪೌಂಡ್ ಗೋಡೆಗೆ ಬಡಿದರೆ, ಮತ್ತೊಂದು ಕಚೇರಿ ಮುಂಭಾಗ ಬಿದ್ದಿದೆ.

ಎರಡು ಬಾರಿ ಭಾರಿ ಶಬ್ದದೊಂದಿಗೆ ಬಾಂಬ್ ಸ್ಫೋಟಗೊಂಡಿದೆ. ಸೆಕ್ಯುರಿಟಿ ಗಾರ್ಡ್ ಗಳು, ನೈಟ್ ಶಿಫ್ಟ್ ನಲ್ಲಿದ್ದ ಸಿಬ್ಬಂದಿಗಳು ಆಘಾತಗೊಂಡು ಕಚೇರಿಯಿಂದ ಹೊರಕ್ಕೆ ಓಡಿ ಬಂದಿದ್ದಾರೆ.
ಎರಡು ಬಾಂಬ್ ಗಳು ಕಡಿಮೆ ತೀವ್ರತೆವುಳ್ಳ ಬಾಂಬ್ ಗಳಾಗಿದ್ದು, ಯಾರಿಗೂ ಯಾವುದೇ ಹಾನಿಯಾಗಿಲ್ಲ. ಕಚೇರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದುಷ್ಕರ್ಮಿಗಳ ಚಲನವಲನಗಳ ಚಿತ್ರ ಸೆರೆಯಾಗಿದೆ.

ಘಟನಾ ಸ್ಥಳಕ್ಕೆ ಕೂಡಲೇ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಭಾನುವಾರದಂದು ಪುಧಿಯಾ ಥಲೈಮುರೈ ಕಚೇರಿಯ ಕೆಮೆರಾಮ್ಯಾನ್ ಮೇಲೆ ಹಲ್ಲೆ ನಡೆಸಲಾಗಿತ್ತು. ಹಲ್ಲೆ ನಡೆಸಿದವರನ್ನು ಬಂಧಿಸಲಾಗಿತ್ತು.

ಟಿವಿಯಲ್ಲಿ ಮದುವೆ, ಮಂಗಳಸೂತ್ರದ ಅಗತ್ಯದ ಬಗ್ಗೆ ಸಂವಾದ ಪ್ರಸಾರವಾದ ಮೇಲೆ ಈ ರೀತಿ ಘಟನೆಗಳು ನಡೆಯತೊಡಗಿವೆ ಎಂದು ಕಚೇರಿ ಸಿಬ್ಬಂದಿ ಹೇಳಿದ್ದಾರೆ.
ತಮಿಳುನಾಡಿನ ಪತ್ರಕರ್ತರ ಸಂಘ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ. ಮಾಧ್ಯಮ ಸಂಸ್ಥೆ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲು ಪತ್ರಕರ್ತರು ಸಜ್ಜಾಗುತ್ತಿದ್ದಾರೆ.
ನಮಗೆ ತೊಂದರೆ ನೀಡಲು ಕೆಲವರು ಪ್ರಯತ್ನಿಸಿದ್ದಾರೆ. ಇದು ಸೌಹಾರ್ದ ವಾತಾವರಣವನ್ನು ಕದಡಿ ಕೋಮು ಸಂಘರ್ಷಕ್ಕೂ ಹಾದಿ ಮಾಡಿಕೊಡಬಹುದು ಎಂದು ಮಾಧ್ಯಮದ ಸಿಇಒ ಶಾಮ್‌ಕುಮಾರ್ ಹೇಳಿದ್ದಾರೆ
ಒನ್ ಇಂಡಿಯಾ ಸುದ್ದಿ












Click it and Unblock the Notifications