ಅಪ್ಪಚ್ಚಿ ತಿನ್ನೋ ಪಾಪಚ್ಚಿ ಕೈಗೆ ಎಣ್ಣೆ ಲೋಟ
ಚೆನ್ನೈ, ಜುಲೈ 07: ಪುಂಡರ ಕೈಗೆ ಸಿಕ್ಕ ನಾಲ್ಕು ವರ್ಷದ ಹಸುಳೆಗೆ ಮದ್ಯಪಾನ ಮಾಡುವಂತೆ ಬಲವಂತ ಮಾಡಿದ ದೃಶ್ಯಗಳಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಕಿಚ್ಚು ಹಬ್ಬಿಸಿದೆ. ವಿಡಿಯೋ ಕೊನೆಗೂ ಪೊಲೀಸರ ಕಣ್ಣಿಗೆ ಬಿದ್ದಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಅಪ್ಪಚ್ಚಿ ತಿನ್ನೋ ಪಾಪಚ್ಚಿ ಕೈಗೆ ಪ್ಲಾಸ್ಟಿಕ್ ಲೋಟ ಕೊಟ್ಟು ಕುಡಿಯಲು ಪ್ರೇರಿಪಿಸಿದ್ದಾರೆ. ಜೊತೆಗೆ ಚೌ ಚೌ ನೆಚ್ಚಿಕೊಳ್ಳುತ್ತಾ ಮದ್ಯಪಾನಕ್ಕೆ ನಾಂದಿ ಹಾಡಿದ ಮಗುವಿನ ಗಂಟಲಲ್ಲಿ ಮದ್ಯ ಸಲೀಸಾಗಿ ಇಳಿಯುತ್ತದೆ. ಈ ಘಟನೆಯಲ್ಲಿ ಕಂಡು ಬಂದಿರುವ ಮೋಟರ್ ಸೈಕಲ್ ಗಳ ನಂಬರ್ ಇಟ್ಟುಕೊಂಡು ತನಿಖೆ ಆರಂಭಿಸಿದ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ತಿರುನಲ್ವೇಲಿ ಜಿಲ್ಲೆಯ ಮೇಲ್ ಚೋಳಕುಪ್ಪಂ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮಗುವಿನ ಅಂಕಲ್ ಒಬ್ಬರು ಈ ದೃಶ್ಯಗಳನ್ನು ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ಈ ವಿಡಿಯೋ ಮೊಬೈಲಿನಿಂದ ಮೊಬೈಲಿಗೆ ಹರಿದಾಡಿ ಸ್ಥಳೀಯ ಮಾಧ್ಯಮಗಳ ಕಣ್ಣಿಗೂ ಬಿದ್ದಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಮಗುವಿನ ಸೋದರಮಾವನದ್ದೇ ಕೃತ್ಯ. ಇಬ್ಬರನ್ನು ಬಂಧಿಸಲಾಗಿದ್ದು, ಉಳಿದ ನಾಲ್ವರನ್ನು ಸದ್ಯದಲ್ಲೇ ಸೆರೆ ಹಿಡಿಯಲಾಗುವುದು ಎಂದಿದ್ದಾರೆ. ಕ್ರಿಕೆಟ್ ಪಂದ್ಯ ಮುಗಿಸಿಕೊಂಡು ಗೆಲುವಿನ ವಿಜಯೋತ್ಸವ ಆಚರಣೆಯಲ್ಲಿ ತೊಡಗಿದ್ದರು. ಪಾರ್ಟಿ ಮಾಡಿ ಉಳಿದ ಮದ್ಯದಲ್ಲಿ ಒಂದಿಷ್ಟು ಮಗುವಿಗೆ ನೀಡಿದ್ದಾರೆ. ಇದು ಗುರುತರ ಅಪರಾಧ ಎಂದು ಪೊಲೀಸರು ಹೇಳಿದ್ದಾರೆ. ವಿಡಿಯೋ ಕೆಳಗಿದೆ ನೋಡಿ
(ಒನ್ ಇಂಡಿಯಾ ಸುದ್ದಿ)












Click it and Unblock the Notifications