ತಮಿಳುನಾಡು ಚುನಾವಣೆ; ಗೆಲುವಿನ ನಿರೀಕ್ಷೆಯಲ್ಲಿ ಡಿಎಂಕೆಯಿಂದ ಭರವಸೆಯ ಮಹಾಪೂರ
ಚೆನ್ನೈ, ಮಾರ್ಚ್ 13: ವಿಧಾನಸಭೆ ಚುನಾವಣೆಗೆ ತಮಿಳುನಾಡಿನಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಕಣಕ್ಕಿಳಿಯಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ವಿವಿಧ ಪಕ್ಷಗಳು ಬಿಡುಗಡೆಗೊಳಿಸಿವೆ. ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ) ಶನಿವಾರ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಸುಮಾರು 500 ಭರವಸೆಗಳನ್ನು ನೀಡಿದೆ.
ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಶನಿವಾರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್, ಮಹಿಳೆಯರಿಗೆ ಉಚಿತ ಸ್ಥಳೀಯ ಸಾರಿಗೆ ಸೌಲಭ್ಯ, ಸ್ಥಳೀಯರಿಗೆ 75% ಉದ್ಯೋಗ ಮೀಸಲಾತಿ, ತೈಲ ಬೆಲೆ ಇಳಿಕೆ, ಹಿಂದೂ ದೇಗುಲಗಳಿಗೆ ಭೇಟಿ ನೀಡುವ ಸುಮಾರು ಒಂದು ಲಕ್ಷ ಜನರಿಗೆ 25 ಸಾವಿರ ರೂವರೆಗೂ ಆರ್ಥಿಕ ಸಹಾಯ... ಹೀಗೆ ಹಲವು ಭರವಸೆಗಳನ್ನು ಪಕ್ಷದಿಂದ ನೀಡಲಾಗಿದೆ.
ರಾಜ್ಯದಲ್ಲಿ ಎಐಎಡಿಎಂಕೆಗೆ ಕಠಿಣ ಸವಾಲು ನೀಡಲು ಸಜ್ಜಾಗಿರುವ ಡಿಎಂಕೆ, 234 ಕ್ಷೇತ್ರಗಳಲ್ಲಿ 180 ಕ್ಷೇತ್ರಗಳಲ್ಲಿ ಪ್ರತಿನಿಧಿಸುತ್ತಿದೆ. ಕಾಂಗ್ರೆಸ್ ಜೊತೆಗಿನ ಮೈತ್ರಿಯಲ್ಲಿ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದೆ. ಕಾಂಗ್ರೆಸ್ ಸದ್ಯ 25 ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದೆ.

ಡಿಎಂಕೆ ಅಧಿಕಾರಕ್ಕೆ ಬಂದರೆ, ಮುಖ್ಯವಾಗಿ ಸ್ಥಳೀಯರಿಗೆ ಉದ್ಯೋಗದಲ್ಲಿ 75% ಮೀಸಲಾತಿ ನೀಡಲಾಗುತ್ತದೆ ಎಂದು ಘೋಷಿಸಿದೆ. ಪ್ರಸ್ತುತ ದೇಶಾದ್ಯಂತ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದು, ಡಿಎಂಕೆ ಅಧಿಕಾರ ಪಡೆದರೆ ಪೆಟ್ರೋಲ್ ಮೇಲೆ 5ರೂ ಹಾಗೂ ಡೀಸೆಲ್ ಮೇಲೆ 4ರೂ ಕಡಿತಗೊಳಿಸುವುದಾಗಿ ಭರವಸೆ ನೀಡಿದೆ. ಅಡುಗೆ ಅನಿಲದ ಮೇಲೆ 100ರೂ ಸಬ್ಸಿಡಿ ನೀಡುವುದಾಗಿ ತಿಳಿಸಿದೆ.
ಸರ್ಕಾರಿ ನೌಕರಿಯಲ್ಲಿ ಮಹಿಳೆಯರಿಗಿರುವ ಮೀಸಲಾತಿಯನ್ನು 30% ಇಂದ 40%ಗೆ ಏರಿಸುವುದಾಗಿ ತಿಳಿಸಿದ್ದು, ಹಿಂದೂ ದೇಗುಲಗಳ ಪುನರ್ ಪ್ರತಿಷ್ಠಾಪನೆಗೆ 1000 ಕೋಟಿ ರೂ ಹಾಗೂ ಮಸೀದಿ, ಚರ್ಚ್ ಪುನರ್ ಪ್ರತಿಷ್ಠಾಪನೆಗೆ 200 ಕೋಟಿ ರೂಪಾಯಿ ಮೀಸಲಿಡುವುದಾಗಿ ತಿಳಿಸಿದೆ.
ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೆ 12ನೇ ಮಾರ್ಚ್‌ರಂದು ಗೆಜೆಟ್ ಅಧಿಸೂಚನೆ ಪ್ರಕಟವಾಗಲಿದೆ. 19ನೇ ಮಾರ್ಚ್ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 20 ಮಾರ್ಚ್ ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮಾರ್ಚ್ 22 ಕೊನೆ ದಿನವಾಗಿದೆ. ಏಪ್ರಿಲ್ 6ರಂದು ತಮಿಳುನಾಡಿನ ಎಲ್ಲ 234 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟ ಹಾಗೂ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟಗಳು ಪ್ರಮುಖವಾಗಿ ಸೆಣಸಾಟ ನಡೆಸುವ ನಿರೀಕ್ಷೆಯಿದೆ.












Click it and Unblock the Notifications