Video: ಮೇಕೆದಾಟು ವಿಚಾರದಲ್ಲಿ ನಾವು ತಮಿಳುನಾಡು ಪರ ಎಂದ ಅಣ್ಣಾಮಲೈ!
ಚೆನ್ನೈ, ಜುಲೈ 16: ತಮಿಳುನಾಡು ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಕರ್ನಾಟಕಕ್ಕೆ ಉಲ್ಟಾ ಹೊಡೆದಿದ್ದಾರೆ. ಮೇಕೆದಾಟು ವಿಚಾರದಲ್ಲಿ ನಾವು ತಮಿಳುನಾಡಿನ ಪರ ನಿಲ್ಲುತ್ತೇವೆ ಎಂದು ಮಾತನಾಡಿದ್ದಾರೆ.
"ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಬಿಜೆಪಿಯು ರಾಜ್ಯ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಲಿದೆ. ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ನಾವು ಸ್ಪಷ್ಟವಾಗಿದ್ದೇವೆ. ಈ ವಿಷಯದಲ್ಲಿ ನಾವು ಯಾವುದೇ ಕಾರಣಕ್ಕೂ ರಾಜಕೀಯ ಮಾಡುವುದಿಲ್ಲ," ಎಂದು ಹೇಳಿದ್ದಾರೆ.
Recommended Video

"ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವೇ ಆಡಳಿತದಲ್ಲಿ ಇರಬಹುದು. ಆದರೆ ತಮಿಳುನಾಡು ವಿಚಾರ ಅಂತಾ ಬಂದಾಗ ರಾಜ್ಯ ಬಿಜೆಪಿಯು ನಮ್ಮ ರೈತರ ಪರ ನಿಲ್ಲುತ್ತದೆ. ಈ ಬಗ್ಗೆ ನಾವು ಸ್ಪಷ್ಟ ನಿಲುವು ಹೊಂದಿದ್ದೇವೆ," ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಹೇಳಿದ್ದಾರೆ.

ಸರ್ವಪಕ್ಷ ಸಭೆಯಲ್ಲಿ ಸರ್ಕಾರಕ್ಕೆ ಬಿಜೆಪಿ ಶಾಸಕರ ಬೆಂಬಲ:
"ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ನಡೆಸಿದ ಸರ್ವಪಕ್ಷ ಸಭೆಯಲ್ಲಿ ಇಬ್ಬರು ಹಿರಿಯ ಬಿಜೆಪಿ ನಾಯಕರು ಕೂಡ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಮೇಕೆದಾಟು ಅಣೆಕಟ್ಟು ಯೋಜನೆ ವಿಷಯದಲ್ಲಿ ರಾಜ್ಯ ಬಿಜೆಪಿಯು ಸರ್ಕಾರದ ಪರವಾಗಿ ನಿಲ್ಲುತ್ತದೆ. ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿನ ರೈತರು ಕಾವೇರಿ ನೀರಿನಲ್ಲಿ ತಮ್ಮ ಪಾಲನ್ನು ಪಡೆಯಬೇಕು ಎಂದುಕೊಂಡಿದ್ದಾರೆ," ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ತಿಳಿಸಿದ್ದಾರೆ.
ತಮಿಳುನಾಡು ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದ ಎಂ ಬಿ ಪಾಟೀಲ್:
ಕರ್ನಾಟಕದಲ್ಲಿ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸುವುದಕ್ಕೆ ತಮಿಳುನಾಡು ಸರ್ಕಾರದ ಅನುಮತಿ ಕೇಳಬೇಕೇ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಎಂ ಬಿ ಪಾಟೀಲ್ ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಜಾರಿಗೊಳಿಸುವುದರಿಂದ ತಮಿಳುನಾಡಿಗೂ ಸಹ ಅನುಕೂಲವಾಗಲಿದೆ ಎಂದರು. ಇಂಥ ಸಂದರ್ಭದಲ್ಲಿ ತಮಿಳುನಾಡು ವಾದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅದರ ಬದಲಿಗೆ ಕಾನೂನಾತ್ಮಕ ಹಾಗೂ ತಾಂತ್ರಿಕವಾಗಿ ಯೋಜನೆ ಮುಂದುವರಿಸುವಂತೆ ಆಗ್ರಹಿಸಿದ್ದಾರೆ.
ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕು:
ಮೇಕೆದಾಟು ಯೋಜನೆ ಎಂಬುದು ನಮ್ಮ ರಾಜ್ಯದ ಹಕ್ಕು. ತಮಿಳುನಾಡು ಈ ವಿಷಯದಲ್ಲಿ ತಕರಾರು ತೆಗೆಯುವುದಕ್ಕೆ ನಮ್ಮ ರಾಜ್ಯದವರು ತೆಲೆ ಕೆಡಿಸಿಕೊಳ್ಳಬೇಕಾಗಿಲ್ಲ. ನಮ್ಮ ರಾಜ್ಯ ಸರ್ಕಾರ ಮೊದಲಿನಂತೆ ಮುಂದುವರಿಯಬೇಕು. ಆ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಕಾಂಗ್ರೆಸ್ ಪಕ್ಷವು ಈ ಯೋಜನೆ ಜಾರಿಗೆ ಸಂಪೂರ್ಣ ಸಹಕಾರ ಕೊಡುತ್ತದೆ. ನಾನೂ ಕೂಡಾ ಮಾಜಿ ನೀರಾವರಿ ಸಚಿವನಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ಮಾಜಿ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.












Click it and Unblock the Notifications