ಲೋಕಸಭೆ ಚುನಾವಣೆ ಬಗ್ಗೆ ಸೂಪರ್ ಸ್ಟಾರ್ ರಜನಿ ಮಹತ್ವದ ಘೋಷಣೆ
ಚೆನ್ನೈ, ಫೆಬ್ರವರಿ 17: ಸೂಪರ್ ಸ್ಟಾರ್ ರಜನಿಕಾಂತ್ ಅವರು ಲೋಕಸಭೆ ಚುನಾವಣೆ 2019 ಕುರಿತಂತೆ ಮಹತ್ವದ ಘೋಷಣೆಯನ್ನು ಭಾನುವಾರದಂದು ಹೊರಡಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಭಾರಿ ನಿರಾಶೆ ಮೂಡಿಸಿದ್ದಾರೆ.
'ರಜನಿ ಮಕ್ಕಳ್ ಮಂದ್ರಂ(Rajini's people Forum) ಪಕ್ಷದ ಯಾವುದೇ ಸದಸ್ಯನಾಗಲೀ, ತಾವಾಗಲೀ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಯಾವುದೇ ರಾಜಕೀಯ ಪಕ್ಷ ಹಾಗೂ ಮೈತ್ರಿಕೂಟ ಬೆಂಬಲಿಸುವುದಿಲ್ಲ' ಎಂದಿದ್ದಾರೆ.

'ನನ್ನ ಪಕ್ಷದ ಫೋಟೋ, ಚಿಹ್ನೆಗಳನ್ನು ಯಾರೂ ತಮ್ಮ ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳಬಾರದು. ತಮಿಳುನಾಡಿನ ಮುಖ್ಯ ಸಮಸ್ಯೆಯೆಂದರೆ ನೀರಿನ ಕೊರತೆ. ಜನರು ಮತ ಚಲಾಯಿಸುವಾಗ ಬುದ್ಧಿವಂತಿಕೆ ಉಪಯೋಗಿಸಿಕೊಳ್ಳಬೇಕು. ಯಾರು ಕೇಂದ್ರದಲ್ಲಿ ಸುಸ್ಥಿರ ಸರ್ಕಾರ ರಚಿಸಬಲ್ಲರೋ, ಯಾರು ತಮಿಳುನಾಡಿನ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುತ್ತಾರೆ ಎಂಬ ನಂಬಿಕೆಯಿದೆಯೋ ಅಂಥವರಿಗೆ ಮತಚಲಾಯಿಸಿ ಎಂದು ಹೇಳಿದ್ದಾರೆ.
ಮೋದಿ ಅವರ ಅಭಿವೃದ್ಧಿಪರ ಯೋಜನೆಗಳನ್ನು ಹೊಗಳಿದ್ದ ರಜನಿ ಅವರು ಬಿಜೆಪಿ ಜತೆ ಉತ್ತಮ ಬಾಂಧವ್ಯ ಹೊಂದಿದ್ದರು. ಆದರೆ ಬಿಜೆಪಿ ವಿರುದ್ಧ ದನಿಯೆತ್ತಿದ್ದರು. ಎಐಎಡಿಎಂಕೆ ಹಾಗೂ ಬಿಜೆಪಿ ನಡುವಿನ ಮೈತ್ರಿ ಬಗ್ಗೆ ಸುದ್ದಿ ಬಂದಿರುವ ಬೆನ್ನಲ್ಲೇ ರಜನಿಕಾಂತ್ ಅವರು ಈ ನಿರ್ಧಾರ ಕೈಗೊಂಡಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಇನ್ನೊಂದೆಡೆ ಕಮಲ್ ಹಾಸನ್ ಅವರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಮಕ್ಕಳ್ ನೀತಿ ಮೈಯಂ ಪಕ್ಷವು ಸ್ಪರ್ಧಿಸಲಿದ್ದು, ಸಮಾನ ಮನಸ್ಕರ ಜತೆ ಮೈತ್ರಿಗೆ ಸಿದ್ಧ ಎಂದಿದ್ದಾರೆ.












Click it and Unblock the Notifications