"ಡಿಎಂಕೆಗೆ ರಾಜೀನಾಮೆ ನೀಡುತ್ತಿಲ್ಲ, ಕುಟುಂಬದಲ್ಲಿ ಒಡಕಿಲ್ಲ"
ಚೆನ್ನೈ, ಜ.4: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಕುಟುಂಬದಲ್ಲಿ ಮತ್ತೆ ಅಧಿಕಾರಕ್ಕಾಗಿ ಒಡಕು ಮೂಡಿದೆ, ಪಕ್ಷದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ಸ್ಟಾಲಿನ್ ಬೆದರಿಕೆ ಹಾಕಿದ್ದಾರೆ ಎಂಬ ವರದಿಗಳನ್ನು ಸ್ಟಾಲಿನ್ ಅಲ್ಲಗೆಳೆದಿದ್ದಾರೆ. ನಾನು ಅನ್ಬಳಗನ್ ಸ್ಥಾನವನ್ನು ಬಯಸಿಲ್ಲ, ರಾಜೀನಾಮೆಯನ್ನು ನೀಡುತ್ತಿಲ್ಲ ಎಂದು ಸ್ಟಾಲಿನ್ ಘೋಷಿಸಿದ್ದಾರೆ.
ಕೆ ಅನ್ಬಳಗನ್ ಅವರು ಹೊಂದಿರುವ ಡಿಎಂಕೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡದಿದ್ದರೆ ತಮ್ಮ ಬೆಂಬಲಿಗರೊಂದಿಗೆ ಶೀಘ್ರದಲ್ಲೇ ಪಕ್ಷ ತೊರೆಯಲಾಗುವುದು. ಜ.7ರಂದು ಪದಾಧಿಕಾರಿಗಳ ಸಭೆ ಕರೆಯುವುದಾಗಿ ಸ್ಟಾಲಿನ್ ಹೇಳಿದ್ದಾರೆ. ಇದರಿಂದ ಕರುಣಾನಿಧಿಗೆ ಭಾರಿ ಹಿನ್ನಡೆಯಾಗಿದ್ದು, ವಿಧಾನಸಭೆ ಚುನಾವಣೆಗೂ ಮುನ್ನವೇ ಮುಜುಗರ ಅನುಭವಿಸುವಂತಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. [ಶಾ ಕಾರ್ಯತಂತ್ರ ಶುರು]

ಇದಕ್ಕೆ ಪ್ರತಿಕ್ರಿಯಿಸಿರುವ ಸ್ಟಾಲಿನ್, ನಮ್ಮ ಕುಟುಂಬಕ್ಕೆ ಕಪ್ಪು ಮಸಿ ಬಳಿಯಲು ಯಾರೋ ಕುತಂತ್ರ ನಡೆಸಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ಒಡಕಿಲ್ಲ. ಪಕ್ಷದ ಕಾರ್ಯಕರ್ತರು ಇಂಥ ಗಾಳಿಸುದ್ದಿಗೆ ಕಿವಿಗೊಡಬಾರದು ಎಂದಿದ್ದಾರೆ. [ಬಿಜೆಪಿಗೆ 'ನೋ', ಕಾಂಗ್ರೆಸ್ಸಿಗೆ 'ಎಸ್' ಎಂದ ಖುಷ್ಬೂ]
ಜ.7ರಂದು ಪಕ್ಷದ ರಾಜ್ಯಾಧ್ಯಕ್ಷ , ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಪದಾಧಿಕಾರಿಗಳ ನೇಮಕಾತಿಗೆ ಸಭೆ ಕರೆಯಲಾಗಿದೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ನಂತರ ಪಕ್ಷವನ್ನು ಮುನ್ನಡೆಸಬಲ್ಲ ಸಮರ್ಥ ನಾಯಕನ ಕೊರತೆಯನ್ನು ಎದುರಿಸುತ್ತಿದೆ. ಡಿಎಂಕೆ ಕಲಹದ ಲಾಭ ಪಡೆದು ಎಐಎಡಿಎಂಕೆ ರಾಜಕೀಯ ಲಾಭ ಪಡೆದುಕೊಳ್ಳುತ್ತಿದೆ.
ಹಾಗೆ ನೋಡಿದರೆ ಕರುಣಾನಿಧಿ ಕುಟುಂಬದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆಯುವುದು ಹೊಸತೇನಲ್ಲ. ಈ ಹಿಂದೆ ಸೂಕ್ತ ಸ್ಥಾನಮಾನ ಸಿಗದ ಕಾರಣ ಕರುಣಾನಿಧಿ ಅವರ ಮತ್ತೊಬ್ಬ ಪುತ್ರ ಎಂ.ಕೆ ಅಳಗಿರಿ ಡಿಎಂಕೆಯಿಂದ ಹೊರ ನಡೆದಿದ್ದರು. ಈಗ ಸ್ಟಾಲಿನ್ ಅವರು ಉನ್ನತ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ. ಸದ್ಯಕ್ಕೆ ಯಾವಾಗ ಬೇಕಾದರೂ ಸ್ಫೋಟಗೊಳ್ಳಬಹುದಾದ ಬಲೂನಿನಂತೆ ಡಿಎಂಕೆ ಪಕ್ಷ ಗೋಚರಿಸುತ್ತಿದೆ. (ಪಿಟಿಐ)












Click it and Unblock the Notifications