ಫೆ.7ಕ್ಕೆ ಚೆನ್ನೈಗೆ ಶಶಿಕಲಾ; ಬದಲಾದ ರಾಜಕೀಯ ಚಿತ್ರಣ?
ಚೆನ್ನೈ, ಫೆಬ್ರುವರಿ 03: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಅವಧಿ ಪೂರೈಸಿರುವ ಎಐಎಡಿಎಂಕೆ ಉಚ್ಚಾಟಿತ ನಾಯಕಿ, ಮಾಜಿ ಸಿಎಂ ದಿ. ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಇದೇ ಫೆಬ್ರುವರಿ 7ರಂದು ತಮಿಳುನಾಡಿಗೆ ಮರಳಲಿದ್ದಾರೆ. ಆದರೆ ಅವರು ತಮಿಳುನಾಡಿಗೆ ಮರಳುತ್ತಿರುವ ಸಂಗತಿ ರಾಜ್ಯ ರಾಜಕೀಯದ ಚಿತ್ರಣ ಬದಲಿಸುವಂತೆ ಕಾಣುತ್ತಿದೆ.
ಶಶಿಕಲಾ ಅವರು ಬಿಡುಗಡೆಯಾಗುತ್ತಿದ್ದಂತೆ, ಅವರನ್ನು ಅದ್ಧೂರಿಯಾಗಿ ಸ್ವಾಗತಿಸಬೇಕೆಂದು ಶಶಿಕಲಾ ಪರ ಕಾರ್ಯಕರ್ತರು ತಮಿಳುನಾಡಿನಲ್ಲಿ ಕೆಲವು ತಿಂಗಳ ಹಿಂದೆ ಭಾರೀ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಇದೀಗ ಫೆಬ್ರುವರಿ 7ರಂದು ಅವರು ಮರಳಲಿದ್ದು, ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಮೂಲಗಳ ಪ್ರಕಾರ ಫೆಬ್ರುವರಿ 7ರಂದು ತಮಿಳುನಾಡಿಗೆ ಪ್ರಯಾಣ ಬೆಳೆಸಲಿರುವ ಶಶಿಕಲಾ ನಟರಾಜನ್ ಮೊದಲು ಚೆನ್ನೈನಲ್ಲಿನ ಜಯಲಲಿತಾ ಅವರ ಸ್ಮಾರಕಕ್ಕೆ ಭೇಟಿ ನೀಡಲಿರುವರು ಎನ್ನಲಾಗಿದೆ. ಆದರೆ ಇದೇ ಸಮಯದಲ್ಲಿ ಸ್ಮಾರಕವನ್ನು ಮುಚ್ಚಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಶಶಿಕಲಾ ಬಿಡುಗಡೆಯಾದ ದಿನವೇ ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಅವರು ಜಯಲಲಿತಾ ಸ್ಮಾರಕವನ್ನು ಉದ್ಘಾಟನೆ ಮಾಡಿದ್ದರು.

ಬಾಕಿ ಉಳಿದಿರುವ ಕೆಲಸ ಪೂರೈಸಲು ಸ್ಮಾರಕವನ್ನು ಮುಚ್ಚಿರುವುದಾಗಿ ಲೋಕೋಪಯೋಗಿ ಇಲಾಖೆ ತಿಳಿಸಿದೆ. ಆದರೆ ಸ್ಮಾರಕವನ್ನು ಹೀಗೇ ಏಕಾಏಕಿ ಮುಚ್ಚಿರುವ ಕುರಿತು ಪ್ರಶ್ನೆಗಳು ಎದ್ದಿವೆ. ಇನ್ನೂ ಸ್ಮಾರಕದ ಕೆಲಸ ಪೂರ್ಣಗೊಂಡಿಲ್ಲ ಎಂದ ಮೇಲೆ ಅದನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡುವ ಅವಸರವಾದರೂ ಏನಿತ್ತು ಎಂದು ಕೇಳಲಾಗಿದೆ. ಎಐಎಡಿಎಂಕೆ ಧ್ವಜವನ್ನು ಶಶಿಕಲಾ ಅವರು ತಮ್ಮ ಕಾರಿಗೆ ಬಳಸಿಕೊಂಡಿದ್ದಕ್ಕೆ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಕೂಡ ಶಾಕ್ ನಲ್ಲಿದ್ದರು ಎನ್ನಲಾಗಿದೆ.
ಈಚೆಗೆ ಶಶಿಕಲಾ ಅವರಿಗೆ ಸ್ವಾಗತ ಕೋರಿ ಬ್ಯಾನರ್ ಹಾಕಿದ್ದಕ್ಕೆ ಎಐಎಡಿಎಂಕೆ ಸದಸ್ಯರೊಬ್ಬರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಸಂಗತಿಯೂ ನಡೆದಿತ್ತು. ಈ ಎಲ್ಲಾ ಅಂಶಗಳು ರಾಜ್ಯ ರಾಜಕೀಯದ ಚಿತ್ರಣ ಬದಲಾಗುವುದರ ಮುನ್ಸೂಚನೆ ನೀಡಿದಂತಿವೆ.












Click it and Unblock the Notifications