ಚಲಿಸುವ ಬಸ್ ನಲ್ಲಿ ರೌಡಿಯ ಭೀಕರ ಕೊಲೆ ಮಾಡಿದ ಗುಂಪು
ತಿರುವಣ್ಣಾಮಲೈ (ತಮಿಳುನಾಡು), ಸೆಪ್ಟೆಂಬರ್ 28: ಕಾಂಚೀಪುರಂನಲ್ಲಿ ಒಂದು ಕಾಲಕ್ಕೆ ಡಾನ್ ಆಗಿದ್ದ್ ಶ್ರೀಧರ್ ಧನಪಾಲನ್ ನ ಇಪ್ಪತ್ತೆಂಟು ವರ್ಷದ ಸಹಚರನೊಬ್ಬನನ್ನು ಶನಿವಾರ ತಮಿಳುನಾಡಿನ ಚೆಯ್ಯಾರ್ ನಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿ ಕೊಲೆ ಮಾಡಲಾಗಿದೆ. ಸತೀಶ್ ಕುಮಾರ್ ಮೃತ ವ್ಯಕ್ತಿ.
ಚೆಯ್ಯಾರ್ ನ ಕಣ್ಣಿ ನಗರ್ ಜಂಕ್ಷನ್ ನಲ್ಲಿ ಟೀ ಅಂಗಡಿಯಲ್ಲಿ ಚಹಾ ಕುಡಿಯುತ್ತಿದ್ದ. ಆ ವೇಳೆಗೆ ಮಾರಕಾಸ್ತ್ರಗಳನ್ನು ಹಿಡಿದು ಬಂದ ತಂಡವು ಸತೀಶ್ ಕುಮಾರ್ ನನ್ನು ಸುತ್ತುವರಿದಿದೆ. ಆ ನಂತರ ತಂಡದಲ್ಲಿದ್ದ ವ್ಯಕ್ತಿಯೊಬ್ಬ ದಾಳಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗ ಸತೀಶ್ ಓಡಲು ಆರಂಭಿಸಿದ್ದಾನೆ. ಚಲಿಸುತ್ತಿದ್ದ ಮಿನಿ ಬಸ್ ಗೆ ಹತ್ತಿಕೊಂಡಿದ್ದಾನೆ. ಗುಂಪಿನಿಂದ ತಪ್ಪಿಸಿಸಲು ಬಸ್ ಚಾಲಕ ಯತ್ನಿಸಿದ್ದಾನೆ. ಆದರೂ ದುಷ್ಕರ್ಮಿಗಳು ಒಳನುಗ್ಗಿ, ಎಲ್ಲ ಪ್ರಯಾಣಿಕರು ನೋಡುವಾಗಲೇ ಸತೀಶ್ ಕುಮಾರ್ ರ ತಲೆಗೆ ಹೊಡೆದು, ಕೊಲೆ ಮಾಡಿದ್ದಾರೆ. ಕೊಲೆ ಆದ ವ್ಯಕ್ತಿ ಹಾಗೂ ಕೊಲೆ ಮಾಡಿದ ತಂಡ ಕಾಂಚೀಪುರಂಗೆ ಸೇರಿದ್ದು. ಸತೀಶ್ ಕುಮಾರ್ ವಿರುದ್ಧ ಕೊಲೆಯತ್ನದ ಎರಡು ಪ್ರಕರಣ ಇದೆ.

ಸತೀಶ್ ಕುಮಾರ್ ಕಾಂಚೀಪುರಂನ ಶ್ರೀಧರನ್ ಧನಪಾಲನ್ ತಂಡದವನು. ಎರಡು ವರ್ಷಗಳ ಹಿಂದೆ ಶ್ರೀಧರನ್ ಕಾಂಬೋಡಿಯಾದಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದ. ಶ್ರೀಧರನ್ ಸಾವಿನ ನಂತರ ದಿನೇಶ್ ಗುಂಪಿನ ನೇತೃತ್ವ ವಹಿಸಿದ್ದ. ಆದರೆ ದಿನೇಶ್ ಹಾಗೂ ಥನಿಕಾ ಜತೆಗೆ ತಿಕ್ಕಾಟ ಮಾಡಿಕೊಂಡು, ಸತೀಶ್ ಈಚೆಗೆ ಚೆಯ್ಯಾರ್ ಗೆ ಸ್ಥಳಾಂತರವಾಗಿದ್ದ.












Click it and Unblock the Notifications